ಯುಎಸ್ ಓಪನ್: ಶರಪೋವಾ 3ನೆ ಸುತ್ತಿಗೆ, ವೋಝ್ನಿಯಾಕಿ ಔಟ್

Update: 2017-08-31 18:44 GMT

ನ್ಯೂಯಾರ್ಕ್, ಆ.31: ರಶ್ಯದ ಹಿರಿಯ ಆಟಗಾರ್ತಿ ಮರಿಯಾ ಶರಪೋವಾ ಯುಎಸ್ ಓಪನ್‌ನಲ್ಲಿ ಮೂರನೆ ಸುತ್ತಿಗೆ ತೇರ್ಗಡೆಯಾಗಿದ್ದಾರೆ. ಆದರೆ,ವಿಶ್ವದ ಮಾಜಿ ನಂ.1 ಆಟಗಾರ್ತಿ ಕರೋಲಿನಾ ವೋಝ್ನಿಯಾಕಿ ಸೋತು ಟೂರ್ನಿಯಿಂದ ನಿರ್ಗಮಿಸಿದ್ದಾರೆ.

ಶರಪೋವಾ ಇಲ್ಲಿ ಬುಧವಾರ ನಡೆದ ಮಹಿಳೆಯರ ಸಿಂಗಲ್ಸ್ ನ ಎರಡನೆ ಸುತ್ತಿನ ಪಂದ್ಯದಲ್ಲಿ ಹಂಗೇರಿಯದ ಟೈಮಿಯಾ ಬಾಬೊಸ್‌ರನ್ನು 6-7(4), 6-4, 6-1 ಸೆಟ್‌ಗಳ ಅಂತರದಿಂದ ಮಣಿಸಿದ್ದಾರೆ. ವೈಲ್ಡ್‌ಕಾರ್ಡ್‌ನ ಮೂಲಕ ಟೂರ್ನಿಗೆ ಪ್ರವೇಶ ಪಡೆದಿದ್ದ ಶರಪೋವಾ ಮೊದಲ ಸೆಟ್‌ನಲ್ಲಿ ಹಲವು ತಪ್ಪೆಸಗಿದರು. ಎರಡನೆ ಹಾಗೂ ಮೂರನೆ ಸೆಟ್‌ನಲ್ಲಿ ಹಂಗೇರಿ ಆಟಗಾರ್ತಿ ಮೇಲೆ ಪ್ರಾಬಲ್ಯ ಸಾಧಿಸಿದ ಶರಪೋವಾ ಏಕಪಕ್ಷೀಯವಾಗಿ 2ನೆ ಪಂದ್ಯವನ್ನು ಗೆದ್ದುಕೊಂಡರು.

ವೋಝ್ನಿಯಾಕಿಗೆ ಮಕರೋವಾ ಶಾಕ್: ರಶ್ಯದ ಇನ್ನೋರ್ವ ಆಟಗಾರ್ತಿ ಎಕಟೆರಿನಾ ಮಕರೋವಾ ಐದನೆ ಶ್ರೇಯಾಂಕದ ವೋಝ್ನಿಯಾಕಿ ಅವರನ್ನು 6-2, 6-7(5), 6-1 ಸೆಟ್‌ಗಳ ಅಂತರದಿಂದ ಮಣಿಸಿದ್ದಾರೆ. ಮಕರೋವಾ ಈವರೆಗೆ ವೋಝ್ನಿಯಾಕಿ ವಿರುದ್ಧ ಆಡಿರುವ 8 ಪಂದ್ಯಗಳ ಪೈಕಿ ಮೊದಲ ಜಯ ಸಾಧಿಸಿದರು.

