ಸಿಂಧು ಪ್ರಿ- ಕ್ವಾರ್ಟರ್ ಗೆ; ಪ್ರಣೀತ್ 2ನೆ ಸುತ್ತಿಗೆ

Update: 2017-08-22 18:18 GMT

ಗ್ಲಾಸ್ಗೋ, ಆ.22: ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಜಯಿಸಿದ ಭಾರತದ ಬ್ಯಾಡ್ಮಿಂಟನ್ ಮಹಿಳಾ ತಾರೆ ಪಿ.ವಿ.ಸಿಂಧು ಮತ್ತು ಸಿಂಗಾಪುರ ಓಪನ್ ಚಾಂಪಿಯನ್ ಬಿ. ಸಾಯಿ ಪ್ರಣೀತ್ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ಲ್ಲಿ ಗೆಲುವಿನೊಂದಿಗೆ ಶುಭಾರಂಭ ಮಾಡಿದ್ದಾರೆ.

ಮಂಗಳವಾರ ನಡೆದ ಮಹಿಳೆಯರ ಎರಡನೆ ಸುತ್ತಿನ ಸಿಂಗಲ್ಸ್ ಪಂದ್ಯದಲ್ಲಿ ಸಿಂಧು ಅವರು ದಕ್ಷಿಣ ಕೊರಿಯದ ಕಿಮ್ ಹ್ಯೂ ಮಿನ್ ವಿರುದ್ಧ 21-16, 21-14 ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ಪ್ರಿ-ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.

ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಎರಡು ಬಾರಿ ಕಂಚು ಜಯಿಸಿರುವ ಸಿಂಧು ಅವರು ಈ ಬಾರಿ ಮೊದಲ ಚಿನ್ನ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ.

ಸಾಯಿ ಪ್ರಣೀತ್‌ಗೆ ಜಯ: 15ನೆ ಶ್ರೇಯಾಂಕದ ಬಿ. ಸಾಯಿ ಪ್ರಣೀತ್ ಅವರು ಹಾಂಕಾಂಗ್‌ನ ವೇ ನ್ಯಾನ್ ವಿರುದ್ಧ ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲ್ಲಿ 21-18, 21-17 ಅಂತರದಲ್ಲಿ ಜಯ ಗಳಿಸಿದರು.

   ಕೇವಲ 48 ನಿಮಿಷಗಳ ಹೋರಾಟದಲ್ಲಿ ಸಾಯಿ ಪ್ರಣೀತ್ ಅವರು ಎದುರಾಳಿಯನ್ನು ಮಣಿಸಿದರು. ಇದೇ ವೇಳೆ ಅಜಯ್ ಜಯರಾಮ್ ಅವರು ಆಸ್ಟ್ರೀಯಾದ ಲುಕಾ ರ್ರಾಬೆರ್ ವಿರುದ್ಧ 21-14, 21-10 ಅಂತರದಲ್ಲಿ ಜಯ ಗಳಿಸಿದರು. ಕೇವಲ 31 ನಿಮಿಷಗಳಲ್ಲಿ ಜಯರಾಮ್ ವಿರುದ್ಧ ಎದುರಾಳಿಯ ಹೋರಾಟ ಅಂತ್ಯಗೊಂಡಿತು. ಹೈದರಾಬಾದ್‌ನ 25ರ ಹರೆಯದ ಆಟಗಾರ ಎರಡನೆ ಸುತ್ತಿನ ಪಂದ್ಯದಲ್ಲಿ ಇಂಡೋನೇಷ್ಯಾದ ಆ್ಯಂಟೊನಿ ಸಿನಿಸುಕಾ ಗಿಂಟಿಂಗ್ ಅವರನ್ನು ಎದುರಿಸಲಿದ್ದಾರೆ. ಗಿಂಟಿಂಗ್ ಅವರು 2014ರಲ್ಲಿ ನ್ಯಾನ್‌ಜಿಂಗ್ ಯುವ ಒಲಿಂಪಿಕ್ಸ್ ಮತ್ತು ಬಾಲಕರ ವಿಶ್ವ ಜೂನಿಯರ್ ಚಾಂಪಿಯಶಿಪ್‌ನ ಸಿಂಗಲ್ಸ್‌ನಲ್ಲಿ ಕಂಚು ಜಯಿಸಿದ್ದರು.

ಚೋಪ್ರಾ-ಸಿಕ್ಕಿಗೆ ಜಯ: ಮಿಕ್ಸಿಡ್ ಡಬಲ್ಸ್‌ನಲ್ಲಿ ಭಾರತದ ಪ್ರಣವ್ ಜೆರ್ರಿ ಚೋಪ್ರಾ ಮತ್ತು ಎನ್.ಸಿಕ್ಕಿ ಅವರು ಭಾರತದ -ಮಲೇಷ್ಯಾದ ಜೋಡಿ ಪ್ರಜಕ್ತಾ ಸಾವಂತ್ ಮತ್ತು ಯೋಗೇಂದ್ರನ್ ಕೃಷ್ಣನ್ ವಿರುದ್ಧ 21-12, 21-19 ಅಂತರದಲ್ಲಿ ಜಯ ಸಾಧಿಸಿದರು.

ಸುಮಿತ್-ಅಶ್ವಿನಿಗೆ ಸೋಲು: ಮಿಶ್ರ ಡಬಲ್ಸ್ ಪಂದ್ಯಗಳಲ್ಲಿ ಬಿ.ಸುಮೀತ್ ರೆಡ್ಡಿ ಮತ್ತು ಅಶ್ವಿನಿ ಪೊನ್ನಪ್ಪ, ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಮನೀಶಾ ಕೆ ಸೋಲು ಅನುಭವಿಸಿದ್ದಾರೆ.

ಸುಮೀತ್ ರೆಡ್ಡಿ ಮತ್ತು ಅಶ್ವಿನಿ ಅವರು ಚೀನಾದ ವಾಂಗ್ ಯಿಲ್ಯು ಮತ್ತು ಯುವಂಗ್ ಡಾಂಗ್‌ಪಿಂಗ್ ವಿರುದ್ಧ 17-21, 21-18, 5-21 ಅಂತರದಲ್ಲಿ ಸೋಲು ಅನುಭವಿಸಿದರು.

ಸಾತ್ವಿಕ್‌ಸಾಯಿರಾಜ್ ಮತ್ತು ಮನೀಶಾ ಅವರು ಡೆನ್ಮಾರ್ಕ್‌ನ ಮಥಾಯಿಸ್ ಕ್ರಿಶ್ಟಿಯನ್‌ಸೆನ್ ಮತ್ತು ಸಾರಾ ಥಿಗೆಸೆನ್ ವಿರುದ್ಧ 20-22, 18-21 ಅಂತರದಲ್ಲಿ ಸೋಲುಂಡರು.

ಮಹಿಳೆಯರ ಸಿಂಗಲ್ಸ್‌ನಲ್ಲಿ ರಾಷ್ಟ್ರೀಯ ಚಾಂಪಿಯನ್ ಋತುಪರ್ಣದಾಸ್ ಅವರು ಫಿನ್‌ಲ್ಯಾಂಡ್‌ನ ಅರಿ ಮಿಕ್ಕೆಲಾ ಮೊದಲ ಸುತ್ತಿನ ಪಂದ್ಯದಲ್ಲಿ ಗಾಯಗೊಂಡು ನಿವೃತ್ತರಾದ ಹಿನ್ನೆಲೆಯಲ್ಲಿ ಎರಡನೆ ಸುತ್ತು ತಲುಪಿದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News