ಇಂಡಿಯಾ ರೆಡ್ ಮಡಿಲಿಗೆ ದುಲೀಪ್ ಟ್ರೋಫಿ
ಲಕ್ನೋ, ಸೆ.28: ವಾಶಿಂಗ್ಟನ್ ಸುಂದರ್(6-87) ಅಮೋಘ ಬೌಲಿಂಗ್ ನೆರವಿನಿಂದ ಇಂಡಿಯಾ ಬ್ಲೂ ತಂಡವನ್ನು 163 ರನ್‌ಗಳ ಅಂತರದಿಂದ ಮಣಿಸಿರುವ ಇಂಡಿಯಾ ರೆಡ್ ತಂಡ ದುಲೀಪ್ ಟ್ರೋಫಿಯನ್ನು ಗೆದ್ದುಕೊಂಡಿದೆ.
ನಾಲ್ಕನೆ ದಿನವಾದ ಗುರುವಾರ ಗೆಲುವಿಗೆ 393 ರನ್ ಗುರಿ ಪಡೆದಿದ್ದ ಇಂಡಿಯಾ ಬ್ಲೂ ತಂಡ 17ರ ಹರೆಯದ ಆಲ್‌ರೌಂಡರ್ ಸುಂದರ್ ಸ್ಪಿನ್ ಮೋಡಿಗೆ ತತ್ತರಿಸಿ 48 ಓವರ್‌ಗಳಲ್ಲಿ 229 ರನ್‌ಗೆ ಆಲೌಟಾಯಿತು. ಇನ್ನೂ ಒಂದೂವರೆ ದಿನದ ಆಟ ಬಾಕಿ ಇರುವಾಗಲೇ ಸೋಲೊಪ್ಪಿಕೊಂಡಿತು. ಬ್ಲೂ ತಂಡದ ಪರ ಬಾಲಂಗೋಚಿ ಭಾರ್ಗವ್ ಭಟ್(51)ಸರ್ವಾಧಿಕ ರನ್ ಗಳಿಸಿದರು. ನಾಯಕ ಸುರೇಶ್ ರೈನಾ(45),ಮನೋಜ್ ತಿವಾರಿ(38) ಹಾಗೂ ಇಶಾಂತ್ ಶರ್ಮ(ಅಜೇಯ 20) ಎರಡಂಕೆ ಸ್ಕೋರ್ ದಾಖಲಿಸಿದರು.
ಫೈನಲ್ ಪಂದ್ಯದಲ್ಲಿ ಒಟ್ಟು 130 ರನ್ ಗಳಿಸಿದ್ದಲ್ಲದೆ 181 ರನ್ ನೀಡಿ 11 ವಿಕೆಟ್‌ಗಳ ಗೊಂಚಲು ಪಡೆದ ತಮಿಳುನಾಡಿನ ಆಟಗಾರ ಸುಂದರ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಇದಕ್ಕೆ ಮೊದಲು 7 ವಿಕೆಟ್‌ಗಳ ನಷ್ಟಕ್ಕೆ 187 ರನ್‌ನಿಂದ ದ್ವಿತೀಯ ಇನಿಂಗ್ಸ್ ಮುಂದುವರಿಸಿದ ಇಂಡಿಯಾ ರೆಡ್ ತಂಡ 208 ರನ್ ಗಳಿಸಿ ಆಲೌಟಾಯಿತು. ಮೊದಲ ಇನಿಂಗ್ಸ್‌ನಲ್ಲಿ 184 ರನ್ ಮುನ್ನಡೆ ಪಡೆದಿದ್ದ ರೆಡ್ ತಂಡ ಬ್ಲೂ ಗೆಲುವಿಗೆ ಕಠಿಣ ಸವಾಲು ನೀಡಿತು. ಬ್ಲೂ ತಂಡದ ಪರ ಭಾರ್ಗವ್ ಭಟ್(4-77) ಹಾಗೂ ಅಕ್ಷಯ್ ವಖಾರೆ(4-66)8 ವಿಕೆಟ್ ಹಂಚಿಕೊಂಡರು.