ಪಾಕಿಸ್ತಾನದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಬಾಗಿಲು ತೆರೆದಿದೆ: ಪಿಸಿಬಿ

Update: 2017-08-21 18:29 GMT

ಲಾಹೋರ್, ಆ.21: ಭದ್ರತಾ ಕಾರಣದಿಂದಾಗಿ ಕಳೆದ ಕೆಲವು ವರ್ಷಗಳಿಂದ ಸ್ವದೇಶದಲ್ಲಿ ಕ್ರಿಕೆಟ್ ಪಂದ್ಯಗಳನ್ನಾಡದೇ ಏಕಾಂಗಿಯಾ ಗಿದ್ದ ಪಾಕಿಸ್ತಾನ ಕ್ರಿಕೆಟ್ ತಂಡ ಸೆಪ್ಟಂಬರ್‌ನಿಂದ ವಿವಿಧ ತಂಡಗಳೊಂದಿಗೆ ಅಂತಾರಾಷ್ಟ್ರೀಯ ಪಂದ್ಯವನ್ನಾಡಲಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ)ಸೋಮವಾರ ಘೋಷಿಸಿದೆ.

 ಸೆಪ್ಟಂಬರ್‌ನಲ್ಲಿ ವಿಶ್ವ ಇಲೆವೆನ್ ಟೂರ್‌ಗೆ ಪಾಕ್ ಆತಿಥ್ಯವಹಿಸಿಕೊಳ್ಳಲಿದೆ. ಅಕ್ಟೋಬರ್‌ನಲ್ಲಿ ಟ್ವೆಂಟಿ-20 ಸರಣಿಯನ್ನಾಡಲು ಶ್ರೀಲಂಕಾ ತಂಡ ಪಾಕ್‌ಗೆ ಭೇಟಿ ನೀಡಲಿದೆ. ಒಂದು ತಿಂಗಳ ನಂತರ ವೆಸ್ಟ್‌ಇಂಡೀಸ್ ಟ್ವೆಂಟಿ-20 ಸರಣಿಯನ್ನಾಡಲಿದೆ.

‘‘ನಾವು ಸಕಾರಾತ್ಮಕ ಸಂಕೇತ ಪಡೆದಿದ್ದು, ಪಾಕಿಸ್ತಾನದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಬಾಗಿಲು ತೆರೆದಿದೆ. ಯುಎಇಯಲ್ಲಿ ಶ್ರೀಲಂಕಾ ವಿರುದ್ಧ ಪೂರ್ಣ ಸರಣಿ ಆಡಿದ ಬಳಿಕ ಲಾಹೋರ್‌ನಲ್ಲಿ ಟ್ವೆಂಟಿ-20 ಸರಣಿಯನ್ನಾಡಲಿದ್ದೇವೆ. ವಿಶ್ವ ಇಲೆವೆನ್ ಆಟಗಾರರನ್ನು ಶೀಘ್ರವೇ ಘೋಷಿಸಲಿದ್ದು, ಇಂಗ್ಲೆಂಡ್‌ನ ಮಾಜಿ ಕೋಚ್ ಆ್ಯಂಡಿ ಫ್ಲವರ್ ತಂಡವನ್ನು ನಿಭಾಯಿಸಲಿದ್ದಾರೆ ’’ ಎಂದು ಪಿಸಿಬಿ ಅಧ್ಯಕ್ಷ ನಜಮ್ ಸೇಥಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

