ಯುರೋಪ್ ಟೀಮ್‌ಗೆ ಲೇವರ್ ಕಪ್

Update: 2017-09-25 18:29 GMT

ಪರಾಗ್ವೆ, ಸೆ.25: ವಿಶ್ವದ ನಂ.2ನೆ ಆಟಗಾರ ರೋಜರ್ ಫೆಡರರ್ ಟೀಮ್ ವರ್ಲ್ಡ್ ತಂಡದ ನಿಕ್ ಕಿರ್ಗಿಯೊಸ್‌ರನ್ನು ಮಣಿಸುವ ಮೂಲಕ ಟೀಮ್ ಯುರೋಪ್ ತಂಡ ಚೊಚ್ಚಲ ಲೇವರ್ ಕಪ್ ಜಯಿಸಲು ನೆರವಾಗಿದ್ದಾರೆ. ಈ ವರ್ಷ ಆಸ್ಟ್ರೇಲಿಯನ್ ಓಪನ್ ಹಾಗೂ ವಿಂಬಲ್ಡನ್ ಓಪನ್ ಚಾಂಪಿಯನ್ ಆಗಿರುವ ಫೆಡರರ್ ರವಿವಾರ ನಡೆದ ನಿರ್ಣಾಯಕ ಸಿಂಗಲ್ಸ್ ಪಂದ್ಯದಲ್ಲಿ ಕಿರ್ಗಿಯೊಸ್‌ರನ್ನು 4-6, 7-6(8/6), 11-9 ರಿಂದ ಮಣಿಸುವುದರೊಂದಿಗೆ ಟೀಮ್ ಯುರೋಪ್ ತಂಡಕ್ಕೆ 15-9 ಮುನ್ನಡೆ ಒದಗಿಸಿಕೊಟ್ಟರು. ವಿಶ್ವದ ಅಗ್ರಮಾನ್ಯ ಆಟಗಾರರನ್ನು ಹೊಂದಿರುವ ಟೀಮ್ ಯುರೋಪ್ ತಂಡ ಪ್ರಶಸ್ತಿ ಜಯಿಸುವ ಫೇವರಿಟ್ ತಂಡವಾಗಿ ಗುರುತಿಸಿಕೊಂಡಿತ್ತು. ರವಿವಾರ 9-3 ಮುನ್ನಡೆಯೊಂದಿಗೆ ಟೂರ್ನಿಯನ್ನು ಪ್ರವೇಶಿಸಿತ್ತು.

ಸ್ಯಾಮ್ ಕ್ವೆರ್ರಿ ಅವರನ್ನು 6-4, 6-4 ನೇರ ಸೆಟ್‌ಗಳಿಂದ ಮಣಿಸಿರುವ ಅಲೆಕ್ಸಾಂಡರ್ ಝ್ವೆರೆವ್ ಯುರೋಪ್‌ಗೆ ಮುನ್ನಡೆ ಒದಗಿಸಿಕೊಟ್ಟರು. ಆದರೆ, ಮತ್ತೊಂದು ಪಂದ್ಯದಲ್ಲಿ ವಿಶ್ವದ ನಂ.1 ಆಟಗಾರ ರಫೆಲ್ ನಡಾಲ್ ಅಮೆರಿಕದ ಜಾನ್ ಇಸ್ನೇರ್ ವಿರುದ್ಧ ನೇರ ಸೆಟ್‌ಗಳಿಂದ ಸೋತಿದ್ದರು. ಕೊನೆಯ ಪಂದ್ಯದಲ್ಲಿ ಜಯ ಸಾಧಿಸಿರುವ ಫೆಡರರ್ ಟೀಮ್ ಯುರೋಪ್ ತಂಡ ಮೊದಲ ಬಾರಿ ಲೇವರ್‌ಕಪ್ ಜಯಿಸಲು ನೆರವಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News