ಆಸೀಸ್‌ಗೆ ಶಾಕೀಬ್ ಪ್ರಹಾರ

Update: 2017-08-28 18:29 GMT

ಢಾಕಾ, ಆ.28: ಆಸ್ಟ್ರೇಲಿಯ ವಿರುದ್ಧದ ಮೊದಲ ಕ್ರಿಕೆಟ್ ಟೆಸ್ಟ್‌ನಲ್ಲಿ ಬಾಂಗ್ಲಾದೇಶ ತಂಡ ಆಲ್‌ರೌಂಡರ್ ಶಾಕಿಬ್ ಅಲ್ ಹಸನ್ ನೆರವಿನಲ್ಲಿ ಅಲ್ಪ ಮುನ್ನಡೆ ಸಾಧಿಸಿದೆ.

  ಶೇರ್ ಎ ಬಾಂಗ್ಲಾ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಟೆಸ್ಟ್‌ನ ಎರಡನೆ ದಿನವಾಗಿರುವ ಸೋಮವಾರ ಆಲ್‌ರೌಂಡರ್ ಶಾಕಿಬ್ ಅಲ್ ಹಸನ್(68ಕ್ಕೆ 5) ದಾಳಿಗೆ ಸಿಲುಕಿದ ಆಸೀಸ್ 74.5 ಓವರ್‌ಗಳಲ್ಲಿ 217 ರನ್‌ಗಳಿಗೆ ಆಲೌಟಾಗಿದೆ.

ಬಾಂಗ್ಲಾದೇಶ ತಂಡ 43 ರನ್‌ಗಳ ಅಲ್ಪ ಮುನ್ನಡೆ ಸಾಧಿಸಿದೆ.

 ಎರಡನೆ ದಿನದಾಟದಂತ್ಯಕ್ಕೆ ಬಾಂಗ್ಲಾದೇಶ ಎರಡನೆ ಇನಿಂಗ್ಸ್‌ನಲ್ಲಿ 22 ಓವರ್‌ಗಳಲ್ಲಿ 1 ವಿಕೆಟ್ ನಷ್ಟದಲ್ಲಿ 45 ರನ್ ಗಳಿಸಿದೆ. ಇದರೊಂದಿಗೆ ಬಾಂಗ್ಲಾ ಒಟ್ಟು 88 ರನ್‌ಗಳ ಮುನ್ನಡೆ ಪಡೆದಿದೆ.

ಆರಂಭಿಕ ದಾಂಡಿಗ ಸೌಮ್ಯ ಸರ್ಕಾರ್ 15 ರನ್ ಗಳಿಸಿ ಔಟಾಗಿದ್ದಾರೆ. 30 ರನ್ ಗಳಿಸಿರುವ ಆರಂಭಿಕ ದಾಂಡಿಗ ತಮೀಮ್ ಇಕ್ಬಾಲ್ ಮತ್ತು ಇನ್ನೂ ಖಾತೆ ತೆರೆಯದ ನೈಟ್ ವಾಚ್‌ಮನ್ ತೈಜುಲ್ ಇಸ್ಲಾಂ ಕ್ರೀಸ್‌ನಲ್ಲಿದ್ದಾರೆ.

  ಮೊದಲ ದಿನದಾಟದಂತ್ಯಕ್ಕೆ ಆಸ್ಟ್ರೇಲಿಯ ತಂಡ ಮೊದಲ ಇನಿಂಗ್ಸ್‌ನಲ್ಲಿ 9 ಓವರ್‌ಗಳಲ್ಲಿ 3 ವಿಕೆಟ್ ನಷ್ಟದಲ್ಲಿ 18 ರನ್ ಗಳಿಸಿತ್ತು. ಇಂದು ಬ್ಯಾಟಿಂಗ್ ಮುಂದುವರಿಸಿದ ಆಸ್ಟ್ರೇಲಿಯ ಈ ಮೊತ್ತಕ್ಕೆ 199 ರನ್ ಸೇರಿಸುವಷ್ಟರಲ್ಲಿ ಆಲೌಟಾಗಿದೆ. ನಾಯಕ ಸ್ಟೀವ್ ಸ್ಮಿತ್ ವಿಕೆಟ್‌ನ್ನು ಆಸ್ಟ್ರೇಲಿಯ ಬೇಗನೆ ಕಳೆದುಕೊಂಡಿತು. ಎರಡನೆ ಓವರ್‌ನಲ್ಲಿ ಮೆಹಿದಿ ಹಸನ್ ಅವರು ಸ್ಮಿತ್‌ಗೆ(8) ಬೇಗನೆ ಪೆವಿಲಿಯನ್ ಹಾದಿ ತೋರಿಸಿದರು. ಹಸನ್ ಕಳೆದ ವರ್ಷ ಇದೇ ಕ್ರೀಡಾಂಗಣದಲ್ಲಿ 12 ವಿಕೆಟ್ ಪಡೆದು ಇಂಗ್ಲೆಂಡ್ ವಿರುದ್ಧ ಬಾಂಗ್ಲಾಕ್ಕೆ ಟೆಸ್ಟ್ ನಲ್ಲಿ ಮೊದಲ ಗೆಲುವು ತಂದು ಕೊಟ್ಟಿದ್ದರು.