2009ರಲ್ಲಿ ಲಾಹೋರ್‌ನಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡ ಪ್ರಯಾಣಿಸುತ್ತಿದ್ದ ಬಸ್ ಮೇಲೆ ದಾಳಿ ನಡೆಸಿದ್ದ ಉಗ್ರಗಾಮಿಗಳು 8 ಜನರನ್ನು ಹತ್ಯೆಗೈದಿದ್ದರು. ಈ ಘಟನೆಯಲ್ಲಿ ಶ್ರೀಲಂಕಾದ ಏಳು ಆಟಗಾರರಿಗೆ ಗಾಯವಾಗಿತ್ತು. ಈ ದಾಳಿಯ ಬಳಿಕ ಪಾಕಿಸ್ತಾನ ತಂಡ 2015ರಲ್ಲಿ ಝಿಂಬಾಬ್ವೆ ವಿರುದ್ಧ ಏಕದಿನ ಸರಣಿಯ ಆತಿಥ್ಯವಹಿಸಿಕೊಂಡಿತ್ತು. ಬಾಂಗ್ಲಾದೇಶ, ವೆಸ್ಟ್ ಇಂಡೀಸ್, ಶ್ರೀಲಂಕಾ ಹಾಗೂ ಐರ್ಲೆಂಡ್ ತಂಡಗಳು ಭದ್ರತೆಯ ಭೀತಿಯನ್ನು ಮುಂದಿಟ್ಟುಕೊಂಡು ಪಾಕ್‌ಗೆ ಪ್ರವಾಸಕೈಗೊಳ್ಳಲು ಹಿಂದೇಟು ಹಾಕಿದ್ದವು.

ಅಂತಾರಾಷ್ಟ್ರೀಯ ಕ್ರಿಕೆಟ್ ತಂಡಗಳು ಪಾಕ್‌ಗೆ ಪ್ರವಾಸಕೈಗೊಳ್ಳಲು ನಿರಾಕರಿಸಿದ ಹಿನ್ನೆಲೆಯಲ್ಲಿ ಪಾಕ್ ತಂಡ ಕಳೆದ 8 ವರ್ಷಗಳಿಂದ ತನ್ನ ದೇಶದಲ್ಲಿ ಆಡಬೇಕಾಗಿದ್ದ ಪಂದ್ಯಗಳನ್ನು ಯುಎಇಯಲ್ಲಿ ಆಡಿತ್ತು.

 ಕಳೆದ ಎರಡು ವರ್ಷಗಳಿಂದ ಪಾಕ್‌ನ ಭದ್ರತೆಯ ಪರಿಸ್ಥಿತಿ ನಿಧಾನವಾಗಿ ಸುಧಾರಿಸುತ್ತಿದ್ದು, ದೇಶದಲ್ಲಿ ಅಂತಾರಾಷ್ಟ್ರೀಯ ಕ್ರೀಡೆಗಳು ಮತ್ತೆ ನಡೆಯುವ ವಿಶ್ವಾಸ ಗರಿಗೆದರಿದೆ. ಮಾರ್ಚ್‌ನಲ್ಲಿ ಪಾಕ್ ಪಿಎಸ್‌ಎಲ್ ಟ್ವೆಂಟಿ-20 ಲೀಗ್ ಫೈನಲ್‌ನ್ನು ಯಶಸ್ವಿಯಾಗಿ ಆಯೋಜಿಸಿತ್ತು. ಇಂಗ್ಲೆಂಡ್ ಆಟಗಾರರಾದ ಡೇವಿಡ್ ಮಲಾನ್, ಕ್ರಿಸ್ ಜೋರ್ಡನ್, ವೆಸ್ಟ್‌ಇಂಡೀಸ್‌ನ ಡರೆನ ಸಮ್ಮಿ ಹಾಗೂ ಮರ್ಲಾನ್ ಸ್ಯಾಮುಯೆಲ್ಸ್, ದಕ್ಷಿಣ ಆಫ್ರಿಕದ ಮೊರ್ನೆ ವ್ಯಾನ್‌ವಿಕ್ ಹಾಗೂ ಝಿಂಬಾಬ್ವೆಯ ಸಿಯನ್ ವಿಲಿಯಮ್ಸ್ ಪಿಎಸ್‌ಎಲ್ ಟ್ವೆಂಟಿ-20 ಟೂರ್ನಿಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News