ಫಿಫಾ ವಿಶ್ವಕಪ್‌ಗೆ ಕೊರಿಯಾ, ಸೌದಿ ತೇರ್ಗಡೆ

Update: 2017-09-06 18:20 GMT

ಟೆಹ್ರಾನ್, ಸೆ.6: ದಕ್ಷಿಣ ಕೊರಿಯಾ ಹಾಗೂ ಸೌದಿ ಅರೇಬಿಯ ಮುಂದಿನ ವರ್ಷ ರಶ್ಯದಲ್ಲಿ ನಡೆಯಲಿರುವ ಫಿಫಾ ವಿಶ್ವಕಪ್‌ಗೆ ಅರ್ಹತೆ ಗಿಟ್ಟಿಸಿಕೊಂಡಿವೆ.

 ಇರಾನ್ ವಿರುದ್ಧ 2-2 ರಿಂದ ಡ್ರಾ ಸಾಧಿಸಿದ ಸಿರಿಯಾ ಪ್ಲೇ-ಆಫ್‌ನಲ್ಲಿ ಆಡುವ ಅವಕಾಶ ಪಡೆದುಕೊಂಡಿದೆ. ಸಿರಿಯಾ ಅಕ್ಟೋಬರ್‌ನಲ್ಲಿ ನಡೆಯಲಿರುವ ಪ್ಲೇ-ಆಫ್‌ನಲ್ಲಿ ಆಸ್ಟ್ರೇಲಿಯ ವಿರುದ್ಧ ಎರಡು ಪಂದ್ಯಗಳನ್ನು ಆಡಲಿದೆ. ಈ ಪಂದ್ಯದಲ್ಲಿ ಜಯ ಸಾಧಿಸುವ ತಂಡ ವಿಶ್ವಕಪ್‌ನಲ್ಲಿ ಸ್ಥಾನ ಪಡೆಯಲು ನವೆಂಬರ್‌ನಲ್ಲಿ ನಡೆಯುವ ಇಂಟರ್‌ಕಾಂಟಿನೆಂಟಲ್ ಪ್ಲೇ-ಆಫ್‌ನಲ್ಲಿ ಜಯ ಸಾಧಿಸಬೇಕು.

ಏಷ್ಯಾ ಅರ್ಹತಾ ಗ್ರೂಪ್ ಪಂದ್ಯಗಳಲ್ಲಿ ದಕ್ಷಿಣ ಕೊರಿಯಾ ತಂಡ ಉಝ್ಬೆಕಿಸ್ತಾನದ ವಿರುದ್ಧ ಗೋಲುರಹಿತ ಡ್ರಾ ಸಾಧಿಸಿ ಸತತ 10ನೆ ಬಾರಿ ವಿಶ್ವಕಪ್‌ಗೆ ತೇರ್ಗಡೆಯಾಗಿದೆ. ಜಪಾನ್ ವಿರುದ್ಧ 1-0 ಅಂತರದಿಂದ ಜಯ ಸಾಧಿಸಿರುವ ಸೌದಿ ಅರೇಬಿಯ ತಂಡ ಕೂಡ ವಿಶ್ವಕಪ್‌ಗೆ ಟಿಕೆಟ್ ಪಡೆದುಕೊಂಡಿತು.

 ಫಹಾದ್ ಅಲ್ ಮುನ್ವಲ್ಲಾಡ್ 63ನೆ ನಿಮಿಷದಲ್ಲಿ ಬಾರಿಸಿದ ಏಕೈಕ ಗೋಲಿನ ನೆರವಿನಿಂದ ಜಪಾನ್ ತಂಡವನ್ನು ಮಣಿಸಿದ ಸೌದಿ ತಂಡ ‘ಬಿ’ ಗುಂಪಿನಲ್ಲಿ ಎರಡನೆ ಸ್ಥಾನ ಪಡೆಯಿತು. ಈ ಮೂಲಕ ಐದನೆ ಬಾರಿ ವಿಶ್ವಕಪ್‌ಗೆ ಅರ್ಹತೆ ಪಡೆದುಕೊಂಡಿದೆ. 2006ರ ಬಳಿಕ ಮೊದಲ ಬಾರಿ ವಿಶ್ವಕಪ್‌ಗೆ ತೇರ್ಗಡೆಯಾಗಿದೆ.

