ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಬ್ರೆಂಡನ್ ದಾಖಲೆ ಮುರಿದ ಕೊಹ್ಲಿ
ಕೊಲಂಬೊ, ಸೆ.7: ಭಾರತದ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಬುಧವಾರ ನಡೆದ ಶ್ರೀಲಂಕಾ ವಿರುದ್ಧದ ಏಕೈಕ ಟ್ವೆಂಟಿ-20 ಕ್ರಿಕೆಟ್ ಪಂದ್ಯದಲ್ಲಿ ವೆಗವಾಗಿ 82 ರನ್ ದಾಖಲಿಸುವ ಮೂಲಕ ಚೇಸಿಂಗ್‌ನಲ್ಲಿ ಬ್ರೆಂಡನ್ ಮೆಕಲಮ್ ದಾಖಲೆ ಮುರಿದಿದ್ದಾರೆ.
ಯಾವುದೇ ಮಾದರಿಯ ಪಂದ್ಯದಲೂ ವಿರಾಟ್ ಕೊಹ್ಲಿ ಬ್ಯಾಟಿಂಗ್ ನಡೆಸಲು ಕ್ರೀಸ್‌ಗೆ ಇಳಿದಾಗ ಅವರ ತಂಡದ ಸಹ ಆಟಗಾರರು ಮತ್ತು ಅಭಿಮಾನಿಗಳು ಅಪಾರ ನೀರೀಕ್ಷೆಯನ್ನುಟ್ಟುಕೊಂಡಿರುತ್ತಾರೆ. ಅವರು ಕ್ರೀಸ್‌ನಲ್ಲಿರುವ ತನಕ ತಂಡಕ್ಕೆ ಅಪಾಯ ಇಲ್ಲ. ಬುಧವಾರ ಆರ್.ಪ್ರೇಮ್‌ದಾಸ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯವೂ ಇದಕ್ಕಿಂತ ಭಿನ್ನವಾಗಿರಲಿಲ್ಲ. ಅವರು ಟೀಮ್ ಇಂಡಿಯಾವನ್ನು ಗೆಲುವಿನ ದಡ ಸೇರಿಸುವ ನಿಟ್ಟಿನಲ್ಲಿ ಬ್ಯಾಟಿಂಗ್ ನಡೆಸಿ ತನ್ನ ಹೆಸರಲ್ಲಿ ಇನ್ನೊಂದು ದಾಖಲೆ ಬರೆದರು.
ಕೊಹ್ಲಿ ಆಕರ್ಷಕ 82 ರನ್ ಗಳಿಸಿ ಶ್ರೀಲಂಕಾ ವಿರುದ್ಧದ ಏಕೈಕ ಟ್ವೆಂಟಿ-20 ಪಂದ್ಯದ ಗೆಲುವಿಗೆ ಟೀಮ್ ಇಂಡಿಯಾಕ್ಕೆ ನೆರವಾದರು. ಇದರೊಂದಿಗೆ ಭಾರತ ಶ್ರೀಲಂಕಾ ವಿರುದ್ಧ ಟೆಸ್ಟ್, ಏಕದಿನ ಮತ್ತು ಟ್ವೆಂಟಿ ಪಂದ್ಯದಲ್ಲಿ ಒಟ್ಟು 9 ಪಂದ್ಯಗಳಲ್ಲಿ 9 -0 ಸರಣಿ ಗೆಲುವಿನ ಸಾಧನೆ ಮಾಡಿದೆ.
2010ರಲ್ಲಿ ಮೂರು ಮಾದರಿಯ ದ್ವಿಪಕ್ಷೀಯ ಕ್ರಿಕೆಟ್ ಸರಣಿಯಯಲ್ಲಿ ಪಾಕಿಸ್ತಾನ ವಿರುದ್ಧ ಆಸ್ಟ್ರೇಲಿಯ 9-0 ಸಾಧನೆ ಮಾಡಿತ್ತು. ಆ ಬಳಿಕ ಈ ಸಾಧನೆ ಮಾಡಿದ ಎರಡನೆ ತಂಡ ಭಾರತ.
ಶ್ರೀಲಂಕಾ ವಿರುದ್ಧ ಭಾರತ ಟೆಸ್ಟ್‌ಸರಣಿಯಲ್ಲಿ 3-0, ಏಕದಿನ ಸರಣಿಯಲ್ಲಿ 5-0 ಮತ್ತು ಏಕೈಕ ಟ್ವೆಂಟಿ-20 ಪಂದ್ಯದಲ್ಲಿ 7 ವಿಕೆಟ್‌ಗಳ ಭರ್ಜರಿ ಗೆಲುವಿನೊಂದಿಗೆ ಶ್ರೀಲಂಕಾ ವಿರುದ್ಧ ಕ್ಲೀನ್ ಸ್ವೀಪ್ ಸಾಧನೆ ಮಾಡಿದೆ.
