ವಿಶ್ವ ದಾಖಲೆ ಮುರಿದ ಒಲಿಂಪಿಕ್ಸ್ ಚಾಂಪಿಯನ್ ಮೊರಾಡಿ

Update: 2017-09-24 18:13 GMT

ಅಶ್ಗಬತ್ (ತುರ್ಕ್‌ಮೆನಿಸ್ತಾನ್), ಸೆ.24: ಏಷ್ಯನ್ ಇಂಡೋರ್ ಹಾಗೂ ಮಾರ್ಷಲ್ ಆರ್ಟ್ಸ್ ಗೇಮ್ಸ್‌ನಲ್ಲಿ ದೀರ್ಘಕಾಲದ ವಿಶ್ವ ದಾಖಲೆಯನ್ನು ಮುರಿದ ಇರಾನ್‌ನ ಒಲಿಂಪಿಕ್ಸ್ ಚಾಂಪಿಯನ್ ವೇಟ್‌ಲಿಫ್ಟರ್ ಸೊಹ್ರಾಬ್ ಮೊರಾಡಿ ಚಿನ್ನದ ಪದಕ ಜಯಿಸಿದರು.

ಶನಿವಾರ ನಡೆದ 94 ಕೆ.ಜಿ. ತೂಕ ವಿಭಾಗ ದಲ್ಲಿ ಸ್ಪರ್ಧಿಸಿದ ಮೊರಾಡಿ ಒಟ್ಟು 413 ಕೆ.ಜಿ. ತೂಕ ಎತ್ತುವ ಮೂಲಕ ನೂತನ ವಿಶ್ವ ದಾಖಲೆ ನಿರ್ಮಿಸಿದರು.

‘‘ದಿನಕ್ಕೆ ಮೂರು ಬಾರಿ ನಿರಂತರ ತರಬೇತಿ ನಡೆಸಿ ಕಠಿಣ ಶ್ರಮ ಪಟ್ಟಿದ್ದೇನೆ. ನನ್ನ ಸಮಯವನ್ನು ಕೇವಲ ವೇಟ್ ಲಿಫ್ಟಿಂಗ್‌ಗೆ ಮೀಸಲಿಟ್ಟಿದ್ದೆ. ಇದು ನನ್ನ ಯಶಸ್ಸಿನ ಗುಟ್ಟು. ವಿಶ್ವ ದಾಖಲೆಯ ಸಾಧನೆ ನನ್ನ ಪ್ರಯತ್ನದ ಫಲ. ಒಲಿಂಪಿಕ್ಸ್‌ನಲ್ಲಿ ಚಿನ್ನ ಜಯಿಸುವುದು ಜೀವನದ ಗುರಿಯಾಗಿತ್ತು. ಇದು ಪ್ರತಿ ಅಥ್ಲೀಟ್‌ಗೆ ಅತ್ಯಂತ ಮುಖ್ಯವಾಗಿದೆ. ವಿಶ್ವ ದಾಖಲೆ ಮುರಿಯುವುದು ನನ್ನ ಮತ್ತೊಂದು ಗುರಿಯಾಗಿತ್ತು. ನಾನೀಗ ಎರಡೂ ಗುರಿಯನ್ನು ಪೂರೈಸಿದ್ದೇನೆ’’ ಎಂದು ಮೊರಾಡಿ ಹೇಳಿದ್ದಾರೆ.

29ರ ಹರೆಯದ ಮೊರಾಡಿ ಸ್ನ್ಯಾಚ್‌ನಲ್ಲಿ 185 ಕೆ.ಜಿ. ಹಾಗೂ ಕ್ಲೀನ್ ಆ್ಯಂಡ್ ಜರ್ಕ್‌ನಲ್ಲಿ 228 ಕೆ.ಜಿ. ಎತ್ತಿ ಹಿಡಿದರು. ಒಟ್ಟು 413 ಕೆ.ಜಿ. ತೂಕ ಎತ್ತಿ ಹಿಡಿದ ಮೊರಾಡಿ 1999ರಲ್ಲಿ ಅಥೆನ್ಸ್‌ನಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಗ್ರೀಸ್‌ನ ಅಕಾಕಿಯೊಸ್ ಕಕಿಯಾಸ್ವಿಲಿಸ್ ನಿರ್ಮಿಸಿದ್ದ 412 ಕೆ.ಜಿ. ದಾಖಲೆಯನ್ನು ಮುರಿದಿದ್ದಾರೆ.

ಮೊರಾಡಿ 2003ರಲ್ಲಿ ನೋವುನಿವಾರಕ ಮೆಥಾಡಾನ್ ಮದ್ದನ್ನು ಸೇವಿಸಿದ ಹಿನ್ನೆಲೆಯಲ್ಲಿ ಡೋಪಿಂಗ್ ಟೆಸ್ಟ್‌ನಲ್ಲಿ ಅನುತ್ತೀರ್ಣರಾಗಿದ್ದರು. ಈ ಕಾರಣಕ್ಕಾಗಿ 2 ವರ್ಷ ನಿಷೇಧಕ್ಕೊಳಗಾಗಿದ್ದರು. ಆದರೆ, ಅವರು ತಾನು ಮುಗ್ಧ ಎಂದು ಹೇಳುತ್ತಾ ಬಂದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News