ಸಯೀದ್ ಬಂಧನ ಅವಧಿ ವಿಸ್ತರಣೆ: ಮನವಿ ಹಿಂದೆಗೆದ ಪಾಕ್

Update: 2017-10-15 17:09 GMT

ಲಾಹೋರ್,ಅ.15: ಭಯೋತ್ಪಾದನಾ ನಿಗ್ರಹ ಕಾಯ್ದೆಯಡಿ ಮುಂಬೈ ಭಯೋತ್ಪಾದಕ ದಾಳಿಯ ಶಂಕಿತ ರೂವಾರಿ ಹಾಗೂ ಜೆಯುಡಿ ಸಂಘಟನೆಯ ಮುಖ್ಯಸ್ಥ ಹಾಫೀಝ್ ಸಯೀದ್‌ನ ಬಂಧನದ ಅವಧಿಯನ್ನು ವಿಸ್ತರಿಸುವಂತೆ ಕೋರುವ ತನ್ನ ಮನವಿಯನ್ನು ಪಾಕ್ ಸರಕಾರವು ಶನಿವಾರ ಹಿಂತೆಗೆದುಕೊಂಡಿದೆ.

  ಜನವರಿ 31ರಂದು ಸಯೀದ್ ಹಾಗೂ ಆತನ ನಾಲ್ವರು ಸಹಚರರನ್ನು ಪಂಜಾಬ್ ಪ್ರಾಂತ ಸರಕಾರವು 1997ರ ಭಯೋತ್ಪಾದನಾ ನಿಗ್ರಹ ಕಾಯ್ದೆಯಡಿ 90 ದಿನಗಳ ಅವಧಿಗೆ ಬಂಧಿಸಿತ್ತು.

 ಶನಿವಾರ ಪಂಜಾಬ್ ಪ್ರಾಂತ ಸರಕಾರದ ಗೃಹ ಇಲಾಖೆಯ ಉನ್ನತ ಅಧಿಕಾರಿಯೊಬ್ಬರು ನ್ಯಾಯಮೂರ್ತಿ ಎಜಾಝ್ ಅಫ್ಧಲ್ ಖಾನ್ ನೇತೃತ್ವದ ತ್ರಿಸದಸ್ಯ ಫೆಡರಲ್ ನ್ಯಾಯಾಂಗ ಪರಾಮರ್ಶನಾ ಮಂಡಳಿಯ ಮುಂದೆ ಹೇಳಿಕೆ ನೀಡಿ, ಸಯೀದ್ ಹಾಗೂ ಆತನ ನಾಲ್ವರು ಸಹಚರರ ಬಂಧನದ ಅವಧಿಯನ್ನು ವಿಸ್ತರಿಸುವ ಅಗತ್ಯ ಸರಕಾರಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಜಮಾತುದ್ದವಾ ನಾಯಕರ ಬಂಧನದ ಅವಧಿಯ ವಿಸ್ತರಣೆಯನ್ನು ಹಿಂದೆಗೆದುಕೊಳ್ಳುವಂತೆ ಸರಕಾರವು ಮಂಡಳಿಗೆ ಮನವಿ ಮಾಡಿದೆಯೆಂದು ಅವರು ತಿಳಿಸಿದ್ದಾರೆ.

ಸರಕಾರದ ಮನವಿಯನ್ನು ಮಂಡಳಿಯು ಪುರಸ್ಕರಿಸಿರುವುದಾಗಿ ಅವರು ಹೇಳಿದ್ದಾರೆ.

ಆದರೆ ಸಯೀದ್ ಮತ್ತಿತರರನ್ನು 1997ರ ಭಯೋತ್ಪಾದನಾ ಕಾಯ್ದೆಯ 11 ಇಇಇ(ಐ) ಹಾಗೂ 11ಡಿ ಸೆಕ್ಷನ್‌ಗಳಡಿ ಬಂಧಿಸುವಂತೆ ನ್ಯಾಯಾಂಗ ಪರಾಮರ್ಶ ಮಂಡಳಿಗೆ ಮನವಿ ಮಾಡಲಿದೆಯೆಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News