ಸ್ವದೇಶಿ ಏಕದಿನ ಸರಣಿಯಲ್ಲಿ ರಹಾನೆಗೆ ಅವಕಾಶ ಸಿಗುವುದೇ?

Update: 2017-09-15 18:24 GMT

ಚೆನ್ನೈ, ಸೆ.15: ಟೀಮ್ ಇಂಡಿಯಾದ ಆರಂಭಿಕ ಆಟಗಾರ ಶಿಖರ್ ಧವನ್ ಕೌಟುಂಬಿಕ ಕಾರಣದಿಂದ ಆಸ್ಟ್ರೇಲಿಯ ವಿರುದ್ಧದ ಮೊದಲ ಮೂರು ಪಂದ್ಯಗಳಿಂದ ಹೊರಗುಳಿದಿರುವ ಹಿನ್ನೆಲೆಯಲ್ಲಿ ಭಾರತಕ್ಕೆ ದಿಢೀರನೆ ಕೆಲವು ಆಯ್ಕೆಗಳು ಮುಕ್ತವಾಗಿವೆ. ಟೀಮ್ ಮ್ಯಾನೇಜ್‌ಮೆಂಟ್ ಧವನ್ ಬದಲಿ ಆಟಗಾರನನ್ನು ಆಯ್ಕೆ ಮಾಡುವ ಕುರಿತು ಯೋಚಿಸುತ್ತಿಲ್ಲ. ಆದರೆ, ಅಜಿಂಕ್ಯ ರಹಾನೆಗೆ ಬಾಗಿಲು ತೆರೆಯುವ ಸಾಧ್ಯತೆಯಿದೆ.

ಒಂದು ವೇಳೆ ಕೆ.ಎಲ್. ರಾಹುಲ್ ಅವರು ರೋಹಿತ್ ಶರ್ಮರೊಂದಿಗೆ ಇನಿಂಗ್ಸ್ ಆರಂಭಿಸಿದರೆ, ಮಧ್ಯಮ ಕ್ರಮಾಂಕದಲ್ಲಿ ಒಂದು ಸ್ಥಾನ ತೆರವಾಗಲಿದೆ. ಆಗ ರಹಾನೆ ಅವರು ಮನೀಷ್ ಪಾಂಡೆಯೊಂದಿಗೆ ಪೈಪೋಟಿ ನಡೆಸಬೇಕಾಗುತ್ತದೆ.

ರಹಾನೆ ಈ ವರ್ಷಾರಂಭದಲ್ಲಿ ವೆಸ್ಟ್‌ಇಂಡೀಸ್‌ನಲ್ಲಿ ನಡೆದ ಏಕದಿನ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದು, ಒಂದು ಶತಕ ಹಾಗೂ 3 ಅರ್ಧಶತಕಗಳನ್ನು ಬಾರಿಸುವುದರೊಂದಿಗೆ ಸರಣಿಶ್ರೇಷ್ಠ ಗೌರವ ಪಡೆದಿದ್ದರು. ಆದರೆ, ಅವರಿಗೆ ಶ್ರೀಲಂಕಾದಲ್ಲಿ ಕೇವಲ ಒಂದು ಪಂದ್ಯವನ್ನಾಡುವ ಅವಕಾಶ ಲಭಿಸಿತ್ತು. ಭಾರತ ವಿದೇಶಿ ನೆಲದಲ್ಲಿ ಏಕದಿನ ಸರಣಿ ಆಡಿದ್ದಾಗ ರಹಾನೆಗೆ ಹೆಚ್ಚು ಅವಕಾಶ ಲಭಿಸಿತ್ತು. ಆದರೆ, ಸ್ವದೇಶದಲ್ಲಿ ನಡೆದ ಸರಣಿಯ ವೇಳೆ ಅವಕಾಶ ಲಭಿಸಿರುವುದು ತುಂಬಾ ವಿರಳ.

