×
Ad

ನಾಳೆಯಿಂದ ಜಪಾನ್ ಓಪನ್ ಆರಂಭ

Update: 2017-09-18 23:26 IST

ಟೋಕಿಯೋ, ಸೆ.18: ಕೊರಿಯಾ ಓಪನ್ ಬ್ಯಾಡ್ಮಿಂಟನ್ ಸೂಪರ್ ಸರಣಿಯ ನೂತನ ಚಾಂಪಿಯನ್ ಪಿ.ವಿ. ಸಿಂಧು ಮಂಗಳವಾರ ಇಲ್ಲಿ ಆರಂಭವಾಗಲಿರುವ 325,000 ಯುಎಸ್ ಡಾಲರ್ ಬಹುಮಾನ ಮೊತ್ತದ ಜಪಾನ್ ಓಪನ್‌ನಲ್ಲಿ ಭಾಗವಹಿಸಲಿದ್ದು, ಈ ಋತುವಿನಲ್ಲಿ ಮೂರನೆ ಸೂಪರ್ ಸರಣಿ ಗೆಲ್ಲುವತ್ತ ಚಿತ್ತವಿರಿಸಿದ್ದಾರೆ.

22ರ ಹರೆಯದ ಸಿಂಧು ರವಿವಾರ ನಡೆದ ಕೊರಿಯಾ ಓಪನ್ ಸೂಪರ್ ಸರಣಿಯ ಮಹಿಳೆಯರ ಸಿಂಗಲ್ಸ್ ಫೈನಲ್‌ನಲ್ಲಿ ಜಪಾನ್‌ನ ನೊರೊಮಿ ಒಕುಹರಾರನ್ನು ಮಣಿಸಿ ಈ ಋತುವಿನಲ್ಲಿ ಎರಡನೆ ಪ್ರಶಸ್ತಿ ಎತ್ತಿ ಹಿಡಿದಿದ್ದರು. ಸಿಂಧು ಜಪಾನ್ ಓಪನ್‌ನ ಮೊದಲ ಸುತ್ತಿನಲ್ಲಿ ಜಪಾನ್ ಆಟಗಾರ್ತಿ ಮಿನಟಸು ಮಿಟಾನಿ ಅವರನ್ನು ಎದುರಿಸುವ ಮೂಲಕ ತನ್ನ ಅಭಿಯಾನ ಆರಂಭಿಸಲಿದ್ದಾರೆ. ಒಂದು ವೇಳೆ ಸಿಂಧು ಮೊದಲ ಸುತ್ತಿನಲ್ಲಿ ಜಯ ಸಾಧಿಸಿದರೆ ವಿಶ್ವ ಚಾಂಪಿಯನ್ ಒಕುಹರಾರನ್ನು ಸತತ ಮೂರನೆ ಟೂರ್ನಮೆಂಟ್‌ನಲ್ಲಿ ಮುಖಾಮುಖಿಯಾಗುವ ಸಾಧ್ಯತೆಯಿದೆ. ಒಕುಹರಾ ಮೊದಲ ಸುತ್ತಿನಲ್ಲಿ ಹಾಂಕಾಂಗ್‌ನ ಚೆವುಂಗ್ ನಗಾನ್ ಯಿ ಅವರನ್ನು ಎದುರಿಸಲಿದ್ದಾರೆ.

ಗ್ಲಾಸ್ಗೋ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚು ಜಯಿಸಿರುವ ಸೈನಾ ಗಾಯದಿಂದ ಚೇತರಿಸಿಕೊಂಡಿದ್ದು, ತನ್ನ ಮೊದಲ ಸುತ್ತಿನ ಪಂದ್ಯದಲ್ಲಿ ಥಾಯ್ಲೆಂಡ್‌ನ ಪೊರ್ನ್ ಪಾವೀ ಚೋಚುವಾಂಗ್‌ರನ್ನು ಎದುರಿಸಲಿದ್ದಾರೆ.

