ಡಿಮಿಟ್ರೊವ್ ಪುರುಷರ ಸಿಂಗಲ್ಸ್ ಚಾಂಪಿಯನ್

Update: 2017-08-21 18:25 GMT

ಸಿನ್ಸಿನಾಟಿ, ಆ.21: ಆಸ್ಟ್ರೇಲಿಯದ ನಿಕ್ ಕಿರ್ಗಿಯೊಸ್‌ರನ್ನು ನೇರ ಸೆಟ್‌ಗಳಿಂದ ಮಣಿಸಿರುವ ಗ್ರಿಗೊರ್ ಡಿಮಿಟ್ರೊವ್ ಎಟಿಪಿ ಸಿನ್ಸಿನಾಟಿ ಮಾಸ್ಟರ್ಸ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.

  ರವಿವಾರ ನಡೆದ ಪುರುಷರ ಸಿಂಗಲ್ಸ್‌ನ ಫೈನಲ್ ಪಂದ್ಯದಲ್ಲಿ ಬಲ್ಗೇರಿಯದ ಆಟಗಾರ ಡಿಮಿಟ್ರೊವ್ ಆಸೀಸ್‌ನ ಕಿರ್ಗಿಯೊಸ್‌ರನ್ನು 6-3, 7-5 ಸೆಟ್‌ಗಳ ಅಂತರದಿಂದ ಮಣಿಸಿದ್ದಾರೆ. ಈ ಮೂಲಕ ವೃತ್ತಿಜೀವನದಲ್ಲಿ ಮೊದಲ ಬಾರಿ ಮಾಸ್ಟರ್ಸ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ. ಏಳನೆ ಪ್ರಶಸ್ತಿಯನ್ನು ಗೆದ್ದುಕೊಂಡಿರುವ ಡಿಮಿಟ್ರೊವ್ 954,225 ಡಾಲರ್ ಬಹುಮಾನ ಮೊತ್ತವನ್ನು ಗೆದ್ದುಕೊಂಡಿದ್ದಾರೆ. ಈ ವರ್ಷದ ಕೊನೆಯ ಗ್ರಾನ್‌ಸ್ಲಾಮ್ ಯುಎಸ್ ಓಪನ್‌ಗಿಂತ ಮೊದಲು ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡಿದ್ದಾರೆ.

 ‘‘ಸಿನ್ಸಿನಾಟಿ ಪುರುಷರ ಸಿಂಗಲ್ಸ್ ಪ್ರಶಸ್ತಿಯನ್ನು ಜಯಿಸಿದ ಬಳಿಕ ನನ್ನ ಆತ್ಮವಿಶ್ವಾಸ ಇಮ್ಮಡಿಯಾಗಿದೆ. ಈ ಪ್ರಶಸ್ತಿಗಾಗಿ ತುಂಬಾ ಸಮಯದಿಂದ ಅಭ್ಯಾಸ ನಡೆಸುತ್ತಿದ್ದೆ. ನಾನು ಈತನಕ ಜಯಿಸಿರುವ ಅತ್ಯಂತ ದೊಡ್ಡ ಪ್ರಶಸ್ತಿ ಇದಾಗಿದೆ. ಇನ್ನೆರಡು ದಿನಗಳಲ್ಲಿ ಯುಎಸ್ ಓಪನ್‌ಗೆ ತಯಾರಿ ಆರಂಭಿಸುವೆ’’ ಎಂದು 11ನೆ ರ್ಯಾಂಕಿನ ಆಟಗಾರ ಡಿಮಿಟ್ರೊವ್ ಪ್ರತಿಕ್ರಿಯಿಸಿದ್ದಾರೆ.

ಡಿಮಿಟ್ರೋವ್ ಈ ವರ್ಷ ಮೂರನೆ ಪ್ರಶಸ್ತಿಯನ್ನು ಗೆದ್ದುಕೊಂಡರು. ಅವರು ಈಗಾಗಲೇ ಬ್ರಿಸ್ಬೇನ್ ಹಾಗೂ ಸೋಫಿಯಾ ಓಪನ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ. ಟೂರ್ನಿಯ ಕ್ವಾರ್ಟರ್‌ಫೈನಲ್‌ನಲ್ಲಿ ವಿಶ್ವದ ನಂ.1 ಆಟಗಾರ ರಫೆಲ್ ನಡಾಲ್‌ರನ್ನು ಮಣಿಸಿದ್ದ ಕಿರ್ಗಿಯೊಸ್ ಟೋಕಿಯೊದಲ್ಲಿ ಕಳೆದ ವರ್ಷ ತನ್ನ ಮೂರನೆ ಪ್ರಶಸ್ತಿಯನ್ನು ಜಯಿಸಿದ ಬಳಿಕ ಯಾವುದೇ ಪ್ರಶಸ್ತಿ ಜಯಿಸಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News