2018ರ ಫಿಫಾ ವಿಶ್ವಕಪ್: ಜಪಾನ್ ಅರ್ಹತೆ

Update: 2017-08-31 18:29 GMT

ಟೋಕಿಯೊ, ಆ.31: ಆಸ್ಟ್ರೇಲಿಯ ವಿರುದ್ಧ 2-0 ಗೋಲುಗಳ ಅಂತರದಿಂದ ಜಯ ಸಾಧಿಸಿರುವ ಜಪಾನ್ ತಂಡ 2018ರಲ್ಲಿ ರಶ್ಯದಲ್ಲಿ ನಡೆಯಲಿರುವ ಫಿಫಾ ವಿಶ್ವಕಪ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದೆ.

ಟಾಕುಮಾ ಒಸಾನೊ ಮೊದಲಾರ್ಧದ ಅಂತ್ಯಕ್ಕೆ (41ನೆ ನಿಮಿಷ)ಗೋಲು ಬಾರಿಸಿ ಜಪಾನ್‌ಗೆ 1-0 ಮುನ್ನಡೆ ಒದಗಿಸಿಕೊಟ್ಟರು. 82ನೆ ನಿಮಿಷದಲ್ಲಿ ಗೋಲು ಬಾರಿಸಿದ 21ರ ಹರೆಯದ ಮಿಡ್‌ಫೀಲ್ಡರ್ ಯೊಸುಕೆ ಇಡೆಗುಚಿ ಜಪಾನ್‌ಗೆ 2-0 ಗೆಲುವು ತಂದರು. ಈ ಗೆಲುವಿನ ಮೂಲಕ ಜಪಾನ್ ಸತತ ಆರನೆ ಬಾರಿ ವಿಶ್ವಕಪ್‌ಗೆ ಅರ್ಹತೆ ಪಡೆದುಕೊಂಡಿದೆ.

ಜಪಾನ್ ‘ಬಿ’ ಗುಂಪಿನಲ್ಲಿ ಅಗ್ರ ಸ್ಥಾನದಲ್ಲಿದ್ದು, ತನ್ನ ಕೊನೆಯ ಪಂದ್ಯದಲ್ಲಿ 2ನೆ ಸ್ಥಾನದಲ್ಲಿರುವ ಸೌದಿ ಅರೇಬಿಯ ತಂಡವನ್ನು ಎದುರಿಸಲಿದೆ.

3ನೆ ಸ್ಥಾನದಲ್ಲಿರುವ ಆಸ್ಟ್ರೇಲಿಯ ತಂಡ ತನ್ನ ಕೊನೆಯ ಪಂದ್ಯದಲ್ಲಿ ಥಾಯ್ಲೆಂಡ್ ತಂಡವನ್ನು ಭಾರೀ ಅಂತರದಲ್ಲಿ ಮಣಿಸಿದರೆ, ಜಪಾನ್ ತಂಡ ಸೌದಿಯ ವಿರುದ್ಧ ಜಯ ಇಲ್ಲವೇ ಡ್ರಾ ಸಾಧಿಸಿದರೆ ಆಸೀಸ್‌ಗೆ ವಿಶ್ವಕಪ್‌ನಲ್ಲಿ ಅರ್ಹತೆ ಪಡೆಯುವ ಅವಕಾಶ ಮುಕ್ತವಾಗಲಿದೆ.

ಜಪಾನ್ ಮುಂದಿನ ವರ್ಷ ಜೂ.14 ರಿಂದ ಜುಲೈ 15ರ ತನಕ ರಶ್ಯದಲ್ಲಿ ನಡೆಯಲಿರುವ ವಿಶ್ವಕಪ್‌ಗೆ ಅರ್ಹತೆ ಪಡೆದ ನಾಲ್ಕನೆ ತಂಡವಾಗಿದೆ. 32 ತಂಡಗಳು ಭಾಗವಹಿಸಲಿರುವ ಟೂರ್ನಮೆಂಟ್‌ನಲ್ಲಿ ಆತಿಥೇಯ ರಶ್ಯ ತಂಡವಲ್ಲದೆ ಇರಾನ್, ಬ್ರೆಝಿಲ್ ಈಗಾಗಲೇ ಅರ್ಹತೆ ಪಡೆದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News