×
Ad

ಸಿಂಧುಗೆ 10 ಲಕ್ಷ ರೂ, ಸೈನಾಗೆ 5 ಲಕ್ಷ ರೂ. ಬಹುಮಾನ

Update: 2017-08-28 23:48 IST

ಹೊಸದಿಲ್ಲಿ, ಆ.27: ಗ್ಲಾಸ್ಗೋದಲ್ಲಿ ರವಿವಾರ ಕೊನೆಗೊಂಡ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪದಕ ಜಯಿಸಿರುವ ಪಿ.ವಿ.ಸಿಂಧು ಹಾಗೂ ಸೈನಾ ನೆಹ್ವಾಲ್‌ಗೆ ಭಾರತದ ಬ್ಯಾಡ್ಮಿಂಟನ್ ಸಂಸ್ಥೆ(ಬಿಎಐ) ಕ್ರಮವಾಗಿ 10 ಹಾಗೂ 5 ಲಕ್ಷ ರೂ. ಬಹುಮಾನ ಘೋಷಿಸಿದೆ. ಭಾರತ ಇದೇ ಮೊದಲ ಬಾರಿ ಪ್ರತಿಷ್ಠಿತ ಟೂರ್ನಮೆಂಟ್‌ನಲ್ಲಿ ಎರಡು ಪದಕಗಳನ್ನು ಜಯಿಸಿದೆ. ಮಹಿಳೆಯರ ಸಿಂಗಲ್ಸ್‌ನಲ್ಲಿ ಫೈನಲ್‌ಗೆ ತಲುಪಿದ್ದ ಸಿಂಧು ಜಪಾನ್‌ನ ನೊರೊಮಿ ಒಕುಹರಾ ವಿರುದ್ಧ ಸೋಲುವ ಮೂಲಕ ಬೆಳ್ಳಿ ಜಯಿಸಿದ್ದರು. ಶನಿವಾರ ನಡೆದ ಸೆಮಿಫೈನಲ್‌ನಲ್ಲಿ ಸೈನಾ ಜಪಾನ್‌ನ ಒಕುಹರಾಗೆ ಸೋಲುವ ಮೂಲಕ ಕಂಚಿಗೆ ತೃಪ್ತಿಪಟ್ಟಿದ್ದರು. ಟೂರ್ನಮೆಂಟ್‌ನಲ್ಲಿ ಅಮೋಘ ಪ್ರದರ್ಶನ ನೀಡಿರುವ ಆಟಗಾರ್ತಿಯರಿಗೆ ಅಭಿನಂದನೆ ಸಲ್ಲಿಸಿದ ಬಿಎಐ ಅಧ್ಯಕ್ಷ ಹಿಮಂತ್ ಬಿಸ್ವಾ ಶರ್ಮ,‘‘ಶ್ರೇಷ್ಠ ಪ್ರದರ್ಶನ ನೀಡಿರುವ ಇಬ್ಬರೂ ಆಟಗಾರ್ತಿಯರಿಗೆ ನಾನು ಅಭಿನಂದನೆ ಸಲ್ಲಿಸುವೆ. ಆಟಗಾರ್ತಿಯರು ಇನ್ನಷ್ಟು ಉತ್ತಮ ಪ್ರದರ್ಶನ ನೀಡುವ ವಿಶ್ವಾಸ ನನಗಿದೆ’’ ಎಂದರು.

ಬೆಳ್ಳಿ ಜಯಿಸಿದ್ದಕ್ಕೆ ಸಂತೋಷವಾಗಿದೆ: ಸಿಂಧು

‘‘ಇದೊಂದು ರೋಚಕ ಪಂದ್ಯವಾಗಿತ್ತು. ಇಬ್ಬರಿಗೂ ಗೆಲ್ಲುವ ಸಮಾನ ಅವಕಾಶವಿತ್ತು. ಚಿನ್ನದ ಮೇಲೆ ಗುರಿ ಇಟ್ಟಿದ್ದ ನನಗೆ ಈ ಸೋಲು ಬೇಸರ ತಂದಿದೆ. ಕೊನೆಯ ಕ್ಷಣದಲ್ಲಿ ಎಲ್ಲವೂ ಬದಲಾಗಿತ್ತು. ಬೆಳ್ಳಿ ಜಯಿಸಿದ್ದಕ್ಕೆ ಸಂತೋಷವಾಗಿದೆ’’ಎಂದು ಭಾರತದ ಆಟಗಾರ್ತಿ ಪಿ.ವಿ. ಸಿಂಧು ಹೇಳಿದ್ದಾರೆ. ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ರವಿವಾರ ನಡೆದ ಮಹಿಳೆಯರ ಸಿಂಗಲ್ಸ್ ಫೈನಲ್‌ನಲ್ಲಿ ಸಿಂಧು ಜಪಾನ್‌ನ ಒಕುಹರಾ ವಿರುದ್ಧ 19-21, 22-20, 20-22 ಗೇಮ್‌ಗಳ ಅಂತರದಿಂದ ವೀರೋಚಿತ ಸೋಲುಂಡಿದ್ದರು. ‘‘ಜಪಾನ್ ಆಟಗಾರ್ತಿಯ ವಿರುದ್ಧ ಆಡಿದ ಪ್ರತಿ ಪಂದ್ಯವೂ ನನಗೆ ಸುಲಭವಾಗಿರಲಿಲ್ಲ. ಇದೊಂದು ಕಠಿಣ ಪಂದ್ಯ ವೆಂದು ಮೊದಲೇ ಗೊತ್ತಿತ್ತು. ದೀರ್ಘಸಮಯದಿಂದ ಈ ಪಂದ್ಯಕ್ಕೆ ಸಜ್ಜಾಗಿದ್ದ ನನಗೆ ಈ ಸೋಲು ಆಘಾತ ತಂದಿದೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News