    ಮ್ಯಾಟ್ ರೆನ್‌ಶಾ ಮತ್ತು ಪೀಟರ್ ಹ್ಯಾಂಡ್ಸ್‌ಕ್ಯಾಂಬ್ ಆಸ್ಟ್ರೇಲಿಯದ ಬ್ಯಾಟಿಂಗ್ ಮುನ್ನಡೆಸಿ 5ನೆ ವಿಕೆಟ್‌ಗೆ 69 ರನ್‌ಗಳ ಜೊತೆಯಾಟ ನೀಡಿದರು.ತೈಜುಲ್ ಇಸ್ಲಾಂ ಇವರ ಜೊತೆಯಾಟವನ್ನು ಮುರಿದರು.

ಹ್ಯಾಂಡ್ಸ್‌ಕ್ಯಾಂಬ್ (33) ಅವರನ್ನು ತೈಜುಲ್ ಇಸ್ಲಾಂ ಎಲ್‌ಬಿಡಬ್ಲು ಬಲೆಗೆ ಬೀಳಿಸಿದರು. ರೆನ್‌ಶಾ ಅವರು ಅರ್ಧಶತಕ ದಾಖಲಿಸುವ ಹಾದಿಯಲ್ಲಿದ್ದರು. ಆದರೆ ಅವರ ಆಟವನ್ನು ಶಾಕಿಬ್ ಅಲ್ ಹಸನ್ 45ರಲ್ಲಿ ಕೊನೆಗೊಳಿಸಿದರು.ಗ್ಲೆನ್ ಮ್ಯಾಕ್ಸ್‌ವೆಲ್(23) ,ಮ್ಯಾಥ್ಯೂ ವೇಡ್(5) ಔಟಾಗುವುದರೊಂದಿಗೆ ಆಸ್ಟ್ರೇಲಿಯ 43.1 ಓವರ್‌ಗಳಲ್ಲಿ 144ಕ್ಕೆ 8 ವಿಕೆಟ್ ಕಳೆದುಕೊಂಡಿತ್ತು. 9ನೆ ವಿಕೆಟ್‌ಗೆ ಅಶ್ಟನ್ ಅಗರ್ ಮತ್ತು ಪ್ಯಾಟ್ ಕಮಿನ್ಸ್ ಜೊತೆಯಾಗಿ 49 ರನ್ ಸೇರಿಸಿದರು. ಕಮಿನ್ಸ್ 25 ರನ್ ಮತ್ತು ಅಗರ್ ಔಟಾಗದೆ 41 ರನ್ ಗಳಿಸಿದರು. ಜೋಶ್ ಹೇಝಲ್‌ವುಡ್(5) ಅವರನ್ನು ಪೆವಿಲಿಯನ್‌ಗೆ ಅಟ್ಟುವುದರೊಂದಿಗೆ ಶಾಕೀಬ್ ಅಲ್ ಹಸನ್ ಆಸ್ಟ್ರೇಲಿಯದ ಮೊದಲ ಇನಿಂಗ್ಸ್ ಮುಗಿಸಿದರು. ಶಾಕಿಬ್ ಐದು ವಿಕೆಟ್‌ಗಳ ಗೊಂಚಲು ಪಡೆದರು.

ಸಂಕ್ಷಿಪ್ತ ಸ್ಕೋರ್ ವಿವರ

►ಬಾಂಗ್ಲಾದೇಶ ಮೊದಲ ಇನಿಂಗ್ಸ್ 260

►ಆಸ್ಟ್ರೇಲಿಯ ಮೊದಲ ಇನಿಂಗ್ಸ್ 74.5 ಓವರ್‌ಗಳಲ್ಲ್ಲಿ 217/10(ರೆನ್‌ಶಾ 45, ಅಗರ್ ಔಟಾಗದೆ 41;ಶಾಕಿಬ್ 68ಕ್ಕೆ 5, ಎಂ.ಹಸನ್ 62ಕ್ಕೆ 2).

►ಬಾಂಗ್ಲಾದೇಶ ಎರಡನೆ ಇನಿಂಗ್ಸ್ 22 ಓವರ್‌ಗಳಲ್ಲಿ 45/1(ತಮೀಮ್ ಔಟಾಗದೆ 30; ಅಗರ್ 9ಕ್ಕೆ 1).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News