ಲಾವರ್ ಕಪ್: ಮೊದಲ ಬಾರಿ ಡಬಲ್ಸ್ ಪಂದ್ಯವನ್ನಾಡಿದ ನಡಾಲ್-ಫೆಡರರ್

Update: 2017-09-24 14:07 GMT

ಪರಾಗ್ವೆ, ಸೆ.24: ಗ್ರಾನ್‌ಸ್ಲಾಮ್ ಟೂರ್ನಿಯಲ್ಲಿ ಹಲವು ಪಂದ್ಯಗಳಲ್ಲಿ ಮುಖಾಮುಖಿಯಾಗಿರುವ ಟೆನಿಸ್ ದಿಗ್ಗಜರಾದ ರೋಜರ್ ಫೆಡರರ್ ಹಾಗೂ ರಫೆಲ್ ನಡಾಲ್ ಇದೇ ಮೊದಲ ಬಾರಿ ಡಬಲ್ಸ್ ಪಂದ್ಯದಲ್ಲಿ ಜೊತೆಯಾಗಿ ಆಡಿ ವಿಶ್ವದ ಗಮನ ಸೆಳೆದಿದ್ದಾರೆ. ಮುಂದಿನ ದಿನಗಳಲ್ಲಿ ಡಬಲ್ಸ್ ಪಂದ್ಯ ಆಡುವ ಯೋಜನೆಯಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಒಟ್ಟು 35 ಗ್ರಾನ್‌ಸ್ಲಾಮ್ ಪ್ರಶಸ್ತಿಗಳನ್ನು ಜಯಿಸಿರುವ ಫೆಡರರ್ ಹಾಗೂ ನಡಾಲ್ ಲಾವರ್ ಕಪ್‌ನಲ್ಲಿ ಟೀಮ್ ಯುರೋಪ್ ತಂಡವನ್ನು ಪ್ರತಿನಿಧಿಸಿದ್ದಾರೆ.

ವಿಶ್ವದ ಅಗ್ರ ರ್ಯಾಂಕಿನ ಆಟಗಾರರಾದ ನಡಾಲ್ ಹಾಗೂ ಫೆಡರರ್ ಟೀಮ್ ಯುರೋಪ್ ತಂಡಕ್ಕೆ ಟೀಮ್ ವರ್ಲ್ಡ್ ವಿರುದ್ಧ 9-3 ಮುನ್ನಡೆ ಒದಗಿಸಿಕೊಟ್ಟಿದ್ದಾರೆ.

 ಶನಿವಾರ ನಡೆದ ಪುರುಷರ ಡಬಲ್ಸ್‌ನಲ್ಲಿ ನಡಾಲ್-ಫೆಡರರ್ ಅಮೆರಿಕದ ಸ್ಯಾಮ್ ಕ್ವೆರ್ರಿ ಹಾಗೂ ಜಾಕ್ ಸಾಕ್‌ರನ್ನು 6-4, 1-6, 10-5 ಸೆಟ್‌ಗಳ ಅಂತರದಿಂದ ಮಣಿಸಿದರು. ನಡಾಲ್-ಫೆಡರರ್ ಮೊದಲ ಸೆಟ್‌ನ್ನು 6-4 ರಿಂದ ಜಯಿಸಿ ಉತ್ತಮ ಆರಂಭ ಪಡೆದರು. ಎರಡನೆ ಸೆಟ್‌ನ್ನು ಜಯಿಸಿದ ಅಮೆರಿಕದ ಆಟಗಾರರಾದ ಕ್ವೆರ್ರಿ-ಸಾಕ್ ತಿರುಗೇಟು ನೀಡಿದರು. ಮೂರನೆ ಸೆಟ್‌ನ್ನು 10-5 ರಿಂದ ಜಯಿಸಿದ ನಡಾಲ್-ಫೆಡರರ್ ಜಯಭೇರಿ ಬಾರಿಸಿದರು.

ಶನಿವಾರ ನಡೆದ ಸಿಂಗಲ್ಸ್ ಪಂದ್ಯದಲ್ಲಿ ಆಸ್ಟ್ರೇಲಿಯನ್ ಹಾಗೂ ವಿಂಬಲ್ಡನ್ ಓಪನ್ ಚಾಂಪಿಯನ್, ವಿಶ್ವದ ನಂ.2ನೆ ಆಟಗಾರ ಫೆಡರರ್ 16ನೆ ರ್ಯಾಂಕಿನ ಕ್ವೆರ್ರಿ ವಿರುದ್ಧ 6-4, 6-2 ಅಂತರದಿಂದ ಜಯ ಸಾಧಿಸಿದರು.

ಈ ವರ್ಷ ಫ್ರೆಂಚ್ ಹಾಗೂ ಯುಎಸ್ ಓಪನ್ ಪ್ರಶಸ್ತಿ ಜಯಿಸಿರುವ ವಿಶ್ವದ ನಂ.1 ಆಟಗಾರ ನಡಾಲ್ 21ನೆ ರ್ಯಾಂಕಿನ ಸಾಕ್ ವಿರುದ್ಧ 6-3, 3-6, 11-9 ಅಂತರದಿಂದ ಗೆಲುವು ಸಾಧಿಸಿದರು.

 ‘‘ಮುಂದಿನ ದಿನಗಳಲ್ಲಿ ನಾವಿಬ್ಬರೂ ಡಬಲ್ಸ್ ಪಂದ್ಯವನ್ನಾಡುವ ಯೋಜನೆ ಹಾಕಿಕೊಂಡಿಲ್ಲ’’ ಎಂದು ನಡಾಲ್ ಹಾಗೂ ಫೆಡರರ್ ಸ್ಪಷ್ಟಪಡಿಸಿದರು.

ಲಾವರ್ ಕಪ್ ಟೂರ್ನಮೆಂಟ್ ಎಟಿಪಿ ಟೂರ್‌ನ ಭಾಗವಾಗಿಲ್ಲವಾದರೂ ಇದು ಟೆನಿಸ್‌ನ ವಿಶ್ವ ಶ್ರೇಷ್ಠ ಆಟಗಾರರನ್ನು ಆಕರ್ಷಿಸಿದೆ. ಟೀಮ್ ಯುರೋಪ್‌ನಲ್ಲಿ ಫೆಡರರ್-ನಡಾಲ್‌ರಲ್ಲದೆ, ಅಲೆಕ್ಸಾಂಡರ್ ಝ್ವೆರೆವ್, ಡೊಮಿನಿಕ್ ಥೀಮ್, ಮರಿನ್ ಸಿಲಿಕ್ ಹಾಗೂ ಥಾಮಸ್ ಬೆರ್ಡಿಕ್ ಅವರಿದ್ದಾರೆ. ಟೀಮ್ ವರ್ಲ್ಡ್‌ನಲ್ಲಿ ನಿಕ್ ಕಿರ್ಗಿಯೊಸ್, ಡೆನಿಸ್ ಶಪೊವಾಲೊವ್, ಜಾನ್ ಇಸ್ನೆರ್, ಫ್ರಾನ್ಸಿಸ್ ಟಿಯಾಫೊ, ಜಾರ್ನ್ ಬೊರ್ಗ್ ಹಾಗೂ ಜಾನ್ ಮೆಕ್‌ಎನ್ರೊ ಅವರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News