×
Ad

ವಿಶ್ವ ಕುಸ್ತಿ ಚಾಂಪಿಯನ್‌ಶಿಪ್: ಸಾಕ್ಷಿ, ವಿನೇಶ್‌ಗೆ ಸೋಲು

Update: 2017-08-25 00:28 IST

ಪ್ಯಾರಿಸ್, ಆ.24: ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಕುಸ್ತಿಪಟುಗಳ ಕಳಪೆ ಪ್ರದರ್ಶನ ಮುಂದುವರಿದಿದೆ. ಒಲಿಂಪಿಕ್ಸ್‌ನಲ್ಲಿ ಕಂಚು ಪದಕ ವಿಜೇತೆ ಸಾಕ್ಷಿ ಮಲಿಕ್ ಮೊದಲ ಸುತ್ತಿನಲ್ಲೇ ಸೋತು ಕೂಟದಿಂದ ನಿರ್ಗಮಿಸಿದ್ದಾರೆ.

 ಸಾಕ್ಷಿ ಹಾಗೂ ವಿನೇಶ್ ಫೋಗಟ್ ನಿರೀಕ್ಷಿತ ಪ್ರದರ್ಶನ ನೀಡದೆ ನಿರಾಸೆಗೊಳಿಸಿದರು. ಈ ಇಬ್ಬರು ಸೋಲುವ ಮೂಲಕ ಭಾರತದ ಪದಕ ಭರವಸೆ ಕ್ಷೀಣಿಸಿದೆ. ಮಹಿಳೆಯರ 60 ಕೆಜಿ ವಿಭಾಗದಲ್ಲಿ ಸಾಕ್ಷಿ ಜರ್ಮನಿಯ ಲುಸಾ ನೀಮೆಶ್ಚ್ ವಿರುದ್ಧ 1-3 ಅಂತರದಿಂದ ಸೋತಿದ್ದಾರೆ. 48 ಕೆಜಿ ವಿಭಾಗದಲ್ಲಿ ವಿನೇಶ್ 2 ಬಾರಿಯ ಜೂನಿಯರ್ ವಿಶ್ವ ಚಾಂಪಿಯನ್ ಅಮೆರಿಕದ ವಿಕ್ಟೋರಿಯ ಆ್ಯಂಥೊನಿ ವಿರುದ್ಧ ಶರಣಾಗಿದ್ದಾರೆ.

ನವಜೋತ್ ಕೌರ್(69ಕೆಜಿ) ಮಂಗೋಲಿಯದ ಒಚಿರ್ಬತ್ ನಸನ್‌ಬರ್ಮಾ ವಿರುದ್ಧ 5-10 ಅಂತರದಿಂದ ಸೋತಿದ್ದಾರೆ. ಹೊಸ ಮುಖ ಶೀತಲ್ ಥೋಮರ್(53 ಕೆಜಿ)ಅಂತಿಮ-16ರ ಸುತ್ತಿನಲ್ಲಿ ಆಸ್ಟ್ರೇಲಿಯದ ಜೆಸ್ಸಿಕಾ ಮೆಕ್‌ಬೈನ್‌ರನ್ನು 10-0 ಅಂತರದಿಂದ ಮಣಿಸುವ ಮೂಲಕ ಕ್ವಾರ್ಟರ್‌ಫೈನಲ್ ತಲುಪಿದ್ದರು. ಆದರೆ, ಕ್ವಾರ್ಟರ್‌ಫೈನಲ್‌ನಲ್ಲಿ ರೊಮಾನಿಯದ ಎಸ್ಟೆರಾ ಡೊಬ್ರೆ ವಿರುದ್ಧ 2-4 ಅಂತರದಿಂದ ಸೋತು ನಿರಾಸೆಗೊಳಿಸಿದ್ದಾರೆ.

 ಕಳೆದ ವರ್ಷದ ರಿಯೋ ಒಲಿಂಪಿಕ್ಸ್‌ನಲ್ಲಿ ಕಂಚು ಜಯಿಸಿ ಐತಿಹಾಸಿಕ ಸಾಧನೆ ಮಾಡಿದ್ದ ಹರ್ಯಾಣದ ಕುಸ್ತಿ ತಾರೆ ಸಾಕ್ಷಿ ಮಲಿಕ್ ಮೇಲೆ ಭಾರೀ ನಿರೀಕ್ಷೆ ಇಡಲಾಗಿತ್ತು. ಆದರೆ ಅವರು ತನಗಿಂತ ಕೆಳ ರ್ಯಾಂಕಿನ ಎದುರಾಳಿ ವಿರುದ್ಧ 1-3 ಅಂತರದಿಂದ ಸುಲಭವಾಗಿ ಸೋತಿದ್ದಾರೆ. 58 ಕೆಜಿ ವಿಭಾಗದಲ್ಲಿ ಒಲಿಂಪಿಕ್ಸ್ ನಲ್ಲಿ ಕಂಚು ಜಯಿಸಿದ್ದ ಸಾಕ್ಷಿ ಇದೀಗ 60 ಕೆಜಿ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದಾರೆ. ಈ ವರ್ಷದ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಸಾಕ್ಷಿ ಇದೇ ವಿಭಾಗದಲ್ಲಿ ಬೆಳ್ಳಿ ಜಯಿಸಿದ್ದರು.

ಟೂರ್ನಿಯಲ್ಲಿ ಇನ್ನೆರಡು ದಿನಗಳ ಆಟ ಬಾಕಿ ಉಳಿದಿದ್ದು ಪುರುಷರ ಫ್ರೀಸ್ಟೈಲ್ ಕುಸ್ತಿಪಟುಗಳಾದ ಬಜರಂಗ್ ಪೂನಿಯ(65ಕೆಜಿ) ಹಾಗೂ ಒಲಿಂಪಿಯನ್ ಸಂದೀಪ್ ಥೋಮರ್(57ಕೆಜಿ) ಪದಕದ ವಿಶ್ವಾಸ ಮೂಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News