×
Ad

ನಾಳೆ ಉದ್ಯಾನನಗರಿಯಲ್ಲಿ 4ನೆ ಏಕದಿನ ಪಂದ್ಯ

Update: 2017-09-27 23:57 IST

ಬೆಂಗಳೂರು, ಸೆ.27: ಆಸ್ಟ್ರೇಲಿಯ ವಿರುದ್ಧ ಐದು ಪಂದ್ಯಗಳ ಏಕದಿನ ಸರಣಿಯನ್ನು 3-0 ಅಂತರದಲ್ಲಿ ಗೆದ್ದುಕೊಂಡಿರುವ ಟೀಮ್ ಇಂಡಿಯಾ ಗುರುವಾರ ಇಲ್ಲಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ನಾಲ್ಕನೆ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಗೆಲುವಿನ ಅಭಿಯಾನ ಮುಂದುವರಿಸುವ ಕನಸು ಕಾಣುತ್ತಿದೆ.

ಸೋಲಿನಿಂದ ಕಂಗೆಟ್ಟಿರುವ ಆಸ್ಟ್ರೇಲಿಯಕ್ಕೆ ಪ್ರತಿಷ್ಠೆಯನ್ನು ಉಳಿಸಿಕೊಳ್ಳಲು ಇನ್ನುಳಿದಿರುವ ಎರಡು ಏಕದಿನ ಪಂದ್ಯಗಳಲ್ಲಿ ಗೆಲ್ಲಲೇಬೇಕಾಗಿದೆ. ವೈಟ್‌ವಾಶ್ ತಪ್ಪಿಸಲು ತಂಡಕ್ಕೆ ಗೆಲುವು ಅನಿವಾರ್ಯವಾಗಿದೆ.

ಇದೇ ವೇಳೆ ಬೆಂಗಳೂರಿನಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಈ ಕಾರಣದಿಂದಾಗಿ ನಾಲ್ಕನೆ ಪಂದ್ಯಕ್ಕೆ ಮಳೆಯ ಭೀತಿ ಎದುರಾಗಿದೆ.

 ತಂಡದ ನಾಯಕ ವಿರಾಟ್ ಕೊಹ್ಲಿ, ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ನಿರಂತರವಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಯುವ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ತಂಡಕ್ಕೆ ಹೊಸ ಆಯಾಮ ನೀಡಿದ್ದಾರೆ.

ಪಾಂಡ್ಯ ಕಳೆದ ಪಂದ್ಯದಲ್ಲಿ 78 ರನ್ ದಾಖಲಿಸಿ ತಂಡದ ಗೆಲುವಿಗೆ ಅಗತ್ಯದ 294 ರನ್‌ಗಳ ಸವಾಲನ್ನು ಬೆನ್ನಟ್ಟಲು ನೆರವಾಗಿದ್ದರು. ರೋಹಿತ್ ಶರ್ಮ ಮತ್ತು ಅಜಿಂಕ್ಯ ರಹಾನೆ ಅರ್ಧಶತಕಗಳ ಕೊಡುಗೆ ನೀಡಿದ್ದರು. ಮೊದಲ ವಿಕೆಟ್‌ಗೆ 131 ರನ್‌ಗಳ ಜೊತೆಯಾಟ ನೀಡಿದ್ದರು.

