×
Ad

ಇನ್ನೊಂದು ಗೆಲುವಿಗೆ ಕಾದಿರುವ ಭಾರತ

Update: 2017-09-20 23:56 IST

ಕೋಲ್ಕತಾ, ಸೆ.20: ಮೊದಲ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಆಸ್ಟ್ರೇಲಿಯ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದ ಟೀಮ್ ಇಂಡಿಯಾ ಗುರುವಾರ ಕೋಲ್ಕತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಲಿರುವ ಎರಡನೆ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಅದೇ ಪ್ರದರ್ಶನ ಮುಂದುವರಿಸುವ ಯೋಜನೆಯಲ್ಲಿದೆ.

ಮಳೆಬಾಧಿತ ಮೊದಲ ಪಂದ್ಯದಲ್ಲಿ ಡಕ್‌ವರ್ಥ್ ಲೂಯಿಸ್ ನಿಯಮದಂತೆ 21 ಓವರ್‌ಗಳಲ್ಲಿ ಗೆಲುವಿಗೆ 164 ರನ್‌ಗಳ ಗೆಲುವಿನ ಸವಾಲು ಪಡೆದಿದ್ದ ಆಸ್ಟ್ರೇಲಿಯ ಗೆಲುವಿನ ದಡ ಸೇರುವಲ್ಲಿ ಎಡವಿತ್ತು.

ಭಾರತದ ಹೊಸ ಸ್ಪಿನ್ ಜೋಡಿ ಕುಲ್‌ದೀಪ್ ಯಾದವ್ ಮತ್ತು ಯುಜುವೇಂದ್ರ ಚಾಹಲ್ ದಾಳಿಯನ್ನು ಎದುರಿಸಲಾರದೆ ಕಳೆದ ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿತ್ತು. ಮುಂದೆಯೂ ಆಸ್ಟ್ರೇಲಿಯಕ್ಕೆ ಇದೇ ಸವಾಲು ಎದುರಾಗಲಿದೆ. ಆಸ್ಟ್ರೇಲಿಯ ಸ್ಥಳೀಯ ಸ್ಪಿನ್ನರ್‌ಗಳ ನೆರವು ಪಡೆದು ಕಳೆದ ಪಂದ್ಯದಲ್ಲಿ ಟೀಮ್ ಇಂಡಿಯಾವನ್ನು ಕಟ್ಟಿ ಹಾಕುವ ನಿಟ್ಟಿನಲ್ಲಿ ತಯಾರಿ ನಡೆಸಿತ್ತು.

ಕೇರಳದ ಕೆ.ಕೆ.ಜಿಯಾಸ್ , ಸ್ಥಳೀಯ ಕ್ರಿಕೆಟ್ ಕ್ಲಬ್‌ಗಳ ಸ್ಪಿನ್ನರ್‌ಗಳಾದ ಅಶುತೋಷ್ ಶಿಬ್ರಮ್ ಮತ್ತು ರುಪಕ್ ಗುಹಾ ಅವರು ಆಸ್ಟ್ರೇಲಿಯ ತಂಡಕ್ಕೆ ಚೆನ್ನೈ ಏಕದಿನ ಪಂದ್ಯದ ಮೊದಲು ಅಭ್ಯಾಸಕ್ಕೆ ನೆರವು ನೀಡಿದ್ದರು.

ಆಸ್ಟ್ರೇಲಿಯಕ್ಕೆ ಗೆಲುವಿನ ಸವಾಲು ಕಠಿಣವಾಗಿರಲಿಲ್ಲ. ಆದರೆ ಚಾಹಲ್ , ಕುಲ್‌ದೀಪ್ ದಾಳಿಯ ಮುಂದೆ ಸ್ಮಿತ್ ತಂಡದ ಬ್ಯಾಟಿಂಗ್ ಸೊರಗಿತ್ತು. 8 ಓವರ್‌ಗಳಲ್ಲಿ 35ಕ್ಕೆ 4 ವಿಕೆಟ್ ಕಳೆದುಕೊಂಡಿದ್ದ ಆಸ್ಟ್ರೇಲಿಯದ ಬ್ಯಾಟಿಂಗ್ ಮುಂದುವರಿಸಿದ್ದ ಗ್ಲೆನ್ ಮ್ಯಾಕ್ಸ್‌ವೆಲ್ 18 ಎಸೆತಗಳಲ್ಲಿ 3 ಬೌಂಡರಿ ಮತ್ತು 4 ಸಿಕ್ಸರ್ ಒಳಗೊಂಡ 39 ರನ್ ಜಮೆ ಮಾಡಿ ಗೆಲುವಿನ ನಿರೀಕ್ಷೆ ಮೂಡಿಸಿದ್ದರು. ಆದರೆ ತಂಡದ ಸಹ ಆಟಗಾರರಿಂದ ತಂಡಕ್ಕೆ ನೆರವು ದೊರೆಯಲಿಲ್ಲ. ಮ್ಯಾಕ್ಸ್ ವೆಲ್‌ಗೆ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲು ಚಾಹಲ್ ಅವಕಾಶ ನೀಡಲಿಲ್ಲ.

