ವಿಶ್ವ ಬಾಕ್ಸಿಂಗ್: ನೋವಿನ ನಡುವೆ ಪದಕದ ನಗೆ

Update: 2017-09-01 04:12 GMT

ಹ್ಯಾಂಬರ್ಗ್, ಸೆ.1: ಭಾರತದ ಗುರುದೇವ್ ಬಿಧೂರಿ ಎಐಬಿಎ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಈ ಮೂಲಕ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆದ್ದ ನಾಲ್ಕನೆ ಭಾರತೀಯ ಎಂಬ ಹೆಗ್ಗಳಿಕೆಗೆ ಬಿಧೂರಿ ಆಯ್ಕೆಯಾಗಿದ್ದಾರೆ.

ಗುರುವಾರ ರಾತ್ರಿ ನಡೆದ ಬ್ಯಾಟನ್‌ವೆಯ್ಟಾ ವರ್ಗದ (56 ಕೆಜಿ) ಸೆಮಿಫೈನಲ್ ಕದನದಲ್ಲಿ ಅಮೆರಿಕದ ಡ್ಯೂಕ್ ರೇಗನ್ ವಿರುದ್ಧ ಸೋಲು ಅನುಭವಿಸಿದರು. ಮೊಟ್ಟಮೊದಲ ಬಾರಿಗೆ ವಿಶ್ವಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದ್ದ ಬಿಧೂರಿ ಮೂಲತಃ ದಿಲ್ಲಿಯವರು. ಈ ಬಾರಿಯ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಗಳಿಸಿದ ಏಕೈಕ ಪದಕ ಇದಾಗಿದೆ.

ಕಳೆದ ಆರು ತಿಂಗಳಿನಿಂದ ಬೆನ್ನುನೋವು ಸಮಸ್ಯೆಯಿಂದ ಬಳಲುತ್ತಿದ್ದ ಬಿಧೂರಿ (24), ನೋವಿನ ನಡುವೆಯೂ ಪದಕದ ಸಾಧನೆ ಮಾಡಿದ್ದಾರೆ. ಕಳೆದ ಕೆಲ ತಿಂಗಳಿನಿಂದ ಅವರ ಬೆನ್ನುನೋವು ಸಮಸ್ಯೆ ತೀವ್ರವಾಗಿತ್ತು.

"ಇತಿಹಾಸ ಸೃಷ್ಟಿಸುವುದು ನನ್ನ ಗುರಿಯಾಗಿತ್ತು. ನನ್ನ ತರಬೇತುದಾರರು ಹಾಗೂ ತಂಡದ ಇತರರು ಸಾಕಷ್ಟು ಸಹಾಯ ಮಾಡಿದರು. ನನ್ನ ನೋವಿನ ಕಥೆಯ ಅರಿವಿದ್ದ ಅವರು ಪ್ರತಿ ಹಂತದಲ್ಲಿ ನೆರವು ನೀಡಿದ್ದರು. ಈ ಪದಕ ತಂದೆಗೆ ಸಮರ್ಪಣೆ" ಎಂದು ಬಿಧೂರಿ ಭಾವುಕರಾಗಿ ನುಡಿದರು.

ಟ್ಯೂನೇಶಿಯಾದ ಬಿಲಾಲ್ ಹಮ್ಡಿ ಅವರನ್ನು ಮಣಿಸಿ ಸೆಮಿಫೈನಲ್ ಪ್ರವೇಶಿಸಿದ ಬಿಧೂರಿಗೆ ಮಂಗಳವಾರವೇ ಪದಕ ಖಚಿತವಾಗಿತ್ತು. 2011ರಲ್ಲಿ ವಿಕಾಸ್‌ಕೃಷ್ಣ ಪದಕ ಗೆದ್ದ ಬಳಿಕ ಆ ಸಾಧನೆ ಮಾಡಿದ ಮೊದಲ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ. ವಿಕಾಸ್ ಅವರನ್ನು ಹೊರತುಪಡಿಸಿ ವಿಜೇಂದ್ರ ಸಿಂಗ್ (2009) ಹಾಗೂ ಶಿವ ಥಾಪಾ (2015) ಅವರು ಭಾರತಕ್ಕೆ ಪದಕ ಗೆದ್ದುಕೊಟ್ಟಿದ್ದರು.

ಸೆಮಿಫೈನಲ್‌ನಲ್ಲಿ ರೇಗನ್‌ನ ಬ್ರೆಡ್ ಅಂಡ್ ಬಟರ್ ದಾಳಿಗೆ ತುತ್ತಾದ ಬಿಧೂರಿ, ಎದುರಾಳಿಯ ಮಿಂಚಿನ ಪಂಚ್‌ಗೆ ಮಣಿದರು. ಎರಡನೆ ಸುತ್ತಿನ ವೇಳೆಗೆ ಆಟದ ಲಯ ಕಂಡುಕೊಂಡ ಅಮೆರಿಕನ್ ಬಾಕ್ಸರ್ ಎದುರು ಭಾರತೀಯ ಬಾಕ್ಸರ್ ಪ್ರತಿರೋಧ ತೋರಿದರೂ, ಉದಯೋನ್ಮುಖ ಪಟುವಿನ ತಾಂತ್ರಿಕ ಕೌಶಲಕ್ಕೆ ಮಣಿಯಬೇಕಾಯಿತು. ಅಂತಿಮವಾಗಿ ಎಲ್ಲ ಐದು ಮಂದಿ ತೀರ್ಪುಗಾರರು ಕೂಡಾ ರೇಗನ್ ಪರವಾಗಿ 30-27 ಅಂಕಗಳ ತೀರ್ಪು ಪ್ರಕಟಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News