ಯುಎಸ್ ಓಪನ್‌ನಲ್ಲಿ ಎರಡು ಬಾರಿ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿದ್ದ ವೋಝ್ನಿಯಾಕಿ ಈ ಬಾರಿ ಚೊಚ್ಚಲ ಗ್ರಾನ್‌ಸ್ಲಾಮ್ ಪ್ರಶಸ್ತಿ ಜಯಿಸುವ ಗುರಿಯೊಂದಿಗೆ ನ್ಯೂಯಾರ್ಕ್‌ಗೆ ಬಂದಿದ್ದರು. 27ರ ಹರೆಯದ ವೋಝ್ನಿಯಾಕಿ ಆರು ಬಾರಿ ಫೈನಲ್‌ಗೆ ತಲುಪಿದ್ದರೂ ಒಂದೂ ಪ್ರಶಸ್ತಿ ಜಯಿಸಿಲ್ಲ.

ಮಳೆಯಿಂದಾಗಿ ಬುಧವಾರಕ್ಕೆ ಮುಂದೂಡಲ್ಪಟ್ಟಿದ್ದ ಪಂದ್ಯದಲ್ಲಿ ಉಕ್ರೇನ್‌ನ ಎಲಿನಾ ಸ್ವಿಟೋಲಿನಾ ಹಾಗೂ ಆಸ್ಟ್ರೀಯದ ಆಟಗಾರ ಡೊಮಿನಿಕ್ ಥೀಮ್ ಗೆಲುವು ಸಾಧಿಸಿದ್ದಾರೆ.

ಈ ವರ್ಷ ಆರನೆ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿರುವ ಸ್ವಿಟೋಲಿನಾ 42ನೆ ರ್ಯಾಂಕಿನ ಝೆಕ್‌ನ ಕಟೆರಿನಾ ಸಿನಿಯಾಕೊವಾ ವಿರುದ್ಧ 6-0, 6-7(5/7), 6-3 ಸೆಟ್‌ಗಳ ಅಂತರದಿಂದ ಜಯ ಸಾಧಿಸಿದ್ದಾರೆ.

 ಪುರುಷರ ಸಿಂಗಲ್ಸ್‌ನಲ್ಲಿ ಡೊಮಿನಿಕ್ ಥೀಮ್ ಆಸ್ಟ್ರೇಲಿಯದ ಅಲೆಕ್ಸ್ ಡಿ ಮಿನೌರ್‌ರನ್ನು 6-4, 6-1, 6-1 ಅಂತರದಿಂದ ಮಣಿಸಿದರು. ಫ್ರೆಂಚ್ ಓಪನ್‌ನಲ್ಲಿ 2 ಬಾರಿ ಸೆಮಿಫೈನಲ್‌ಗೆ ತಲುಪಿದ್ದ ಥೀಮ್ ಈ ವರ್ಷ ಪ್ರಶಸ್ತಿ ಜಯಿಸುವ ಫೇವರಿಟ್ ಆಟಗಾರನಾಗಿದ್ದಾರೆ.

ಮುಗುರುಝ ಮೂರನೆ ಸುತ್ತಿಗೆ ಲಗ್ಗೆ

ಸ್ಪೇನ್‌ನ ಮೂರನೆ ಶ್ರೇಯಾಂಕದ ಆಟಗಾರ್ತಿ ಗಾರ್ಬೈನ್ ಮುಗುರುಝ ಯುಎಸ್ ಓಪನ್‌ನ ಮಹಿಳೆಯರ ಸಿಂಗಲ್ಸ್‌ನಲ್ಲಿ 3ನೆ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ.

ವಿಂಬಲ್ಡನ್ ಚಾಂಪಿಯನ್ ಮುಗುರುಝ ಬುಧವಾರ ನಡೆದ ಎರಡನೆ ಸುತ್ತಿನ ಪಂದ್ಯದಲ್ಲಿ ಡುಯಾನ್ ಯಿಂಗ್‌ಯಿಂಗ್‌ರನ್ನು 6-4, 6-0 ಸೆಟ್‌ಗಳ ಅಂತರದಿಂದ ಸೋಲಿಸಿದ್ದಾರೆ. ಅಂತಿಮ 32ರ ಸುತ್ತಿನಲ್ಲಿ ಮಗ್ಡಲೆನಾ ರಿಬಾರಿಕೊವಾರನ್ನು ಎದುರಿಸಲಿದ್ದಾರೆ.

