×
Ad

ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್: ಅಮಿತ್, ಗೌರವ್ ಕ್ವಾರ್ಟರ್ ಫೈನಲ್‌ಗೆ

Update: 2017-08-28 23:32 IST

ಹ್ಯಾಂಬರ್ಗ್, ಆ.28: ಇಲ್ಲಿ ನಡೆಯುತ್ತಿರುವ 19ನೆ ಆವೃತ್ತಿಯ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಅಮಿತ್ ಫಾಂಗಲ್(49ಕೆಜಿ) ಹಾಗೂ ಗೌರವ್ ಬಿಧುರಿ(56ಕೆಜಿ) ಕ್ವಾರ್ಟರ್‌ಫೈನಲ್‌ಗೆ ಪ್ರವೇಶಿಸಿದ್ದಾರೆ. ಆದರೆ, ಮೂರನೆ ಶ್ರೇಯಾಂಕದ ವಿಕಾಸ್ ಕೃಷ್ಣನ್(75ಕೆಜಿ) ಎರಡನೆ ಸುತ್ತಿನಲ್ಲಿ ಸೋಲುವುದರೊಂದಿಗೆ ಭಾರೀ ನಿರಾಸೆಗೊಳಿಸಿದರು.

ಪ್ರಿ-ಕ್ವಾರ್ಟರ್‌ಫೈನಲ್‌ನಲ್ಲಿ ಅಮಿತ್ ಏಳನೆ ಶ್ರೇಯಾಂಕದ ಈಕ್ವೆಡಾರ್‌ನ ಕಾರ್ಲಸ್ ಕ್ವಿಪೋರನ್ನು ಸೋಲಿಸಿ ಶಾಕ್ ನೀಡಿದರು. ಮತ್ತೊಂದು ಪಂದ್ಯದಲ್ಲಿ ಗೌರವ್ ಉಕ್ರೇನ್‌ನ ಮೈಕೊಲಾ ಬಟ್ಸೆಂಕೊರನ್ನು ಸೋಲಿಸಿದರು.

ಈ ವರ್ಷದ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಕಂಚು ಜಯಿಸಿದ್ದ ಅಮಿತ್ ಸುಲಭವಾಗಿ ಜಯ ಸಾಧಿಸಿ ಅಂತಿಮ-8ರ ಸುತ್ತು ಪ್ರವೇಶಿಸಿದರು. ಕ್ವಾರ್ಟರ್‌ಫೈನಲ್‌ನಲ್ಲಿ ಉಝ್ಬೇಕಿಸ್ತಾನದ ಹಸನ್‌ದಸ್‌ಮಟೊವ್‌ರನ್ನು ಎದುರಿಸಲಿದ್ದಾರೆ.

ವೈಲ್ಡ್‌ಕಾರ್ಡ್ ಮೂಲಕ ಟೂರ್ನಿಗೆ ಪ್ರವೇಶ ಪಡೆದಿದ್ದ ದಿಲ್ಲಿಯ ಬಾಕ್ಸರ್ ಗೌರವ್ ಹಾಗೂ ಉಕ್ರೇನ್‌ನ ಮೈಕೊಲಾ ನಡುವೆ ತೀವ್ರ ಪೈಪೋಟಿ ಕಂಡುಬಂದಿದ್ದು, ಅಂತಿಮವಾಗಿ ತೀರ್ಪುಗಾರರು ಭಾರತದ ಗೌರವ್ ಪರ ತೀರ್ಪು ನೀಡಿದರು.

ಹಿರಿಯ ಬಾಕ್ಸರ್‌ಗಳಾದ ವಿಕಾಸ್ ಹಾಗೂ ಸುಮಿತ್ ಸೋಲುವ ಮೂಲಕ ಭಾರತೀಯ ಬಾಕ್ಸಿಂಗ್ ತಂಡ ತೀವ್ರ ಹಿನ್ನಡೆ ಅನುಭವಿಸಿತು.

 2011ರ ಆವೃತ್ತಿಯ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚು ಜಯಿಸಿದ್ದ ವಿಕಾಸ್ ಇಂಗ್ಲೆಂಡ್‌ನ ಬೆಂಜಮಿನ್ ವಿಟೇಕರ್ ವಿರುದ್ಧ ಸೋಲುವ ಮೂಲಕ ಕೂಟದಿಂದ ಹೊರ ನಡೆದಿದ್ದಾರೆ. ಎರಡು ಬಾರಿ ಏಷ್ಯನ್ ಗೇಮ್ಸ್ ನಲ್ಲಿ ಪದಕ ಜಯಿಸಿದ್ದ ವಿಕಾಸ್ 19ರ ಹರೆಯದ ವಿಟೇಕರ್ ವಿರುದ್ಧ ಶರಣಾದರು. ಇಂಗ್ಲೆಂಡ್ ಆಟಗಾರನ ಪಂಚಿಂಗ್‌ಗೆ ತಿರುಗೇಟು ನೀಡಲು ವಿಕಾಸ್ ವಿಫಲರಾದರು. ಹರ್ಯಾಣದ ಬಾಕ್ಸರ್ ವಿಕಾಸ್ ಮೊದಲೆರಡು ಸುತ್ತಿನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಆದರೆ, ಇಂಗ್ಲೆಂಡ್ ಆಟಗಾರ ಕೊನೆಯ ಮೂರು ನಿಮಿಷದಲ್ಲಿ ತಿರುಗೇಟು ನೀಡಿ ಪಂದ್ಯ ಜಯಿಸಿದರು. ಆಸ್ಟ್ರೇಲಿಯದ ಜೇಸನ್ ವಾಟ್ಲೆ ವಿರುದ್ಧ ಸೋತಿರುವ ಸುಮಿತ್ ಸಾಂಗ್ವಾನ್(91ಕೆಜಿ) ಟೂರ್ನಿಯಿಂದ ಬೇಗನೆ ಹೊರ ನಡೆದು ಪದಕ ವಂಚಿತರಾದರು. ಮೊದಲಸುತ್ತಿನಲ್ಲಿ ಪ್ರಾಬಲ್ಯ ಮೆರೆದಿದ್ದ ಸುಮಿತ್ ಮುಂದಿನ ಎರಡು ಸುತ್ತಿನಲ್ಲಿ ಎಡವಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News