ಸಿಂಹಳೀಯರ ಮೇಲೆ ಸವಾರಿ ಮುಂದುವರಿಸುವತ್ತ ಕೊಹ್ಲಿ ಪಡೆ ಚಿತ್ತ

Update: 2017-08-23 18:25 GMT

ಪಲ್ಲೆಕಲೆ, ಆ.23: ಪ್ರಸ್ತುತ ಭರ್ಜರಿ ಫಾರ್ಮ್ ಹಾಗೂ ಆತ್ಮವಿಶ್ವಾಸದ ಅಲೆಯಲ್ಲಿ ತೇಲುತ್ತಿರುವ ಟೀಮ್ ಇಂಡಿಯಾ ಗುರುವಾರ ಇಲ್ಲಿ ನಡೆಯಲಿರುವ ದ್ವಿತೀಯ ಏಕದಿನ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾದ ವಿರುದ್ಧ ಗೆಲುವಿನ ಓಟ ಮುಂದುವರಿಸಲು ಯೋಜನೆ ಹಾಕಿಕೊಂಡಿದೆ. ಟೆಸ್ಟ್ ಸರಣಿಯನ್ನು 3-0 ಅಂತರದಿಂದ ಗೆದ್ದುಕೊಂಡಿರುವ ಭಾರತ ಮೊದಲ ಏಕದಿನ ಪಂದ್ಯವನ್ನು 9 ವಿಕೆಟ್‌ಗಳಿಂದ ಗೆದ್ದುಕೊಂಡು ಸರಣಿಯಲ್ಲಿ ಶುಭಾರಂಭ ಮಾಡಿದೆ. ಶ್ರೀಲಂಕಾದ ಕಳಪೆ ಪ್ರದರ್ಶನದಿಂದ ಹತಾಶೆಗೊಂಡಿರುವ ಕ್ರಿಕೆಟ್ ಅಭಿಮಾನಿಗಳು ಟೀಮ್ ಬಸ್‌ನ್ನು ತಡೆದು ಕಳಪೆ ಪ್ರದರ್ಶನಕ್ಕೆ ಕಾರಣವೇನೆಂದು ತಿಳಿಸುವಂತೆ ಒತ್ತಾಯಿಸಿದ್ದರು. ಮುಖ್ಯ ಕೋಚ್ ನಿಕ್ ಪೊಥಾಸ್ ತಂಡದಲ್ಲಿ ಎಲ್ಲವೂ ಸರಿಯಿಲ್ಲ ಎಂದು ಹೇಳುವ ಮೂಲಕ ಟೀಮ್ ಮ್ಯಾನೇಜರ್ ಅಸಂಕ ಗುರುಸಿಂಘ ಅವರತ್ತ ಬೆಟ್ಟು ಮಾಡಿದ್ದಾರೆ.

ಮೊದಲ ಏಕದಿನ ಪಂದ್ಯದಲ್ಲಿ ಆರಂಭಿಕ ಬ್ಯಾಟ್ಸ್ ಮನ್ ಶಿಖರ್ ಧವನ್ ಅಜೇಯ 132 ರನ್ ಗಳಿಸಿದರೆ, ನಾಯಕ ವಿರಾಟ್ ಕೊಹ್ಲಿ ಔಟಾಗದೆ 82 ರನ್ ಕಲೆ ಹಾಕಿ ತಂಡಕ್ಕೆ ಸುಲಭ ಗೆಲುವು ತಂದಿದ್ದರು.

