ನಾಯರ್ ಸಾಹಸ; ಭಾರತ ‘ಎ’ ತಂಡ ಜಯಭೇರಿ

Update: 2017-08-22 18:05 GMT

ಜೋಹಾನ್ಸ್‌ಬರ್ಗ್, ಆ.22: ನಾಯಕ ಕರುಣ್ ನಾಯರ್ ಅರ್ಧಶತಕದ(90) ನೆರವಿನಿಂದ ಭಾರತ ‘ಎ’ ತಂಡ ದಕ್ಷಿಣ ಆಫ್ರಿಕ ‘ಎ’ ವಿರುದ್ಧದ ಎರಡನೆ ಚತುರ್ದಿನ ಪಂದ್ಯದಲ್ಲಿ ಆರು ವಿಕೆಟ್‌ಗಳ ಜಯ ಸಾಧಿಸಿದೆ.

ಗೆಲುವಿಗೆ 224 ರನ್ ಗುರಿ ಪಡೆದಿದ್ದ ಭಾರತ ‘ಎ’ ತಂಡ 62.3 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 226 ರನ್ ಗಳಿಸಿತು. ಭಾರತ ಒಂದು ಹಂತದಲ್ಲಿ 55 ರನ್‌ಗೆ 2 ವಿಕೆಟ್ ಕಳೆದುಕೊಂಡು ಕಳಪೆ ಆರಂಭ ಪಡೆದಿತ್ತು.

ಆಗ ಮೂರನೆ ವಿಕೆಟ್‌ಗೆ 74 ರನ್ ಜೊತೆಯಾಟ ನಡೆಸಿದ ಆರಂಭಿಕ ಆಟಗಾರ ರವಿಕುಮಾರ್ ಸಮರ್ಥ್(55ರನ್, 90 ಎಸೆತ, 6 ಬೌಂಡರಿ) ಹಾಗೂ ನಾಯಕ ನಾಯರ್ ತಂಡವನ್ನು ಆಧರಿಸಿದರು.

ಉತ್ತಮ ಫಾರ್ಮ್ ಮುಂದುವರಿಸಿದ ಸಮರ್ಥ್ ಪಂದ್ಯದಲ್ಲಿ ಸತತ ಎರಡನೆ ಅರ್ಧಶತಕ ಬಾರಿಸಿದರು. ಮೊದಲ ಇನಿಂಗ್ಸ್ ನಲ್ಲಿ 77 ರನ್ ಗಳಿಸಿದ್ದ ಸಮರ್ಥ್ 2ನೆ ಇನಿಂಗ್ಸ್ ನಲ್ಲಿ 55 ರನ್ ಗಳಿಸಿ ಔಟಾದರು.

ಸಮರ್ಥ್ ಔಟಾದ ಬಳಿಕ ಬ್ಯಾಟಿಂಗ್‌ನ್ನು ಮುಂದುವರಿಸಿದ ನಾಯರ್ ನಾಲ್ಕನೆ ವಿಕೆಟ್‌ಗೆ ಅಂಕಿತ್ ಭಾವ್ನೆ ಅವರೊಂದಿಗೆ 93 ರನ್ ಜೊತೆಯಾಟ ನಡೆಸಿದ್ದಾರೆ. ನಾಯರ್ 144 ಎಸೆತಗಳಲ್ಲಿ 13 ಬೌಂಡರಿಗಳ ಸಹಿತ 90 ರನ್ ಗಳಿಸಿ ಫೆಲುಕ್ವಾವೊಗೆ ಔಟಾದರು. ಭಾವ್ನೆ ಅಜೇಯ 32 ರನ್ ಗಳಿಸಿದರು. ಹನುಮ ವಿಹಾರಿ ಬೌಂಡರಿ ಬಾರಿಸುವ ಮೂಲಕ ಭಾರತಕ್ಕೆ ಗೆಲುವು ತಂದರು.

ಇದಕ್ಕೆ ಮೊದಲು ದಕ್ಷಿಣ ಆಫ್ರಿಕ ತಂಡ ಎರಡನೆ ಇನಿಂಗ್ಸ್ ನಲ್ಲಿ 177 ರನ್‌ಗೆ ಆಲೌಟಾಗಿತ್ತು. ಅಂಕಿತ್ ರಾಜ್‌ಪೂತ್(3-15), ಶಹಬಾಝ್ ನದೀಮ್(3-47) ತಲಾ ಮೂರು ವಿಕೆಟ್‌ಗಳನ್ನು ಕಬಳಿಸಿದರು. ಕೃಷ್ಣಪ್ಪ ಗೌತಮ್(2-48)2 ವಿಕೆಟ್ ಪಡೆದರು. ದಕ್ಷಿಣ ಆಫ್ರಿಕದ ಪರ ಆರಂಭಿಕ ಆಟಗಾರ ಸ್ಟೀಫನ್ ಕುಕ್ ಅಜೇಯ 70 ರನ್ ಗಳಿಸಿದರು.

 ದಕ್ಷಿಣ ಆಫ್ರಿಕ ‘ಎ’ ತಂಡ ಮೊದಲ ಇನಿಂಗ್ಸ್‌ನಲ್ಲಿ 322 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಭಾರತ 276 ರನ್ ಗಳಿಸಿತ್ತು. ಮೊದಲ ಇನಿಂಗ್ಸ್‌ನಲ್ಲಿ ದ.ಆಫ್ರಿಕದ ಪರ ಸ್ಟೀಫನ್ ಕುಕ್ 98, ಏಡೆನ್ ಮಾರ್ಕಮ್ 74 ರನ್, ಡೇವಿಡ್ ವಿಲ್ಲರ್ 55 ರನ್ ಗಳಿಸಿದ್ದರು.

ಸಂಕ್ಷಿಪ್ತ ಸ್ಕೋರ್

►ದಕ್ಷಿಣ ಆಫ್ರಿಕ ‘ಎ’ ಮೊದಲ ಇನಿಂಗ್ಸ್: 322/10

►ಭಾರತ ‘ಎ’ ಮೊದಲ ಇನಿಂಗ್ಸ್: 276 ರನ್‌ಗೆ ಆಲೌಟ್

►ದಕ್ಷಿಣ ಆಫ್ರಿಕ ‘ಎ’ ಎರಡನೆ ಇನಿಂಗ್ಸ್: 177/10

►ಭಾರತ ‘ಎ’ ಎರಡನೆ ಇನಿಂಗ್ಸ್: 226/4

(ಕರುಣ್ ನಾಯರ್ 90, ಸಮರ್ಥ್ 55, ಭಾವ್ನೆ ಅಜೇಯ 32, ಪೀಟ್ 2-75)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News