×
Ad

ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌: ಶ್ರೀಕಾಂತ್,ಸಿಂಧು ಕ್ವಾರ್ಟರ್‌ ಫೆನಲ್‌ಗೆ

Update: 2017-08-25 00:24 IST

ಗ್ಲಾಸ್ಗೊ, ಆ.24: ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಕಿಡಂಬಿ ಶ್ರೀಕಾಂತ್ ಪುರುಷರ ಸಿಂಗಲ್ಸ್‌ನಲ್ಲಿ ಕ್ವಾರ್ಟರ್‌ಫೈನಲ್‌ಗೆ ಪ್ರವೇಶಿಸಿದ್ದಾರೆ. ಮಿಶ್ರ ಡಬಲ್ಸ್ ಜೋಡಿ ಪ್ರಣವ್ ಚೋಪ್ರಾ ಹಾಗೂ ಸಿಕ್ಕಿ ರೆಡ್ಡಿ ಪ್ರಿ-ಕ್ವಾರ್ಟರ್‌ಫೈನಲ್‌ನಲ್ಲಿ ಮುಗ್ಗರಿಸಿದ್ದಾರೆ.

ಗುರುವಾರ ನಡೆದ ಪುರುಷರ ಸಿಂಗಲ್ಸ್‌ನ ಪ್ರಿ-ಕ್ವಾರ್ಟರ್‌ಫೈನಲ್‌ನಲ್ಲಿ 8ನೆ ಶ್ರೇಯಾಂಕದ ಶ್ರೀಕಾಂತ್ ಡೆನ್ಮಾರ್ಕ್‌ನ 14ನೆ ಶ್ರೇಯಾಂಕದ ಆಟಗಾರ ಆ್ಯಂಡೆರ್ಸ್ ಆ್ಯಂಟಾನ್ಸೆನ್‌ರನ್ನು 21-14, 21-18 ಗೇಮ್‌ಗಳಿಂದ ಮಣಿಸಿದ್ದಾರೆ. ಮಿಶ್ರ ಡಬಲ್ಸ್ ಪಂದ್ಯದಲ್ಲಿ 15ನೆ ಶ್ರೇಯಾಂಕದ ಪ್ರಣವ್-ಸಿಕ್ಕಿ ಜೋಡಿ ಇಂಡೋನೇಷ್ಯಾದ 7ನೆ ಶ್ರೇಯಾಂಕದ ಪ್ರವೀಣ್ ಜೋರ್ಡನ್ ಹಾಗೂ ಡೆಬ್ಬಿ ಸುಸಾಂಟೊ ವಿರುದ್ಧ 20-22, 21-18, 21-18 ವೀರೋಚಿತ ಸೋಲುಂಡಿತು. ಪ್ರಣವ್ ಹಾಗೂ ಸಿಕ್ಕಿ ಸೋಲಿನೊಂದಿಗೆ ಟೂರ್ನಿಯಲ್ಲಿ ಭಾರತದ ಡಬಲ್ಸ್ ಅಭಿಯಾನ ಕೊನೆಗೊಂಡಿದೆ.

ಸಿಂಧು ಕ್ವಾರ್ಟರ್‌ಫೈನಲ್‌ಗೆ: 

ಮಹಿಳೆಯರ ಸಿಂಗಲ್ಸ್‌ನ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಹಾಂಕಾಂಗ್‌ನ ಚೆಯುಂಗ್ ನಗನ್‌ಯೀ ಅವರನ್ನು 19-21, 23-21, 21-17 ಗೇಮ್‌ಗಳಿಂದ ಮಣಿಸಿದ ಪಿ.ವಿ.ಸಿಂಧು ಕ್ವಾರ್ಟರ್‌ಫೈನಲ್‌ಗೆ ಪ್ರವೇಶಿಸಿದ್ದಾರೆ.

ಜಯರಾಮ್‌ಗೆ ಜಯ, ಸಮೀರ್, ರಿತುಪರ್ಣ ಹೊರಕ್ಕೆ

ವಿಶ್ವಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಹಾಲೆಂಡ್‌ನ ಮಾರ್ಕ್ ಕಾಲ್‌ಜೌ ಅವರನ್ನು ನೇರ ಗೇಮ್‌ಗಳಿಂದ ಮಣಿಸಿರುವ ಭಾರತದ ಶಟ್ಲರ್ ಅಜಯ್ ಜಯರಾಮ್ ಪ್ರಿ-ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ್ದಾರೆ. ಆದರೆ, ಸಮೀರ್ ವರ್ಮ ಹಾಗೂ ರಿತುಪರ್ಣ ದಾಸ್ ಸವಾಲು ಅಂತ್ಯಗೊಂಡಿದೆ. 13ನೆ ಶ್ರೇಯಾಂಕದ ಜಯರಾಮ್ ಗುರುವಾರ ನಡೆದ ಪುರುಷರ ಸಿಂಗಲ್ಸ್ ನ 2ನೆ ಸುತ್ತಿನ ಪಂದ್ಯದಲ್ಲಿ ವಿಶ್ವದ 50ನೆ ಆಟಗಾರ ಮಾರ್ಕ್‌ರನ್ನು 21-13, 21-18 ಅಂತರದಿಂದ ಸೋಲಿಸಿದ್ದಾರೆ. ವಿಶ್ವದ ನಂ.17ನೆ ಆಟಗಾರ ಜಯರಾಮ್ ಪ್ರಿ-ಕ್ವಾರ್ಟರ್‌ಫೈನಲ್‌ನಲ್ಲಿ ಎರಡು ಬಾರಿಯ ಹಾಲಿ ಚಾಂಪಿಯನ್ ಚೀನಾದ ಚೆಂಗ್ ಲಾಂಗ್‌ರನ್ನು ಎದುರಿಸಲಿದ್ದಾರೆ.

ಸೈಯದ್ ಮೋದಿ ಜಿಪಿ ಗೋಲ್ಡ್ ಚಾಂಪಿಯನ್ ಸಮೀರ್ ಮತ್ತೊಂದು ಪುರುಷರ ಸಿಂಗಲ್ಸ್‌ನಲ್ಲಿ ರಾಜೀವ್ ಒಸೆಫ್ ವಿರುದ್ಧ 20-22, 9-21 ಗೇಮ್‌ಗಳ ಅಂತರದಿಂದ ಸೋತಿದ್ದಾರೆ. ನ್ಯಾಶನಲ್ ಚಾಂಪಿಯನ್ ರಿತುಪರ್ಣ ದಾಸ್ 42 ನಿಮಿಷಗಳ ಕಾಲ ನಡೆದ ಮಹಿಳೆಯರ ಸಿಂಗಲ್ಸ್‌ನ 2ನೆ ಸುತ್ತಿನ ಪಂದ್ಯದಲ್ಲಿ ಇಂಗ್ಲೆಂಡ್‌ನ ಕಿರ್ಸ್ಟಿ ಗಿಲ್ಮೊರ್ ವಿರುದ್ಧ 16-21, 13-21 ಅಂತರದಿಂದ ಸೋತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News