ಐಸಿಸಿ ವಿಶ್ವಕಪ್: ನೇರ ಪ್ರವೇಶ ಗಿಟ್ಟಿಸಲು ಶ್ರೀಲಂಕಾ ವಿಫಲ

Update: 2017-09-01 06:43 GMT

ದುಬೈ, ಸೆ.1:ಪ್ರಸ್ತುತ ನಡೆಯುತ್ತಿರುವ ಭಾರತ ವಿರುದ್ಧದ ಏಕದಿನ ಸರಣಿಯಲ್ಲಿ ಕನಿಷ್ಠ 2 ಪಂದ್ಯಗಳನ್ನು ಗೆಲ್ಲಲು ವಿಫಲವಾಗಿರುವ ಶ್ರೀಲಂಕಾ ತಂಡ 2019ರಲ್ಲಿ ನಡೆಯಲಿರುವ ಐಸಿಸಿ ವಿಶ್ವಕಪ್‌ನಲ್ಲಿ ನೇರ ಪ್ರವೇಶ ಗಿಟ್ಟಿಸಿಕೊಳ್ಳುವ ಅವಕಾಶದಿಂದ ವಂಚಿತವಾಗಿದೆ.

ಇಂಗ್ಲೆಂಡ್‌ನಲ್ಲಿ 2019ರ ಮೇ 30 ರಿಂದ ಜುಲೈ 15ರ ತನಕ ಐಸಿಸಿ ಆಯೋಜಿಸಿರುವ 50 ಓವರ್‌ಗಳ ಮೆಗಾ ಸ್ಪರ್ಧೆಗೆ 1996ರ ವಿಶ್ವ ಚಾಂಪಿಯನ್ ತಂಡ ಶ್ರೀಲಂಕಾಕ್ಕೆ ನೇರ ಪ್ರವೇಶ ಗಿಟ್ಟಿಸಿಕೊಳ್ಳಲು ಭಾರತ ವಿರುದ್ಧ ಸರಣಿಯಲ್ಲಿ 2 ಪಂದ್ಯಗಳನ್ನು ಗೆಲ್ಲಲೇಬೇಕಾಗಿತ್ತು. ಆತಿಥೇಯ ಇಂಗ್ಲೆಂಡ್ ತಂಡವಲ್ಲದೆ ಇತರ ಏಳು ತಂಡಗಳು ಸೆ.30ರೊಳಗೆ ವಿಶ್ವಕಪ್‌ಗೆ ನೇರ ಪ್ರವೇಶ ಪಡೆಯುತ್ತವೆ.

 ಇದೀಗ ಭಾರತ ವಿರುದ್ಧ ಸರಣಿಯಲ್ಲಿ ಶ್ರೀಲಂಕಾ ಸತತ 4 ಪಂದ್ಯಗಳನ್ನು ಸೋತಿದೆ. ಮುಂಬರುವ ಪಂದ್ಯಗಳಲ್ಲಿ ವೆಸ್ಟ್‌ಇಂಡೀಸ್ ತಂಡ ಕನಿಷ್ಠ ಒಂದು ಪಂದ್ಯವನ್ನು ಸೋತರೆ ಶ್ರೀಲಂಕಾಕ್ಕೆ ವಿಶ್ವಕಪ್‌ಗೆ ಅರ್ಹತೆ ಪಡೆಯುವ ಅವಕಾಶ ಸಿಗಬಹುದು.

ಒಂದು ವೇಳೆ ಶ್ರೀಲಂಕಾ ತಂಡ ಭಾರತ ವಿರುದ್ಧದ 5ನೆ ಪಂದ್ಯವನ್ನು ಜಯಿಸಿದರೆ ಒಟ್ಟು 88 ಅಂಕ ಗಳಿಸುತ್ತದೆ. ಆದರೆ ಇದು ವಿಶ್ವಕಪ್‌ಗೆ ನೇರ ಪ್ರವೇಶ ಪಡೆಯಲು ಸಾಕಾಗುವುದಿಲ್ಲ.

ಪ್ರಸ್ತುತ 88 ಅಂಕ ಗಳಿಸಿರುವ ವೆಸ್ಟ್‌ಇಂಡೀಸ್ ಮುಂಬರುವ ಆರು ಏಕದಿನ ಪಂದ್ಯಗಳನ್ನು ಜಯಿಸಿದರೆ ಶ್ರೀಲಂಕಾವನ್ನು ಹಿಂದಿಕ್ಕುವ ಉತ್ತಮ ಅವಕಾಶವಿದೆ. ವಿಂಡೀಸ್ ತಂಡ ಐರ್ಲೆಂಡ್ ವಿರುದ್ಧ 1 ಪಂದ್ಯ ಹಾಗೂ ಇಂಗ್ಲೆಂಡ್‌ನ ವಿರುದ್ದ ಸೆ.19 ರಿಂದ 29ರ ತನಕ ಐದು ಪಂದ್ಯಗಳ ಏಕದಿನ ಸರಣಿಯನ್ನಾಡಲಿದೆ.

ಐಸಿಸಿ ವಿಶ್ವಕಪ್‌ಗೆ ನೇರ ಪ್ರವೇಶ ಪಡೆಯದ ತಂಡಗಳಿಗೆ ಅರ್ಹತಾ ಟೂರ್ನಮೆಂಟ್‌ನಲ್ಲಿ ಆಡುವ ಮತ್ತೊಂದು ಅವಕಾಶವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News