ಕೊರಿಯಾ, ಸೌದಿ, ಜಪಾನ್ ಹಾಗೂ ಇರಾನ್ ವಿಶ್ವಕಪ್‌ಗೆ ಅರ್ಹತೆ ಪಡೆದಿರುವ ಏಷ್ಯಾ ತಂಡಗಳಾಗಿದ್ದು, 2014ರ ವಿಶ್ವಕಪ್‌ನಲ್ಲಿ ನಿರಾಶಾದಾಯಕ ಪ್ರದರ್ಶನವನ್ನು ಉತ್ತಮಪಡಿಸಿಕೊಳ್ಳುವ ವಿಶ್ವಾಸದಲ್ಲಿವೆ. ಏಷ್ಯಾ ತಂಡ ಯಾವ ತಂಡಗಳೂ ವಿಶ್ವಕಪ್‌ನಲ್ಲಿ ನಾಕೌಟ್ ಹಂತ ತಲುಪಿಲ್ಲ.

ಉಝ್ಬೆಕಿಸ್ತಾನದ ವಿರುದ್ಧ ಹಲವು ಅವಕಾಶವನ್ನು ಕೈಚೆಲ್ಲುವ ಮೂಲಕ ಗೋಲುರಹಿತ ಡ್ರಾ ಸಾಧಿಸಿರುವ ದಕ್ಷಿಣ ಕೊರಿಯಾ ಗ್ರೂಪ್ ಎ ಯಿಂದ ವಿಶ್ವಕಪ್‌ಗೆ ಅರ್ಹತೆ ಪಡೆಯಿತು.

ಬಿ ಗುಂಪಿನಲ್ಲಿ ಆಸ್ಟ್ರೇಲಿಯ ತಂಡ ಥಾಯ್ಲೆಂಡ್ ವಿರುದ್ಧ 2-1 ರಿಂದ ಜಯ ಸಾಧಿಸಿದೆ. ಆದರೆ, ಗೋಲು ವ್ಯತ್ಯಾಸದ ಕಾರಣ ವಿಶ್ವಕಪ್‌ಗೆ ನೇರ ಪ್ರವೇಶ ಪಡೆಯಲು ವಿಫಲವಾಯಿತು.

ಇರಾಕ್ ವಿರುದ್ಧ 1-0 ಅಂತರದಿಂದ ಸೋತಿರುವ ಯುಎಇ ಬಿ ಗುಂಪಿನಲ್ಲಿ 4ನೆ ಸ್ಥಾನ ಪಡೆದು ವಿಶ್ವಕಪ್‌ಗೆ ಅರ್ಹತೆ ಪಡೆಯುವ ಅವಕಾಶ ಕಳೆದುಕೊಂಡಿತು.

ಸಿರಿಯಾ-ಇರಾನ್ ಪಂದ್ಯ ಡ್ರಾ

 ಟೆಹ್ರಾನ್‌ನಲ್ಲಿ ಸಿರಿಯಾ ಹಾಗೂ ಇರಾನ್ ನಡುವಿನ ಅಂತಿಮ ಸುತ್ತಿನ ಪಂದ್ಯ 2-2 ರೋಚಕ ಡ್ರಾನಲ್ಲಿ ಕೊನೆಗೊಂಡಿತು.

 ಸಿರಿಯಾ ತಂಡ ಟಿಎಚ್ ಮುಹಮ್ಮದ್ 13ನೆ ನಿಮಿಷದಲ್ಲಿ ಬಾರಿಸಿದ ಗೋಲಿನ ನೆರವಿನಿಂದ 1-0 ಮುನ್ನಡೆ ಸಾಧಿಸಿತು. ಇರಾನ್‌ನ ಸರ್ದಾರ್ ಅಝ್‌ವೌನ್ 45 ಹಾಗೂ 64ನೆ ನಿಮಿಷದಲ್ಲಿ ಗೋಲು ಬಾರಿಸಿ ತಂಡಕ್ಕೆ 2-1 ಮುನ್ನಡೆ ಒದಗಿಸಿಕೊಟ್ಟಿದ್ದರು. ಆದರೆ, ಹೆಚ್ಚುವರಿ ಸಮಯದಲ್ಲಿ(93ನೆ ನಿಮಿಷ) ಗೋಲು ಬಾರಿಸಿದ ಉಮರ್ ಅಲ್‌ಸೊಮ್ ಸಿರಿಯಾ 2-2 ರಿಂದ ಸಮಬಲ ಸಾಧಿಸಲು ನೆರವಾದರು.

ಈ ಸಾಧನೆಯ ಮೂಲಕ ಸಿರಿಯಾ ಮೊದಲ ಬಾರಿ ವಿಶ್ವಕಪ್‌ಗೆ ಅರ್ಹತೆ ಪಡೆಯುವ ವಿಶ್ವಾಸವನ್ನು ಹೆಚ್ಚಿಸಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News