ಒಂಟಿ ಕಾಲಿನಲ್ಲೂ ಪಾಕ್ ವಿರುದ್ಧ ಆಡಲು ಧೋನಿ ಸೈ: ಪ್ರಸಾದ್
ಚೆನ್ನೈ, ಆ.28: ‘‘ಕಳೆದ ವರ್ಷ ಭಾರತ ಹಾಗೂ ಪಾಕಿಸ್ತಾನ ನಡುವೆ ನಡೆದಿದ್ದ ಏಷ್ಯಾಕಪ್‌ನ ನಿರ್ಣಾಯಕ ಪಂದ್ಯದಲ್ಲಿ ಗಾಯದ ಸಮಸ್ಯೆಯ ನಡುವೆಯೂ ಕ್ರಿಕೆಟ್ ಮೈದಾನಕ್ಕೆ ಇಳಿದಿದ್ದ ಎಂಎಸ್ ಧೋನಿ ತಂಡಕ್ಕೆ ಪಂದ್ಯ ಗೆಲ್ಲಿಸಿಕೊಟ್ಟಿದ್ದರು. ಪಾಕ್ ವಿರುದ್ಧ ಪಂದ್ಯದಲ್ಲಿ ಒಂಟಿ ಕಾಲಿನಲ್ಲೂ ಆಡಲು ಧೋನಿ ಸಿದ್ಧರಾಗಿದ್ದರು’’ ಎಂದು ಆಯ್ಕೆ ಸಮಿತಿಯ ಅಧ್ಯಕ್ಷ ಎಂಎಸ್‌ಕೆ ಪ್ರಸಾದ್ ಬಹಿರಂಗಪಡಿಸಿದ್ದಾರೆ.
ಢಾಕಾದಲ್ಲಿ 2016ರ ಫೆಬ್ರವರಿಯಲ್ಲಿ ನಡೆದಿದ್ದ ಏಷ್ಯಾಕಪ್‌ನಲ್ಲಿ ಪಾಕ್ ವಿರುದ್ಧ್ದ ಧೋನಿ ಬದಲಿಗೆ ಆಟಗಾರನನ್ನು ಆಯ್ಕೆ ಮಾಡಲು ತಾನು ಸಿದ್ದನಾಗಿದ್ದೆ. ಆಗ ತನ್ನೊಂದಿಗೆ ಮಾತನಾಡಿದ ಧೋನಿ, ‘‘ನೀವು ನನ್ನ ಬಗ್ಗೆ ಚಿಂತಿಸಬೇಡಿ. ಪಾಕಿಸ್ತಾನ ವಿರುದ್ಧ ಒಂಟಿ ಕಾಲಿನಲ್ಲೂ ಆಡಲು ಸಿದ್ಧವಿದ್ದೇನೆ’’ ಎಂದು ಹೇಳಿದ್ದಾಗಿ ತಮಿಳುನಾಡು ಕ್ರೀಡಾ ಪತ್ರಕರ್ತರ ಸಂಸ್ಥೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪ್ರಸಾದ್ ಹೇಳಿದ್ದಾರೆ.
ಪಾಕ್ ವಿರುದ್ಧದ ಏಷ್ಯಾಕಪ್ ಪಂದ್ಯ ನಡೆಯಲು ಎರಡು ದಿನ ಮೊದಲು ಜಿಮ್‌ನಲ್ಲಿ ಅಭ್ಯಾಸ ನಡೆಸುತ್ತಿದ್ದಾಗ ಧೋನಿಗೆ ಗಾಯವಾಗಿತ್ತು. ಧೋನಿ ಭಾರವನ್ನು ಎತ್ತಿದ ತಕ್ಷಣ ಬೆನ್ನುನೋವು ಕಾಣಿಸಿಕೊಂಡಿತ್ತು. ತಕ್ಷಣವೇ ಅವರು ಭಾರವನ್ನು ಕೆಳಕ್ಕೆ ಹಾಕಿದ್ದರು. ನಿಲ್ಲಲು ಸಾಧ್ಯವಾಗದ ಧೋನಿ ಅವರನ್ನು ಸ್ಟ್ರೆಚರ್‌ನ ಮೂಲಕ ಜಿಮ್‌ನಿಂದ ಹೊರಗೆ ಕರೆದುಕೊಂಡು ಹೋಗಲಾಗಿತ್ತ್ತು. ಧೋನಿಯ ಕೊಠಡಿಗೆ ತೆರಳಿದ್ದಾಗ, ನೀವು ನನ್ನ ಗಾಯದ ಬಗ್ಗೆ ಚಿಂತಿಸಬೇಡಿ ಎಂದು ಒತ್ತಿ ಹೇಳಿದ್ದರು. ಮಧ್ಯಾಹ್ನ ತಂಡ ಘೋಷಣೆಗೆ ಮೊದಲು ಅವರು ಪಂದ್ಯಕ್ಕೆ ಸಜ್ಜಾಗಿ ನಿಂತಿದ್ದರು’’ ಎಂದರು.