ದುಲೀಪ್ ಟ್ರೋಫಿ ಚೊಚ್ಚಲ ಪಂದ್ಯದಲ್ಲೇ ಪೃಥ್ವಿ ಶಾ ಶತಕ

Update: 2017-09-25 18:23 GMT

ಲಕ್ನೋ, ಸೆ.25: ರಣಜಿ ಟ್ರೋಫಿಯ ಚೊಚ್ಚಲ ಪಂದ್ಯದಲ್ಲಿ ಶತಕ ಸಿಡಿಸಿ ಎಲ್ಲರ ಗಮನ ಸೆಳೆದಿದ್ದ ಭಾರತದ ಕಿರಿಯ ಆಟಗಾರ ಪೃಥ್ವಿ ಶಾ ದುಲೀಪ್ ಟ್ರೋಫಿಯಲ್ಲೂ ಶತಕ ಸಿಡಿಸಿ ತನ್ನ ಅಭಿಯಾನವನ್ನು ಯಶಸ್ವಿಯಾಗಿ ಆರಂಭಿಸಿದ್ದಾರೆ. ಇಂಡಿಯಾ ರೆಡ್ ತಂಡವನ್ನು ಪ್ರತಿನಿಧಿಸಿದ 17ರ ಹರೆಯದ ಶಾ ಇಂಡಿಯಾ ಬ್ಲೂ ವಿರುದ್ಧದ ದುಲೀಪ್ ಟ್ರೋಫಿಯ ಫೈನಲ್ ಪಂದ್ಯದ ಮೊದಲ ದಿನ ಶತಕ ಸಿಡಿಸಿದರು. ದುಲೀಪ್ ಟ್ರೋಫಿಯ ಚೊಚ್ಚಲ ಪಂದ್ಯದಲ್ಲಿ ಶತಕ ಸಿಡಿಸಿರುವ ಮೊದಲ ಕಿರಿಯ ಆಟಗಾರನೆಂಬ ಕೀರ್ತಿಗೆ ಭಾಜನರಾದರು.

ಸೋಮವಾರ ಆರಂಭವಾದ ಹಗಲು-ರಾತ್ರಿ ಪಂದ್ಯದಲ್ಲಿ ಟಾಸ್ ಜಯಿಸಿದ ದಿನೇಶ್ ಕಾರ್ತಿಕ್ ನೇತೃತ್ವದ ಇಂಡಿಯಾ ರೆಡ್ ತಂಡ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಅಖಿಲ್ ಹೆರ್ವಾಡ್ಕರ್‌ರೊಂದಿಗೆ ಇನಿಂಗ್ಸ್ ಆರಂಭಿಸಿದ ಶಾ ಮೊದಲ ವಿಕೆಟ್‌ಗೆ 74 ರನ್ ಜೊತೆಯಾಟ ನಡೆಸಿ ಉತ್ತಮ ಆರಂಭ ನೀಡಿದರು.

42ನೆ ಓವರ್‌ನಲ್ಲಿ ಇಶಾಂತ್ ಶರ್ಮ ಎಸೆತವನ್ನು ಬೌಂಡರಿ ಗೆರೆ ದಾಟಿಸಿದ ಶಾ 137 ಎಸೆತಗಳಲ್ಲಿ ಶತಕ ಪೂರೈಸಿದರು.

ಇಂಗ್ಲೆಂಡ್ ಪ್ರವಾಸದಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಶಾ ಐದು ಯೂತ್ ಏಕದಿನ ಪಂದ್ಯ ಹಾಗೂ ಎರಡು ಯೂತ್ ಟೆಸ್ಟ್ ಪಂದ್ಯಗಳನ್ನು ಆಡಿದ್ದರು. ಟೆಸ್ಟ್ ಪಂದ್ಯಗಳಲ್ಲಿ 3 ಅರ್ಧಶತಕ ಗಳಿಸಿದ್ದು ಗರಿಷ್ಠ ವೈಯಕ್ತಿಕ ಸ್ಕೋರ್ 69 ರನ್ ಗಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News