 ಹಾರ್ದಿಕ್ ಪಾಂಡ್ಯ ಅವರು ಆಸ್ಟ್ರೇಲಿಯವನ್ನು ಕಳೆದ ಪಂದ್ಯದಲ್ಲಿ ಬ್ಯಾಟಿಂಗ್, ಫೀಲ್ಡಿಂಗ್ ಮತ್ತು ಬೌಲಿಂಗ್‌ನಲ್ಲಿ ಕಾಡಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 4ನೆ ಬಾರಿ ಹ್ಯಾಟ್ರಿಕ್ ಸಿಕ್ಸರ್ ಸಾಧನೆ ಮಾಡಿದ್ದಾರೆ. ಅವರು 66 ಎಸೆತಗಳಲ್ಲಿ 83 ರನ್ ಸಿಡಿಸಿದ್ದರು. ಧೋನಿ ಜೊತೆ 118 ರನ್‌ಗಳ ಜೊತೆಯಾಟ ನೀಡಿದ್ದರು.

ಧೋನಿ 88 ಎಸೆತಗಳಲ್ಲಿ 79 ರನ್ ಗಳಿಸಿದ್ದರು. ಪಾಂಡ್ಯ 2015ರ ಆವೃತ್ತಿಯ ಐಪಿಎಲ್ ಬಳಿಕ ಕ್ರಿಕೆಟ್‌ನಲ್ಲಿ ಓರ್ವ ಪರಿಪೂರ್ಣ ಆಲ್‌ರೌಂಡರ್ ಆಗಿ ಬೆಳೆದಿದ್ದಾರೆ. ಭಾರತ ದೀರ್ಘ ಕಾಲದಿಂದ ಮಧ್ಯಮ ವೇಗಿ ಆಲ್‌ರೌಂಡರ್‌ಗಾಗಿ ಶೋಧ ನಡೆಸಿತ್ತು. ಕೊನೆಗೂ ಪಾಂಡ್ಯ ಸೇರ್ಪಡೆಯೊಂದಿಗೆ ತಂಡದ ಈ ಸಮಸ್ಯೆ ನಿವಾರಣೆಯಾಗಿದೆ. ಆಸ್ಟ್ರೇಲಿಯದ ನಂ.1 ಸ್ಪಿನ್ನರ್ ಆ್ಯಡಮ್ ಝಾಂಪ ಅವರ ಒಂದೇ ಓವರ್‌ನಲ್ಲಿ ಹ್ಯಾಟ್ರಿಕ್ ಸಿಕ್ಸರ್ ಮತ್ತು 1 ಬೌಂಡರಿಗಳನ್ನು ಒಳಗೊಂಡ 23 ರನ್ ಗಳಿಸಿದ್ದರು. ಕೊನೆಗೆ ಝಾಂಪ ಅವರು ಪಾಂಡ್ಯಗೆ ಪೆವಿಲಿಯನ್ ಹಾದಿ ತೋರಿಸಿದ್ದರೂ ಅಷ್ಟರ ವೇಳೆಗೆ ಪಾಂಡ್ಯ ಸಾಕಷ್ಟು ರನ್ ಕಲೆ ಹಾಕಿದ್ದರು.

ಕಳೆದ ಪಂದ್ಯದಲ್ಲಿ ವಾರ್ನರ್ 25 ರನ್ ಗಳಿಸಿದ್ದರು. ಆದರೆ ಸ್ಮಿತ್ 1 ರನ್ ಗಳಿಸಿ ಪಾಂಡ್ಯರಿಗೆ ವಿಕೆಟ್ ಒಪ್ಪಿಸಿದ್ದರು. ಕೊನೆಯ ಹಂತದಲ್ಲಿ ಜೇಮ್ಸ್ ಫಾಕ್ನರ್(ಔಟಾಗದೆ 25) ಮತ್ತು ಝಾಂಪ (ಔಟಾಗದೆ 5) ಹೋರಾಟ ನಡೆಸಿದ್ದರೂ, ಅಷ್ಟರ ವೇಳೆಗೆ ಓವರ್ ಮುಗಿದಿತ್ತು.