 ಎರಡನೆ ಪಂದ್ಯದಲ್ಲಿ ಭಾರತದ ಆಡುವ 11ರ ಬಳಗದಲ್ಲಿ ಬದಲಾವಣೆಯಾಗುವ ಸಾಧ್ಯತೆಯಿಲ್ಲ. ಭಾರತ ಡಂಬುಲಾದಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ ಇಬ್ಬರು ಲೆಗ್ ಸ್ಪಿನ್ನರ್‌ಗಳು ಅಥವಾ ಇಬ್ಬರು ಎಡಗೈ ಸ್ಪಿನ್ನರ್‌ಗಳಿಗೆ ಆದ್ಯತೆ ನೀಡಿರಲಿಲ್ಲ. ಅಕ್ಷರ್ ಪಟೇಲ್ ಹಾಗೂ ಯುಝ್ವೇಂದ್ರ ಚಾಹಲ್ ಸ್ಥಾನ ಉಳಿಸಿಕೊಳ್ಳಲಿದ್ದಾರೆ. ನಾಯಕ ಕೊಹ್ಲಿ ತಂಡದಲ್ಲಿ ಬದಲಾವಣೆ ಮಾಡುವುದಕ್ಕೆ ಒಲವು ತೋರದ ಹಿನ್ನೆಲೆಯಲ್ಲಿ ಕುಲ್‌ದೀಪ್ ಯಾದವ್, ಮನೀಶ್ ಪಾಂಡೆ, ಅಜಿಂಕ್ಯ ರಹಾನೆ ಹಾಗೂ ಶಾರ್ದೂಲ್ ಠಾಕೂರ್ ಮತ್ತೊಮ್ಮೆ ಅವಕಾಶ ವಂಚಿತರಾಗುವ ಸಾಧ್ಯತೆಯಿದೆ.

 ಮತ್ತೊಂದೆಡೆ, ಶ್ರೀಲಂಕಾ ತಂಡದ ಆಯ್ಕೆ ನೀತಿಯ ಬಗ್ಗೆ ಪ್ರಶ್ನೆ ಉದ್ಭವಿಸಿದೆ. ಟೆಸ್ಟ್ ನಾಯಕ ಹಾಗೂ ಆಕ್ರಮಣಕಾರಿ ಆಟಗಾರ ದಿನೇಶ್ ಚಾಂಡಿಮಾಲ್‌ರನ್ನು ಏಕದಿನ ಸರಣಿಯಿಂದ ಹೊರಗಿಡಲಾಗಿದೆ. ಚಾಂಡಿಮಾಲ್ ಅನುಪಸ್ಥಿತಿಯಲ್ಲಿ ಏಕದಿನ ನಾಯಕ ಹಾಗೂ ಆರಂಭಿಕ ಆಟಗಾರ ಉಪುಲ್ ತರಂಗ ನಾಲ್ಕನೆ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದರು. ಚಾಂಡಿಮಾಲ್‌ರನ್ನು ಏಕದಿನ ತಂಡದಿಂದ ಹೊರಗಿಟ್ಟಿರುವ ಕ್ರಮವನ್ನು ಕೋಚ್ ಪೊಥಾಸ್ ಪ್ರಶ್ನಿಸಿದ್ದಾರೆ. ತಂಡದ ಮ್ಯಾನೇಜರ್ ಹಾಗೂ ಆಯ್ಕೆ ಸಮಿತಿಯ ಮುಖ್ಯಸ್ಥ ಸನತ್ ಜಯಸೂರ್ಯ ತಂಡದ ಆಯ್ಕೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶ್ರೀಲಂಕಾ ತಂಡ ಭಾರತೀಯ ತಂಡಕ್ಕೆ ಸವಾಲೊಡ್ಡಲು ವಿಫಲವಾಗುತ್ತಿದೆ. ಮೊದಲ ಪಂದ್ಯದಲ್ಲಿ ಶ್ರೀಲಂಕಾ ಸುಲಭವಾಗಿ ಸೋತಿರುವ ಹಿನ್ನೆಲೆಯಲ್ಲಿ ಏಕದಿನ ಸರಣಿ ಏಕಪಕ್ಷೀಯವಾಗಿ ಸಾಗುವ ಲಕ್ಷಣ ಗೋಚರಿಸುತ್ತಿದೆ. ಶ್ರೀಲಂಕಾ 2019ರ ಏಕದಿನ ವಿಶ್ವಕಪ್‌ನಲ್ಲಿ ನೇರ ಅರ್ಹತೆ ಪಡೆಯಬೇಕಾದರೆ ಪ್ರಸ್ತುತ ಸರಣಿಯಲ್ಲಿ ಕನಿಷ್ಠ 2 ಪಂದ್ಯಗಳನ್ನು ಗೆಲ್ಲಲೇಬೇಕಾಗಿದೆ. ಏಕದಿನ ರ್ಯಾಂಕಿನಲ್ಲಿ 8ನೆ ಸ್ಥಾನದಲ್ಲಿರುವ ಶ್ರೀಲಂಕಾ ತಂಡಕ್ಕೆ ವಿಂಡೀಸ್ ವಿಶ್ವಕಪ್‌ಗೆ ಅರ್ಹತೆ ಪಡೆಯುವ ನಿಟ್ಟಿನಲ್ಲಿ ಪೈಪೋಟಿ ನೀಡುತ್ತಿದೆ. ಶ್ರೀಲಂಕಾದ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಾದ ದನುಷ್ಕಾ ಗುಣತಿಲಕ, ನಿರೊಶನ್ ಡಿಕ್‌ವೆಲ್ಲಾ ಹಾಗೂ ಕುಶಾಲ್ ಮೆಂಡಿಸ್ ಮೇಲೆ ಹೆಚ್ಚಿನ ಜವಾಬ್ದಾರಿಯಿದ್ದು, ಈ ಮೂವರು ದಾಂಡಿಗರು ಇನಿಂಗ್ಸ್ ಅಂತ್ಯದ ತನಕ ಬ್ಯಾಟಿಂಗ್ ಮಾಡುವ ಅಗತ್ಯವಿದೆ.