ಉಪಖಂಡಗಳ ಪಿಚ್‌ನಲ್ಲಿ ಮಧ್ಯಮ ಓವರ್‌ಗಳಲ್ಲಿ ಸ್ಟ್ರೈಕ್‌ನ್ನು ರೊಟೇಟ್ ಮಾಡಲು ರಹಾನೆ ಕಷ್ಟಪಡುತ್ತಾರೆ ಎಂದು 2015ರಲ್ಲಿ ಬಾಂಗ್ಲಾದೇಶದ ಸರಣಿಯ ವೇಳೆ ಧೋನಿ ಹೇಳಿರುವ ಮಾತು ರಹಾನೆಗೆ ಅವಕಾಶ ಕಡಿಮೆಯಾಗಲು ಕಾರಣ ಎನ್ನಲಾಗುತ್ತಿದೆ. 79 ಏಕದಿನಗಳಲ್ಲಿ ರಹಾನೆಯ ಸ್ಟ್ರೈಕ್‌ರೇಟ್ 78.35. ಇದು ರೋಹಿತ್ ಶರ್ಮ(85.34) ಹಾಗೂ ವಿರಾಟ್ ಕೊಹ್ಲಿ(91.72) ಅವರಿಗಿಂತ ತುಂಬಾ ಕಡಿಮೆ. 14 ಪಂದ್ಯಗಳ ಬಳಿಕ ಪಾಂಡೆಯ ಸ್ಟ್ರೈಕ್‌ರೇಟ್ 94.80 ರಷ್ಟಿದೆ. ಇದು ರಹಾನೆಗಿಂತ ಅತ್ಯುತ್ತಮವಾಗಿದೆ. ರಾಹುಲ್ ಸ್ಟ್ರೈಕ್‌ರೇಟ್ ಕೂಡ ಕಡಿಮೆಯಿದೆ(80.78). ಆದರೆ ಇದು ರಹಾನೆಗಿಂತ ಉತ್ತಮವಾಗಿದೆ. ಕೊಹ್ಲಿಗೆ ಕರ್ನಾಟಕದ ಬ್ಯಾಟ್ಸ್ ಮನ್ ಮೇಲೆ ನಂಬಿಕೆ ಜಾಸ್ತಿಯಿದೆ.

2015ರಲ್ಲಿ ಆಸ್ಟ್ರೇಲಿಯ ಹಾಗೂ ನ್ಯೂಝಿಲೆಂಡ್‌ನ ಜಂಟಿ ಆತಿಥ್ಯದಲ್ಲಿ ನಡೆದಿದ್ದ ವಿಶ್ವಕಪ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ರಹಾನೆ ತಾನು ಅಗ್ರ ಇಲ್ಲವೇ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬಲ್ಲೆ ಎಂದು ತೋರಿಸಿಕೊಟ್ಟಿದ್ದರು.

‘‘ರಹಾನೆ ಯಾವುದೇ ವಾತಾವರಣದಲ್ಲಿ, ಯಾವುದೇ ಕ್ರಮಾಂಕದಲ್ಲಿ ಆಡಬಲ್ಲ ಓರ್ವ ವಿಶೇಷ ಆಟಗಾರ. ಈ ಮೊದಲು ರಹಾನೆ ಏಕದಿನ ಕ್ರಿಕೆಟ್‌ನಲ್ಲಿ ಇನಿಂಗ್ಸ್ ಆರಂಭಿಸಬೇಕೆಂದು ನಿರೀಕ್ಷಿಸಲಾಗುತ್ತಿತ್ತು. ಆದರೆ ಅವರು ಮಧ್ಯಮಕ್ರಮಾಂಕದಲ್ಲಿ ಚೆನ್ನಾಗಿ ಆಡಬಲ್ಲರು ಎನ್ನುವುದಕ್ಕೆ 2015ರ ವಿಶ್ವಕಪ್ ಸಾಕ್ಷಿಯಾಗಿತ್ತು’’ ಎಂದು ಭಾರತದ ಮಾಜಿ ಆಟಗಾರ ಹಾಗೂ ರಹಾನೆಯ ಕೋಚ್ ಪ್ರವೀಣ್ ಆಮ್ರೆ ಹೇಳಿದ್ದಾರೆ.

ಒಂದು ವೇಳೆ ರಹಾನೆ ರವಿವಾರ ನಡೆಯಲಿರುವ ಮೊದಲ ಪಂದ್ಯದಲ್ಲಿ ಅವಕಾಶ ಪಡೆಯದೇ ಇದ್ದರೆ ಮುಂಬರುವ ದಿನಗಳಲ್ಲಿ ಸ್ವದೇಶದಲ್ಲಿ ಏಕದಿನ ಸರಣಿ ಆಡುವ ಅವಕಾಶ ಸಿಗುವ ಸಾಧ್ಯತೆಯಿದೆ.

2019ರ ವಿಶ್ವಕಪ್‌ಗೆ ಮೊದಲು ಒಂದೂವರೆ ವರ್ಷಗಳಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕ, ಇಂಗ್ಲೆಂಡ್, ನ್ಯೂಝಿಲೆಂಡ್ ಹಾಗೂ ಆಸ್ಟ್ರೇಲಿಯ ತಂಡದ ವಿರುದ್ಧ ಆಡಲಿದೆ. ರಹಾನೆಗೆ ಮಧ್ಯಮ ಕ್ರಮಾಂಕದಲ್ಲಿ ಅವಕಾಶ ನೀಡುವ ಅಗತ್ಯವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News