171 ಗೆಲುವಿನ ಸವಾಲನ್ನು ಪಡೆದ ಭಾರತ ಇನ್ನೂ 4 ಎಸೆತಗಳು ಬಾಕಿ ಇರುವಾಗಲೇ 3 ವಿಕೆಟ್ ನಷ್ಟದಲ್ಲಿ 174 ರನ್ ಗಳಿಸಿತು. ಗೆಲುವಿನ ರೂವಾರಿ ವಿರಾಟ್ ಕೊಹ್ಲಿ ಪಂದ್ಯಶ್ರೇಷ್ಠ ಮತ್ತು ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
28ರ ಹರೆಯದ ಕೊಹ್ಲಿ 54 ಎಸೆತಗಳನ್ನು ಎದುರಿಸಿ 7 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಲ್ಲಿ 82 ರನ್ ಗಳಿಸಿ ಔಟಾಗಿದ್ದರು. ಇದರೊಂದಿಗೆ ಕೊಹ್ಲಿ ಟ್ವೆಂಟಿ-20 ಕ್ರಿಕೆಟ್‌ನ ಚೇಸಿಂಗ್‌ನಲ್ಲಿ ನ್ಯೂಝಿಲೆಂಡ್‌ನ ಮಾಜಿ ನಾಯಕ ಬ್ರೆಂಡನ್ ಮೆಕಲಮ್ ಗಳಿಸಿದ್ದ ರನ್ ದಾಖಲೆಯನ್ನು ಮುರಿದರು. ಮೆಕಮ್ ಚೇಸಿಂಗ್ ಮೂಲಕ 1,006 ರನ್ ಗಳಿಸಿದ್ದರು. ಕೊಹ್ಲಿ 1,016 ರನ್ ಸೇರಿಸುವ ಮೂಲಕ ತನ್ನ ಹೆಸರಿಗೆ ಇನ್ನೊಂದು ದಾಖಲೆಯನ್ನು ಬರೆದಿದ್ದಾರೆ.
ಆಸ್ಟ್ರೇಲಿಯದ ಡೇವಿಡ್ ವಾರ್ನರ್ (892), ನ್ಯೂಝಿಲೆಂಡ್‌ನ ಮಾರ್ಟಿನ್ ಗಪ್ಟಿಲ್(882) ಮತ್ತು ಅಫ್ಘಾನಿಸ್ತಾನದ ಮುಹಮ್ಮದ್ ಶಾಹ್‌ಝಾದ್ (819) ಟ್ವೆಂಟಿ-20 ಕ್ರಿಕೆಟ್‌ನ ಚೇಸಿಂಗ್‌ನಲ್ಲಿ ಗರಿಷ್ಠ ರನ್ ದಾಖಲಿಸಿದ ವಿಶ್ವದ ಇತರ ಆಟಗಾರರು.
ಟ್ವೆಂಟಿ-20 ಕ್ರಿಕೆಟ್ ಚೇಸಿಂಗ್‌ನಲ್ಲಿ ಗರಿಷ್ಠ ರನ್ ದಾಖಲಿಸಿದ ಆಟಗಾರರ ಪೈಕಿ 21 ಇನಿಂಗ್ಸ್‌ಗಳಲ್ಲಿ ಕೊಹ್ಲಿ 84.66 ರನ್ ಸರಾಸರಿ ಹೊಂದಿದ್ದಾರೆ. ಅಲ್ಲದೆ 9 ಇನಿಂಗ್ಸ್‌ಗಳಲ್ಲಿ ಅಜೇಯರಾಗಿ ಉಳಿದಿದ್ದಾರೆ.
ಭಾರತ ತವರಿನಲ್ಲಿ ಮುಂದೆ ಆಸ್ಟ್ರೇಲಿಯ ವಿರುದ್ಧ 5 ಏಕದಿನ ಮತ್ತು 3 ಟ್ವೆಂಟಿ -20ಪಂದ್ಯಗಳ ಸರಣಿಯನ್ನು ಆಡಲಿದ್ದು, ಸೆ.17ರಂದು ಸರಣಿ ಆರಂಭಗೊಳ್ಳಲಿದೆ. ಕೊಹ್ಲಿ ಮತ್ತೆ ತನ್ನ ರನ್ ಮತ್ತು ದಾಖಲೆಯನ್ನು ಇನ್ನಷ್ಟು ಉತ್ತಮಪಡಿಸಲಿದ್ದಾರೆ.