ಬಲಭುಜನೋವು:

ಟೂರ್ನಿಯಿಂದ ಹೊರ ನಡೆದ ಕಿರ್ಗಿಯೊಸ್

ಆಸ್ಟ್ರೇಲಿಯದ ಆಟಗಾರ ನಿಕ್ ಕಿರ್ಗಿಯೊಸ್ ಯುಎಸ್ ಓಪನ್‌ನಿಂದ ಹೊರ ನಡೆದಿದ್ದಾರೆ.

ಕೂಟದ ಮೊದಲ ಪಂದ್ಯದ ಮೂರನೆ ಸೆಟ್‌ನಲ್ಲಿ ಆಡುತ್ತಿದ್ದಾಗ ಕಿರ್ಗಿಯೊಸ್ ಬಲ ಭುಜದಲ್ಲಿ ನೋವು ಕಾಣಿಸಿಕೊಂಡಿತು. 14ನೆ ಶ್ರೇಯಾಂಕದ ಕಿರ್ಗಿಯೊಸ್ ತಮ್ಮದೇ ದೇಶದ ಜಾನ್ ಮಿಲ್ಮನ್ ವಿರುದ್ಧ 6-3, 1-6, 6-4, 6-1 ಸೆಟ್‌ಗಳ ಅಂತರದಿಂದ ಸೋತಿದ್ದಾರೆ.

ಕಿರ್ಗಿಯೊಸ್‌ಗೆ ಯುಎಸ್ ಓಪನ್‌ಗೆ ಮೊದಲೇ ಗಾಯದ ಸಮಸ್ಯೆಯಿತ್ತು. ಗಾಯದ ಸಮಸ್ಯೆಯಿಂದಾಗಿ ಅವರು ವಿಂಬಲ್ಡನ್ ಹಾಗೂ ಕ್ವೀನ್ಸ್ ಟೂರ್ನಿಯಿಂದ ದೂರವುಳಿದಿದ್ದರು. 2 ವಾರಗಳ ಹಿಂದೆ ನಡೆದಿದ್ದ ಎಟಿಪಿ ಸಿನ್ಸಿನಾಟಿ ಮಾಸ್ಟರ್ಸ್‌ ಟೂರ್ನಿಯಲ್ಲಿ ಫೈನಲ್‌ಗೆ ತಲುಪಿದ್ದ ಕಿರ್ಗಿ ಯೊಸ್ ಅವರು ಗ್ರಿಗೊರ್ ಡಿಮಿಟ್ರೊವ್ ವಿರುದ್ಧ ಶರಣಾಗಿದ್ದರು.

ಶಪೊವಾಲೊವ್‌ಗೆ ಶರಣಾದ ಸೋಂಗ

ಎಂಟನೆ ಶ್ರೇಯಾಂಕದ ಜೋ-ವಿಲ್ಫ್ರೆಡ್ ಸೋಂಗ ಕೆನಡಾದ ಡೆನಿಸ್ ಶಪೊವಾಲೊವ್ ವಿರುದ್ಧ 6-4, 6-4, 7-6(3) ಸೆಟ್‌ಗಳ ಅಂತರದಿಂದ ಸೋಲುವ ಮೂಲಕ ಯುಎಸ್ ಓಪನ್‌ನಿಂದ ನಿರ್ಗಮಿಸಿದ್ದಾರೆ.

ಕಳೆದ ತಿಂಗಳು ವಿಂಬಲ್ಡನ್‌ನಲ್ಲಿ ಮೊದಲ ಬಾರಿ ಪ್ರಮುಖ ಟೂರ್ನಿಯಲ್ಲಿ ಆಡಿ ಮೊದಲ ಸುತ್ತಿನಲ್ಲೇ ಸೋತಿದ್ದ ಶಪೋವಾಲೊವ್ ಇದೀಗ ಮೂರನೆ ಸುತ್ತಿಗೆ ತಲುಪಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News