ಅಭ್ಯಾಸದ ವೇಳೆ ಯುವ ಬ್ಯಾಡ್ಮಿಂಟನ್ ಆಟಗಾರ ಮೃತ

Update: 2017-09-24 18:06 GMT

ಕೋಲ್ಕತಾ, ಸೆ.24: ಬ್ಯಾಡ್ಮಿಂಟನ್ ಅಭ್ಯಾಸದಲ್ಲಿ ತೊಡಗಿದ್ದ ವೇಳೆ 18ರ ಹರೆಯದ ಯುವ ಆಟಗಾರ ಕುಸಿದು ಬಿದ್ದು ಮೃತಪಟ್ಟ ಘಟನೆ ವರದಿಯಾಗಿದೆ.

‘‘ಎಪ್ರಿಲ್‌ನಲ್ಲಿ ಭಾರತದ ಕ್ರೀಡಾ ಪ್ರಾಧಿಕಾರ (ಸಾಯಿ) ಕೇಂದ್ರಕ್ಕೆ ‘ಕಮ್ ಆ್ಯಂಡ್ ಪ್ಲೇ’ ಕೋರ್ಸ್‌ಗೆಸೇರ್ಪಡೆಯಾಗಿದ್ದ ನಿಹರೆಂದು ಮಲಿಕ್ ಶನಿವಾರ ಬೆಳಗ್ಗೆ 11:30ರ ಸುಮಾರಿಗೆ ಸಹ ಆಟಗಾರರೊಂದಿಗೆ ಪ್ರಾಕ್ಟೀಸ್ ನಡೆಸುತ್ತಿದ್ದಾಗ ಕುಸಿದು ಬಿದ್ದು ಪ್ರಜ್ಞಾಹೀನರಾದರು. ಅವರ ಬಾಯಲ್ಲಿ ಜೊಲ್ಲು ಸುರಿಯುತ್ತಿತ್ತು’’ ಎಂದು ಬ್ಯಾಡ್ಮಿಂಟನ್ ಕೋಚ್ ಮಹಿ ಮೋಹನ್ ಸಮಂತ್ರ ಹೇಳಿದ್ದಾರೆ.

ಕೋಚ್ ಹಾಗೂ ಇತರ ಆಟಗಾರರು ಮಲಿಕ್‌ರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದರು. ಆದರೆ, ಅವರು ಹೃದಯಾಘಾತ ಹಾಗೂ ಮೆದುಳು ರಕ್ತಸ್ರಾವದಿಂದ ಮೃತಪಟ್ಟಿದ್ದಾಗಿ ವೈದ್ಯರು ಘೋಷಿಸಿದ್ದಾರೆ.

‘‘ತನ್ನ ಮಗನ ಸಾವಿಗೆ ಸಾಯ್ ಕೇಂದ್ರ ಕಾರಣವಲ್ಲ. ನಾನು ನಿರಾಕ್ಷೇಪಣಾ ಪತ್ರ ಬರೆಯುತ್ತೇನೆ. ಸಾಯ್ ಕೇಂದ್ರಕ್ಕೆ ಯಾವುದೇ ಪರಿಹಾರಕ್ಕೆ ಬೇಡಿಕೆ ಇಡಲಾರೆ. ನನ್ನ ಮಗನಿಗೆ ಈ ಹಿಂದೆ ಯಾವುದೇ ಆರೋಗ್ಯ ಸಮಸ್ಯೆ ಇರಲಿಲ್ಲ. ಸಾಯ್ ಕೇಂದ್ರಕ್ಕೆ ಸೇರ್ಪಡೆಯಾಗುವ ಮೊದಲು ಬೆಲೆಘಾಟದಲ್ಲಿ ತರಬೇತಿ ನಡೆಸುತ್ತಿದ್ದ. ನನ್ನ ಹಿರಿಯ ಮಗ ಬ್ಯಾಡ್ಮಿಂಟನ್ ಆಟಗಾರ’’ಎಂದು ಮೃತಪಟ್ಟ ಯುವಕನ ತಂದೆ, ನಿವೃತ್ತ ರೈಲ್ವೆ ಉದ್ಯೋಗಿಯಾಗಿರುವ ನಿತ್ಯಾನಂದ ಮಲಿಕ್ ಹೇಳಿದ್ದಾರೆ.

‘‘ಸಾಯ್ ಕೇಂದ್ರ ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿದೆ. ನಾವು ಮನುಷ್ಯರಂತೆ ವರ್ತಿಸಬೇಕು. ರಾಜಕೀಯ ಮಾಡಲು ಇದು ಸಮಯವಲ್ಲ. ಮೃತ ಯುವಕನ ತಂದೆಯ ನೋವನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ’’ ಎಂದು ಸಾಯ್ ವಿರುದ್ಧ ದೂರು ದಾಖಲಿಸುವಂತೆ ಪೊಲೀಸರು ಮೃತ ಯುವಕನ ಕುಟುಂಬದವರ ಮೇಲೆ ಒತ್ತಡ ಹಾಕುತ್ತಿರುವುದನ್ನು ಉಲ್ಲೇಖಿಸಿ ಸಾಯಿ ನಿರ್ದೇಶಕ ಮನ್‌ಮೀತ್ ಸಿಂಗ್ ಗೊಂಡಿ ಹೇಳಿದ್ದಾರೆ.

ನಿಹರೆಂದು ಸಾಯ್ ಕೇಂದ್ರಕ್ಕೆ ಸೇರಿದವರಲ್ಲ. ಬ್ಯಾಡ್ಮಿಂಟನ್ ಕೋರ್ಸ್‌ಗೆ ಬಂದಿರುವ 200 ವಿದ್ಯಾರ್ಥಿಗಳ ಪೈಕಿ ಒಬ್ಬರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News