ಎರಡು ಗಂಟೆ ಬ್ಯಾಟಿಂಗ್ ಮಾಡಿ ನಾಲ್ಕೂವರೆ ಕೆ.ಜಿ. ತೂಕ ಕಳೆದುಕೊಂಡ ಆಸೀಸ್ ಕ್ರಿಕೆಟಿಗ..!
ಚಿತ್ತಗಾಂಗ್,ಸೆ.6: ಆತಿಥೇಯ ಬಾಂಗ್ಲಾದೇಶ ವಿರುದ್ಧದ ಎರಡನೆ ಕ್ರಿಕೆಟ್ ಟೆಸ್ಟ್‌ನಲ್ಲಿ ಆಸ್ಟ್ರೇಲಿಯದ ಯುವ ದಾಂಡಿಗ ಪೀಟರ್ ಹ್ಯಾಂಡ್ಸ್‌ಕಂಬ್ ಚಿತ್ತಗಾಂಗ್‌ನ ಉರಿ ಬಿಸಿಲಲ್ಲಿ ಎರಡು ಗಂಟೆಗಳ ಕಾಲ ಕ್ರೀಸ್‌ನಲ್ಲಿ ಬ್ಯಾಟಿಂಗ್ ನಡೆಸಿ ಸುಮಾರು 4.5 ಕೆ.ಜಿ ತೂಕ ಕಳೆದುಕೊಂಡಿದ್ದಾರೆ.
ಟೆಸ್ಟ್‌ನ ಎರಡನೆ ದಿನವಾಗಿರುವ ಮಂಗಳವಾರ ಅವರು 113 ಎಸೆತಗಳಲ್ಲಿ 69 ರನ್ ಗಳಿಸಿ ಕ್ರೀಸ್‌ನಲ್ಲಿದ್ದರು. ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ವಾರ್ನರ್ ಮತ್ತು ಹ್ಯಾಂಡ್ಸ್‌ಕಂಬ್ ಬ್ಯಾಟಿಂಗ್ ನಡೆಸಿದ್ದರು.
ಎರಡು ಟೆಸ್ಟ್‌ಗಳ ಸರಣಿಯ ಮೊದಲ ಟೆಸ್ಟ್‌ನಲ್ಲಿ ಅಸ್ಟ್ರೇಲಿಯ ಆತಿಥೇಯ ಬಂಗ್ಲಾ ವಿರುದ್ಧ 20 ರನ್‌ಗಳ ಸೋಲು ಅನುಭವಿಸಿತ್ತು. ಈ ಕಾರಣದಿಂದಾಗಿ ಸರಣಿ ಸೋಲು ತಪ್ಪಿಸಲು ಅಸ್ಟ್ರೇಲಿಯಕ್ಕೆ ಎರಡನೆ ಟೆಸ್ಟ್‌ನಲ್ಲಿ ಗೆಲುವು ಅನಿವಾರ್ಯವಾಗಿದೆ.
ಬಾಂಗ್ಲಾ ಮೊದಲ ಇನಿಂಗ್ಸ್‌ನಲ್ಲಿ 305 ರನ್‌ಗಳಿಗೆ ಆಲೌಟಾಗಿತ್ತು. ಬಳಿಕ ಮೊದಲ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯ 98ಕ್ಕೆ 2 ವಿಕೆಟ್ ಕಳೆದುಕೊಂಡಿತ್ತು. ಈ ಹಂತದಲ್ಲಿ ವಾರ್ನರ್‌ಗೆ ಜೊತೆಯಾದ ಹ್ಯಾಂಡ್ಸ್‌ಕಂಬ್ ಮೂರನೆ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 127 ರನ್ ಸೇರಿಸಲು ನೆರವಾದರು.
ಚಿತ್ತಗಾಂಗ್ ಪಿಚ್‌ನಲ್ಲಿ ಬ್ಯಾಟಿಂಗ್ ನಡೆಸುವುದು ಸವಾಲಾಗಿ ಪರಿಣಮಿಸಿತ್ತು. ವಾತಾವರಣದ ಉಷ್ಣತೆ 30 ಡಿಗ್ರಿ ಸೆಲ್ಸಿಯಸ್ ಏರಿತ್ತು. ತೇವಾಂಶ ಮಟ್ಟ ಶೇ 80ಕ್ಕೆ ತಲುಪಿತ್ತು. ಹ್ಯಾಂಡ್ಸ್‌ಕಂಬ್ ವಾತಾವರಣದ ಬಿಸಿ ತಾಳಲಾರದೆ ಒದ್ದಾಡಿದ್ದರೂ ಕ್ರೀಸ್ ಬಿಟ್ಟು ತೆರಳಲಿಲ್ಲ. ಆದರೆ ಆಟ ಕೊನೆಗೊಳ್ಳುವ ಹೊತ್ತಿಗೆ ನಡೆದುಕೊಂಡು ಹೋಗಲು ಸಾಧ್ಯವಾಗದಷ್ಟು ಬಳಲಿದ್ದರು. ಆಸ್ಟ್ರೇಲಿಯದ ವೈದ್ಯರ ತಂಡ ಬಳಿ ಧಾವಿಸಿ ಅವರಿಗೆ ಚಿಕಿತ್ಸೆ ನೀಡಿದ್ದರು.
ಮೂರನೆ ದಿನ ಬುಧವಾರ ಮಳೆಯಿಂದಾಗಿ ವಾತಾವರಣ ತಂಪಾಗಿತ್ತು. ವಾರ್ನರ್ ಜೊತೆ ಬ್ಯಾಟಿಂಗ್ ಮುಂದುವರಿಸಿದ ಹ್ಯಾಂಡ್ಸ್‌ಕಂಬ್ ಶತಕ ವಂಚಿತಗೊಂಡರು. 144 ಎಸೆತಗಳನ್ನು ಎದುರಿಸಿ 6 ಬೌಂಡರಿಗಳ ಸಹಾುದಿಂದ 82 ರನ್ ಗಳಿಸಿ ರನೌಟಾದರು.