 ನಾಲ್ಕನೆ ಪಂದ್ಯಕ್ಕೆ ಲೋಕೇಶ್ ರಾಹುಲ್ ಆಡುವ ನಿರೀಕ್ಷೆ ಇದೆ. ಇವರಿಗೆ ಕೇದಾರ್ ಜಾಧವ್ ಅಥವಾ ಮನೀಷ್ ಪಾಂಡೆ ಜಾಗ ತೆರವುಗೊಳಿಸಬೇಕಾಗುತ್ತದೆ. ರಾಹುಲ್ ಹಾಗೂ ಮನೀಷ್ ಪಾಂಡೆ ತವರಿನಲ್ಲಿ ಮಿಂಚುವ ಅವಕಾಶಕ್ಕಾಗಿ ಕಾಯುತ್ತಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಭಾರತದ ಬ್ಯಾಟಿಂಗ್ ಬಲಿಷ್ಠವಾಗಿರುವಂತೆ ಬೌಲಿಂಗ್‌ನಲ್ಲೂ ಬಲಿಷ್ಠವಾ ಗಿದೆ. ವೇಗದ ಬೌಲರ್‌ಗಳಾದ ಭುವನೇಶ್ವರ ಕುಮಾರ್,ಜಸ್‌ಪ್ರೀತ್ ಬುಮ್ರಾ ಆಸ್ಟ್ರೇಲಿಯದ ಅಗ್ರ ಸರದಿಯ ದಾಂಡಿಗರಿಗೆ ಸಿಂಹಸ್ವಪ್ನವಾಗಿ ಕಾಡುತ್ತಿದ್ದಾರೆ. ಯುವ ಸ್ಪಿನ್ನರ್‌ಗಳಾದ ಯುಜುವೇಂದ್ರ ಚಾಹಲ್ ಮತ್ತು ಕುಲ್‌ದೀಪ್ ಯಾದವ್ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಇವರ ಪ್ರದರ್ಶನ ಆರ್.ಅಶ್ವಿನ್ ಮತ್ತು ರವೀಂದ್ರ ಜಡೇಜರ ನಿದ್ದೆಗೆಡಿಸಿದೆ.

ಯಾದವ್ ಕೋಲ್ಕತಾದಲ್ಲಿ ಆಸ್ಟ್ರೇಲಿಯದ ವಿರುದ್ಧ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದರು. ಈ ಸಾಧನೆ ಮೂಲಕ ಭಾರತದ ಮಾಜಿ ಆಟಗಾರರಾದ ಕಪಿಲ್ ದೇವ್ ಮತ್ತು ಚೇತನ್ ಶರ್ಮ ದಾಖಲೆಯನ್ನು ಸರಿಗಟ್ಟಿದ್ದಾರೆ. ಭಾರತದ ಅಗ್ರ ಸರದಿ ಮೊದಲ ಪಂದ್ಯದಲ್ಲಿ ವಿಫಲವಾಗಿತ್ತು. ಮಧಮ ಸರದಿಯ ದಾಂಡಿಗರು ತಂಡವನ್ನು ಆಧರಿಸಿದ್ದರು.ಆದರೆ ಮೂರನೆ ಪಂದ್ಯದಲ್ಲಿ ಅಗ್ರ ಹಾಗೂ ಮಧ್ಯಮ ಸರದಿ ಮಿಂಚಿತ್ತು. ಪಾಂಡ್ಯ ಮತ್ತೆ ಆಸ್ಟ್ರೇಲಿಯದ ಆಟಗಾರರನ್ನು ಬ್ಯಾಟಿಂಗ್, ಫೀಲ್ಡಿಂಗ್ ಮತ್ತು ಬೌಲಿಂಗ್‌ನಲ್ಲಿ ಕಾಡಲಿದ್ದಾರೆ.ಮುಂಬರುವ ಇಂಗ್ಲೆಂಡ್ ವಿರುದ್ಧ ಆ್ಯಶಸ್ ಸರಣಿಗೆ ತೆರಳಿರುವ ಆಸ್ಟ್ರೇಲಿಯಕ್ಕೆ ಮತ್ತೆ ಆತ್ಮವಿಶ್ವಾಸವನ್ನು ಹೆಚ್ಚಿಸಲು ಕೊನೆಯ ಎರಡು ಏಕದಿನ ಪಂದ್ಯಗಳಲ್ಲಿ ಗೆಲ್ಲಬೇಕಾಗಿದೆ.

