ಜ್ಞಾನೇಂದರ್ ಗೆ ತಪ್ಪಿದ ಕಂಚು

Update: 2017-08-22 18:08 GMT

ಪ್ಯಾರಿಸ್, ಆ.22: ಭಾರತದ ಕುಸ್ತಿಪಟು ಜ್ಞಾನೇಂದರ್ ಇಲ್ಲಿ ನಡೆಯುತ್ತಿರುವ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಕಂಚು ಪದಕ ಗೆಲ್ಲುವಲ್ಲಿ ಎಡವಿದ್ದಾರೆ.

 ಇದರೊಂದಿಗೆ ಗ್ರೀಕೋ -ರೋಮನ್ ಕುಸ್ತಿ ವಿಭಾಗದಲ್ಲಿ ಭಾರತದ ಕುಸ್ತಿ ಪಟುಗಳ ಅಭಿಯಾನ ಕೊನೆಗೊಂಡಿದೆ. ಅವರು ಬರಿಗೈಯಲ್ಲಿ ತವರಿಗೆ ಮರಳುವಂತಾಗಿದೆ.

23ರ ಹರೆಯದ ಜ್ಞಾನೇಂದರ್ ಅವರು ಮೊದಲ ರೆಪೆಚೇಜ್ ಸ್ಪರ್ಧಾ ಕಣದಲ್ಲಿ ಈಜಿಪ್ಟ್ಟ್ ನ ಮುಸ್ತಫ ಹಸನ್ ಮುಹಮ್ಮದ್ ವಿರುದ್ದ 3-1 ಅಂತರದಲ್ಲಿ ಜಯ ಗಳಿಸಿದ್ದರು.

ಎರಡನೆ ಸ್ಪರ್ಧೆಯಲ್ಲಿ ಉಕ್ರೇನ್‌ನ ಡಿಮಿಟ್ರೊ ಸಿಂಬಾಲಿಯುಕ್ ವಿರುದ್ಧ 2-2 ಅಂತರದಲ್ಲಿ ಸಮಬಲ ಸಾಧಿಸಿದರೂ ಜ್ಞಾನೇಂದರ್‌ಗೆ ಕಂಚು ಒಲಿಯಲಿಲ್ಲ. ಡಿಮಿಟ್ರೊ ಕಂಚಿನ ಪದಕಕ್ಕೆ ಕೊರಳೊಡ್ಡಿದರು.

ಇದಕ್ಕೂ ಮೊದಲು ಜ್ಞಾನೇಂದರ್ ಅವರು ಚೀನಾದ ಲಿಬಿನ್ ಡಿಂಗ್ ಅವರನ್ನು ಮಣಿಸಿ ಪ್ರಿ ಕ್ವಾರ್ಟರ್ ಫೈನಲ್ ತಲುಪಿದ್ದರು. ಆದರೆ ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಕಝಕಿಸ್ತಾನದ ಮಿರಾಂಬೆಕ್ ಯಿನಾಗುಲಾವ್ ವಿರುದ್ಧ 0-9 ಅಂತರದಲ್ಲಿ ಸೋಲುಂಡರು.

  ಮಿರಾಂಬೆಕ್ ಅವರು ಫೈನಲ್‌ಗೇರಿದ ಹಿನ್ನೆಲೆಯಲ್ಲಿ ಜ್ಞಾನೇಂದರ್ ಅವರಿಗೆ ರೆಪೆಚೇಜ್‌ನಲ್ಲಿ ಕಂಚಿಗಾಗಿ ಸ್ಪರ್ಧಿಸುವ ಅವಕಾಶ ದೊರೆಯಿತು.

ಭಾರತದ ಇತರ ಕುಸ್ತಿ ಪಟುಗಳಾದ ರವೀಂದರ್(66 ಕೆ.ಜಿ), ಹರ್‌ಪ್ರೀತ್ ಸಿಂಗ್(80 ಕೆ.ಜಿ) ಮತ್ತು ನವೀನ್(130 ಕೆ.ಜಿ) ಅವರು ಸೋತು ನಿರ್ಗಮಿಸಿದ್ದಾರೆ.

ರವೀಂದರ್ ಅವರು ಸ್ವೀಡನ್‌ನ ಹುಸಾಮ್ ಒಮಾರೊ ವಿರುದ್ಧ 1-2 ಅಂತರದಲ್ಲಿ , ಹರ್‌ಪ್ರೀತ್ ಅವರು ಕಝಕಿಸ್ತಾನದ ಅಸ್ಖಾತ್ ಡಿಲ್ಮಿಖಾಮೆಡಾವ್ ವಿರುದ್ಧ 1-3 ಅಂತರದಲ್ಲಿ ಮತ್ತು ನವೀನ್ ಅವರು ಜರ್ಮನಿಯ ಎಡ್ವರ್ಡ್ ಪಾಪ್ ವಿರುದ್ಧ 1-2 ಅಂತರದಲ್ಲಿ ಸೋತು ನಿರ್ಗಮಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News