ಇಂದೋರ್‌ನಲ್ಲಿ ಧೋನಿ ಹೊಸ ದಾಖಲೆ

Update: 2017-09-24 18:03 GMT

ಇಂದೋರ್, ಸೆ.24: ವಿಕೆಟ್ ಕೀಪರ್ ಧೋನಿ ಭಾರತದ ಪರ ಆಡಿರುವ ಏಕದಿನ ಕ್ರಿಕೆಟ್‌ನಲ್ಲಿ ಸ್ಟಂಪಿಂಗ್‌ನಲ್ಲಿ ಶತಕ ಪೂರ್ಣಗೊಳಿಸಿರುವ ಹೊಸ ದಾಖಲೆ ಬರೆದಿದ್ದಾರೆ.

ಧೋನಿ ಇಂದೋರ್‌ನಲ್ಲಿ ರವಿವಾರ ಆಸ್ಟ್ರೇಲಿಯ ವಿರುದ್ಧದ ಮೂರನೆ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ 43ನೆ ಓವರ್‌ನಲ್ಲಿ ಯುಜುವೇಂದ್ರ ಚಾಹಲ್ ಎಸೆತದಲ್ಲಿ ಆಸ್ಟ್ರೇಲಿಯದ ಸ್ಫೋಟಕ ದಾಂಡಿಗ ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು ಸ್ಟಂಪ್ ಮಾಡುವ ಮೂಲಕ ಸ್ಟಂಪಿಂಗ್ ದಾಖಲೆಯನ್ನು 100ಕ್ಕೆ ಏರಿಸಿದರು.

304ನೆ ಏಕದಿನ ಪಂದ್ಯವನ್ನಾಡಿದ ಧೋನಿ ಅವರು ಮ್ಯಾಕ್ಸ್‌ವೆಲ್‌ರನ್ನು ಸ್ಟಂಪ್ ಮಾಡಿದ ಬಳಿಕ ಆಸ್ಟ್ರೇಲಿಯ ಕುಸಿತದ ಹಾದಿ ಹಿಡಿಯಿತು.

 ಧೋನಿ ಸ್ಟಂಪಿಂಗ್ ದಾಖಲೆಯನ್ನು 103ಕ್ಕೆ ಏರಿಸಿದ್ದಾರೆ. ಈ ಪೈಕಿ ಭಾರತದ ಪರ 100 ಮತ್ತು ಏಷ್ಯಾ ಇಲೆವೆನ್ ಪರ 3 ಸ್ಟಂಪಿಂಗ್ ದಾಖಲೆ ನಿರ್ಮಿಸಿದ್ದಾರೆ.

ಧೋನಿ ಈ ಸಾಧನೆ ಮಾಡಿದ ವಿಶ್ವದ ಮೊದಲ ವಿಕೆಟ್ ಕೀಪರ್ ಎನಿಸಿಕೊಂಡಿದ್ದಾರೆ. ಭಾರತ ಮತ್ತು ಏಷ್ಯಾ ಇಲೆವೆನ್ ಪರ ಆಡಿದ ಪಂದ್ಯಗಳಲ್ಲಿ 100 ಸ್ಟಂಪಿಂಗ್ ದಾಖಲೆಯನ್ನು ಕಳೆದ ತಿಂಗಳು ಕೊಲಂಬೊದಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಐದನೆ ಏಕದಿನ ಪಂದ್ಯದಲ್ಲಿ ನಿರ್ಮಿಸಿದ್ದರು.

ಧೋನಿ 301 ಏಕದಿನ ಪಂದ್ಯಗಳಲ್ಲಿ ಸ್ಟಂಪಿಂಗ್‌ನಲ್ಲಿ ಶತಕ (ಭಾರತದ ಪರ97, ಏಷ್ಯಾ ಇಲೆವೆನ್ 3) ಪೂರ್ಣಗೊಳಿಸಿದ್ದರು.

   ಸ್ಟಂಪಿಂಗ್‌ನಲ್ಲಿ ದಾಖಲೆ ಬರೆದಿರುವ ವಿಕೆಟ್ ಕೀಪರ್‌ಗಳ ಪೈಕಿ ಶ್ರೀಲಂಕಾದ ವಿಕೆಟ್ ಕೀಪರ್ ಕುಮಾರ ಸಂಗಕ್ಕರ 99 ಸ್ಟಂಪಿಂಗ್ ದಾಖಲೆಯೊಂದಿಗೆ ಎರಡನೆ ಮತ್ತು ಶ್ರೀಲಂಕಾದ ರೋಮೆಶ್ ಕಲುವಿತರಣ (75) ಮೂರನೆ ಸ್ಥಾನದಲ್ಲಿದ್ದಾರೆ. ಅವರು 404 ಏಕದಿನ ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News