ಶ್ರೇಯಾಂಕರಹಿತ ಸೈನಾ ಎರಡನೆ ಸುತ್ತಿನಲ್ಲಿ ಒಲಿಂಪಿಕ್ಸ್ ಚಾಂಪಿಯನ್ ಕರೋಲಿನಾ ಮರಿನ್‌ರನ್ನು ಎದುರಿಸಲಿದ್ದಾರೆ. ಸ್ಪೇನ್‌ನ ಮರಿನ್ ಮೊದಲ ಸುತ್ತಿನಲ್ಲಿ ಚೀನಾದ ಚೆನ್ ಕ್ಸಿಯಾಕ್ಸಿನ್‌ರನ್ನು ಎದುರಿಸಲಿದ್ದಾರೆ.

 ಇಂಡೋನೇಷ್ಯಾ ಸೂಪರ್ ಸರಣಿ ಹಾಗೂ ಆಸ್ಟ್ರೇಲಿಯ ಸೂಪರ್ ಸರಣಿಯನ್ನು ಜಯಿಸಿರುವ ವಿಶ್ವದ ನಂ.8ನೆ ಆಟಗಾರ ಶ್ರೀಕಾಂತ್ ಮೊದಲ ಸುತ್ತಿನ ಪಂದ್ಯದಲ್ಲಿ ಚೀನಾದ ಮಾಜಿ ನಂ.10ನೆ ಆಟಗಾರ ಟಿಯಾನ್ ಹೌವೀ ಅವರನ್ನು ಎದುರಿಸಲಿದ್ದಾರೆ.

ಶ್ರೀಕಾಂತ್ ಚೀನಾದ ಟಿಯಾನ್ ವಿರುದ್ಧ ಆಡಿರುವ ಏಳು ಪಂದ್ಯಗಳ ಪೈಕಿ ಆರು ಬಾರಿ ಸೋಲನುಭವಿಸಿದ್ದಾರೆ.

ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ಪಾರುಪಲ್ಲಿ ಕಶ್ಯಪ್ ತನ್ನ ಮೊದಲಿನ ಲಯ ಕಂಡುಕೊಳ್ಳಲು ಪರದಾಡುತ್ತಿದ್ದು, ಮೊದಲ ಸುತ್ತಿನಲ್ಲಿ ಡೆನ್ಮಾರ್ಕ್‌ನ ಎಮಿಲ್ ಹೊಸ್ಟ್‌ರನ್ನು ಎದುರಿಸಲಿದ್ದಾರೆ.

ಪುರುಷರ ಸಿಂಗಲ್ಸ್‌ನ ಪ್ರಧಾನ ಸುತ್ತಿನಲ್ಲಿ ಎಚ್.ಎಸ್. ಪ್ರಣಯ್, ಬಿ.ಸಾಯಿ ಪ್ರಣೀತ್ ಹಾಗೂ ವರ್ಮ ಸಹೋದರರಾದ ಸಮೀರ್ ಹಾಗೂ ಸೌರಭ್ ಸ್ಪರ್ಧಿಸಲಿದ್ದಾರೆ.

►ಸಿಂಧು ಮೊದಲ ಸುತ್ತಿನ ಪಂದ್ಯದಲ್ಲಿ ಜಪಾನ್‌ನ ಮಿಟಾನಿ ಅವರನ್ನು ಎದುರಿಸಲಿದ್ದಾರೆ.

►ಕೆ.ಶ್ರೀಕಾಂತ್ ಮತ್ತು ಸೈನಾ ನೆಹ್ವಾಲ್ ಸ್ಪರ್ಧೆಗೆ ಮರಳಲಿದ್ದಾರೆ.

►ಶ್ರೇಯಾಂಕ ರಹಿತ ಸೈನಾ ಎರಡನೆ ಸುತ್ತಿನಲ್ಲಿ ಎರಡು ಬಾರಿ ವಿಶ್ವ ಚಾಂಪಿಯನ್ ಜಯಿಸಿದ ಕೆರೋಲಿನಾ ಮರಿನ್ ಸವಾಲು ಎದುರಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News