 ಟ್ರಾವಿಸ್ ಹೆಡ್ ಅಭ್ಯಾಸ ಪಂದ್ಯದಲ್ಲಿ ಚೆನ್ನಾಗಿ ಆಡಿದ್ದರು. ಆದರೆ ಚೆನ್ನೈ ಪಂದ್ಯದಲ್ಲಿ ಮಿಂಚಲಿಲ್ಲ. ಇದೀಗ ಎರಡನೆ ಪಂದ್ಯದಲ್ಲಿ ಹೆಡ್ ಇನಿಂಗ್ಸ್ ಆರಂಭಿಸುವ ನಿರೀಕ್ಷೆ ಇದೆ. 4ನೆ ಕ್ರಮಾಂಕದಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಅಥವಾ ಮಾರ್ಕಸ್ ಸ್ಟೋನಿಸ್ ಕಣಕ್ಕಿಳಿಯುವ ಸಾಧ್ಯತೆ ಇದೆ. ಭಾರತದ ಅಗ್ರ ಸರದಿ ವಿಫಲವಾಗಿದ್ದರೂ, ಕೆಳ ಕ್ರಮಾಂಕದ ಆಟಗಾರರು ಚೆನ್ನಾಗಿ ಅಡುತ್ತಿದ್ದಾರೆ. ಮಾಜಿ ನಾಯಕ ಧೋನಿ ಕ್ರೀಸ್‌ನಲ್ಲಿ ತಳವೂರಿ ಯುವ ಆಟಗಾರರಿಗೆ ಉತ್ತಮ ಬೆಂಬಲ ನೀಡುತ್ತಿದ್ದಾರೆ. ಭುವನೇಶ್ವರ ಕುಮಾರ್ 30 ಎಸೆತಗಳಲ್ಲಿ 5 ಬೌಂಡರಿಗಳ ಸಹಾಯದಿಂದ 32 ರನ್ ಗಳಿಸಿದ್ದರು.

  ಅಜಿಂಕ್ಯ ರಹಾನೆ ಮತ್ತು ರೋಹಿತ್ ಶರ್ಮ ಮತ್ತೆ ಫಾರ್ಮ್‌ಗೆ ಮರಳುವುದನ್ನು ನಿರೀಕ್ಷಿಸಲಾಗಿದೆ. ಕೊಹ್ಲಿ 2017ನೆ ಸಾಲಿನಲ್ಲಿ 19 ಇನಿಂಗ್ಸ್‌ಗಳಲ್ಲಿ 4 ಶತಕ, 6 ಅರ್ಧಶತಕಗಳನ್ನು ಒಳಗೊಂಡ 1,017 ರನ್ ದಾಖಲಿಸಿದ್ದಾರೆ.

ಭಾರತ ಮತ್ತು ಆಸ್ಟ್ರೇಲಿಯ 2003ರ ನವೆಂಬರ್‌ನಲ್ಲಿ ಕೋಲ್ಕತಾದ ಈಡನ್ ಗಾರ್ಡನ್ಸ್‌ನಲ್ಲಿ ಟಿವಿಎಸ್ ಕಪ್ ಫೈನಲ್‌ನಲ್ಲಿ ಆಡಿದ ಬಳಿಕ ಎರಡನೆ ಏಕದಿನ ಪಂದ್ಯವನ್ನಾಡುತ್ತಿವೆೆ. ನಾಳಿನ ಪಂದ್ಯಕ್ಕೆ ಮಳೆಯ ಭೀತಿ ಎದುರಾಗಿದೆ.

ಭಾರತ: ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ರೋಹಿತ್ ಶರ್ಮ, ಮನೀಷ್ ಪಾಂಡೆ, ಕೇದಾರ್ ಜಾಧವ್, ಎಂ.ಎಸ್.ಧೋನಿ(ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಭುವನೇಶ್ವರ ಕುಮಾರ್, ಕುಲ್‌ದೀಪ್ ಯಾದವ್, ಯುಜುವೇಂದ್ರ ಚಾಹಲ್, ಜಸ್‌ಪ್ರೀತ್ ಬುಮ್ರಾ, ಲೋಕೇಶ್ ರಾಹುಲ್, ರವೀಂದ್ರ ಜಡೇಜ, ಉಮೇಶ್ ಯಾದವ್ ಮತ್ತು ಮುಹಮ್ಮದ್ ಶಮಿ.

 ಆಸ್ಟ್ರೇಲಿಯ: ಸ್ಟೀವ್ ಸ್ಮಿತ್(ನಾಯಕ), ಡೇವಿಡ್ ವಾರ್ನರ್, ಹಿಲ್ಟನ್ ಕಾರ್ಟ್‌ರೈಟ್, ಮಾಥ್ಯೂ ವೇಡ್(ವಿಕೆಟ್ ಕೀಪರ್), ನಥಾನ್ ಕೌಲ್ಟರ್ ನೀಲ್, ಪ್ಯಾಟ್ ಕಮಿನ್ಸ್, ಜೇಮ್ಸ್ ಫಾಕ್ನರ್, ಪೀಟರ್ ಹ್ಯಾಂಡ್ಸ್‌ಕಂಬ್, ಟ್ರಾವಿಸ್ ಹೆಡ್, ಗ್ಲೆನ್ ಮ್ಯಾಕ್ಸ್‌ವೆಲ್, ಆ್ಯಡಮ್ ಝಾಂಪ, ರಿಚರ್ಡ್ಸನ್, ಮಾರ್ಕಸ್ ಸ್ಟೋನಿಸ್ ಮತ್ತು ಆ್ಯರೊನ್ ಫಿಂಚ್.

ಪಂದ್ಯದ ಸಮಯ:

ಮಧ್ಯಾಹ್ನ 1.30 ಗಂಟೆಗೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News