 ಆಸ್ಟ್ರೇಲಿಯಕ್ಕೆ ಕಳೆದ ಪಂದ್ಯದಲ್ಲಿ ಆ್ಯರೊನ್ ಫಿಂಚ್ ಶತಕದ ಕೊಡುಗೆ ನೀಡಿದ್ದರೂ , 300ರ ಗಡಿ ದಾಟಲು ಸಾಧ್ಯವಾಗಲಿಲ್ಲ. ಇಂದೋರ್‌ನಲ್ಲಿ 40 ಓವರ್‌ಗಳಲ್ಲಿ 232ಕ್ಕೆ 2 ವಿಕೆಟ್ ಕಳೆದುಕೊಂಡಿದ್ದ ಆಸ್ಟ್ರೇಲಿಯ ಬಳಿಕ 59 ರನ್ ಸೇರಿಸುವ ಹೊತ್ತಿಗೆ ಇನ್ನೂ 4 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಸ್ಫೋಟಕ ಬ್ಯಾಟ್ಸ್‌ಮನ್ ಗ್ಲೆನ್ ಮ್ಯಾಕ್ಸ್‌ವೆಲ್ ಫಾರ್ಮ್ ಕಳೆದುಕೊಂಡಿರುವುದು ಆಸ್ಟ್ರೇಲಿಯಕ್ಕೆ ದೊಡ್ಡ ಚಿಂತೆ. ನಾಯಕ ಸ್ಟೀವ್ ಸ್ಮಿತ್ ಮತ್ತು ಉಪನಾಯಕ ಡೇವಿಡ್ ವಾರ್ನರ್ ಸರಣಿಯ ಉಳಿದ ಪಂದ್ಯಗಳಲ್ಲಿ ಮಿಂಚುವುದನ್ನು ನಿರೀಕ್ಷಿಸಲಾ ಗಿದೆ. ಪಾರ್ಟ್‌ಟೈಮ್ ವಿಕೆಟ್ ಕೀಪರ್ ಪೀಟರ್ ಹ್ಯಾಂಡ್ಸ್‌ಕಂಬ್ ಕಳೆದ ಪಂದ್ಯದಲ್ಲಿ ವಿಫಲರಾಗಿದ್ದರು. ಹೀಗಿದ್ದರೂ ಇನ್ನೊಂದು ಅವಕಾಶ ನೀಡುವ ಸಾಧ್ಯತೆ ಇದೆ.

►ಭಾರತ:  ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ರೋಹಿತ್ ಶರ್ಮ, ಮನೀಷ್ ಪಾಂಡೆ, ಕೇದಾರ್ ಜಾಧವ್, ಎಂ.ಎಸ್.ಧೋನಿ(ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಭುವನೇಶ್ವರ ಕುಮಾರ್, ಕುಲ್‌ದೀಪ್ ಯಾದವ್, ಯುಜುವೇಂದ್ರ ಚಾಹಲ್, ಜಸ್‌ಪ್ರೀತ್ ಬುಮ್ರಾ, ಲೋಕೇಶ್ ರಾಹುಲ್, ಅಕ್ಷರ್ ಪಟೇಲ್ , ಉಮೇಶ್ ಯಾದವ್ ಮತ್ತು ಮುಹಮ್ಮದ್ ಶಮಿ.

►ಆಸ್ಟ್ರೇಲಿಯ:  ಸ್ಟೀವ್ ಸ್ಮಿತ್(ನಾಯಕ), ಡೇವಿಡ್ ವಾರ್ನರ್, ಹಿಲ್ಟನ್ ಕಾರ್ಟ್‌ರೈಟ್, ಮಾಥ್ಯೂ ವೇಡ್(ವಿಕೆಟ್ ಕೀಪರ್), ನಥಾನ್ ಕೌಲ್ಟರ್ ನೀಲ್, ಪ್ಯಾಟ್ ಕಮಿನ್ಸ್, ಆ್ಯರೊನ್ ಫಿಂಚ್, ಜೇಮ್ಸ್ ಫಾಕ್ನರ್, ಪೀಟರ್ ಹ್ಯಾಂಡ್ಸ್‌ಕಂಬ್, ಟ್ರಾವಿಸ್ ಹೆಡ್, ಗ್ಲೆನ್ ಮ್ಯಾಕ್ಸ್‌ವೆಲ್, ಆ್ಯಡಮ್ ಝಾಂಪ, ಕೇನ್ ರಿಚರ್ಡ್ಸನ್, ಮಾರ್ಕಸ್ ಸ್ಟೋನಿಸ್ ಮತ್ತು ಆ್ಯರೊನ್ ಫಿಂಚ್.

ಪಂದ್ಯದ ಸಮಯ: ಮಧ್ಯಾಹ್ನ 1.30 ಗಂಟೆಗೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News