ಭಾರತ ತಂಡ: ವಿರಾಟ್ ಕೊಹ್ಲಿ(ನಾಯಕ), ಶಿಖರ್ ಧವನ್, ರೋಹಿತ್ ಶರ್ಮ, ಕೆ.ಎಲ್.ರಾಹುಲ್, ಮನೀಶ್ ಪಾಂಡೆ, ಅಜಿಂಕ್ಯ ರಹಾನೆ, ಕೇದಾರ್ ಜಾಧವ್, ಎಂಎಸ್ ಧೋನಿ(ವಿಕೆಟ್‌ಕೀಪರ್), ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಕುಲ್‌ದೀಪ್ ಯಾದವ್, ಯುಝ್ವೆಂದ್ರ ಚಾಹಲ್, ಜಸ್‌ಪ್ರಿತ್ ಬುಮ್ರಾ, ಭುವನೇಶ್ವರ ಕುಮಾರ, ಶಾರ್ದೂಲ್ ಠಾಕೂರ್.

ಶ್ರೀಲಂಕಾ: ಉಪುಲ್ ತರಂಗ(ನಾಯಕ), ಆ್ಯಂಜೆಲೊ ಮ್ಯಾಥ್ಯೂಸ್, ನಿರೊಶನ್ ಡಿಕ್ವೆಲ್ಲಾ(ವಿಕೆಟ್‌ಕೀಪರ್), ದನುಷ್ಕಾ ಗುಣತಿಲಕ, ಕುಶಾಲ್ ಮೆಂಡಿಸ್, ಚಾಮರ ಕಪುಗಡೆರಾ, ಮಿಲಿಂದ ಸಿರಿವಧರ್ನ, ಮಲಿಂದ ಪುಷ್ಪಕುಮಾರ, ಅಕಿಲಾ ಧನಂಜಯ, ಲಕ್ಷಣ್ ಸಂಡಕನ್, ತಿಸಾರ ಪೆರೇರ, ವಿ.ಹಸರಂಗ, ಲಸಿತ ಮಾಲಿಂಗ, ಡಿ.ಚಾಮೀರ, ವಿಶ್ವ ಫೆರ್ನಾಂಡೊ.

ಪಂದ್ಯದ ಸಮಯ

ಮಧಾಹ್ನ 2.30 ಗಂಟೆಗೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News