5 ತಿಂಗಳು ಪೆಸಿಫಿಕ್ ಸಾಗರದಲ್ಲಿ ಕಳೆದುಹೋಗಿದ್ದ 2 ಮಹಿಳೆಯರ ರಕ್ಷಣೆ
ಹೊನೊಲುಲು (ಅಮೆರಿಕ), ಅ. 27: ಅಮೆರಿಕದ ಹವಾಯಿ ದ್ವೀಪದಿಂದ ಟಹಿಟಿ ದ್ವೀಪಕ್ಕೆ ಸಣ್ಣ ದೋಣಿಯೊಂದರಲ್ಲಿ ಹೊರಟು, ಐದು ತಿಂಗಳ ಕಾಲ ವಿಶಾಲ ಪೆಸಿಫಿಕ್ ಸಾಗರದಲ್ಲಿ ಕಳೆದುಹೋಗಿದ್ದ ಹೊನೊಲುಲುವಿನ ಇಬ್ಬರು ಮಹಿಳೆಯರು ಮತ್ತು ಅವರ ಎರಡು ನಾಯಿಗಳನ್ನು ಅಮೆರಿಕದ ನೌಕಾಪಡೆ ರಕ್ಷಿಸಿದೆ.
ಅವರ ಪ್ರಯಾಣದ ಆರಂಭಿಕ ದಿನದಂದೇ ಓರ್ವ ಮಹಿಳೆಯ ಮೊಬೈಲ್ ಫೋನ್ ಸಮುದ್ರಕ್ಕೆ ಬಿದ್ದಿತ್ತು.
ಒಂದು ತಿಂಗಳ ಪ್ರಯಾಣದ ಬಳಿಕ ಕೆಟ್ಟ ಹವಾಮಾನದಿಂದಾಗಿ ಅವರ ದೋಣಿಯ ಇಂಜಿನ್ ಹಾಳಾಯಿತು. ಅವರ ಹಾಯಿಗೆ ಹಾನಿಯಾಯಿತು. ಬಳಿಕ ವಿಶಾಲ ಸಾಗರದಲ್ಲಿ ಸಾವಿರಾರು ಮೈಲಿ ನಿಯಂತ್ರಣವಿಲ್ಲದೆ ಸಾಗುತ್ತಿದ್ದಾಗ ಅವರ ನೀರು ಶುದ್ಧೀಕರಣ ಯಂತ್ರ ಹಾಳಾಯಿತು.
ಆದರೆ, ಮುಂದಾಲೋಚನೆ ಹೊಂದಿದ್ದ ಈ ಮಹಿಳೆಯರು ಒಂದು ವರ್ಷಕ್ಕೂ ಹೆಚ್ಚು ಅವಧಿಗೆ ಸಾಕಾಗುವಷ್ಟು ಆಹಾರವನ್ನು ಹೊಂದಿದ್ದರು.
ಐದು ತಿಂಗಳ ಕಾಲ ಸಾಗರದಲ್ಲಿ ಗೊತ್ತು ಗುರಿಯಿಲ್ಲದೆ ಸಾಗಿದ ಅವರು ಪ್ರತಿ ದಿನ ಅಪಾಯದ ಕರೆಗಳನ್ನು ನೀಡುತ್ತಿದ್ದರು. ಆದರೆ, ಯಾರಿಗೂ ಅದು ಕೇಳುತ್ತಿರಲಿಲ್ಲ.
ಅಂತಿಮವಾಗಿ ಅಮೆರಿಕದ ನೌಕಾಪಡೆಯು ಜಪಾನ್‌ನಿಂದ ಆಗ್ನೇಯಕ್ಕೆ ಸುಮಾರು 1,500 ಕಿ.ಮೀ. ದೂರದಲ್ಲಿದ್ದ ಅವರನ್ನು ಬುಧವಾರ ರಕ್ಷಿಸಿತು.
ಆದರೆ, ಅವರ ಉದ್ದೇಶಿತ ಸ್ಥಳ ಟಹಿಟಿಯೂ ತೀರದಿಂದ ಸಾವಿರಾರು ಮೈಲಿ ದೂರದಲ್ಲಿದೆ.
ಅವರ ಹಾನಿಗೊಂಡ ದೋಣಿಯನ್ನು ತೈವಾನ್‌ನ ಮೀನುಗಾರಿಕಾ ದೋಣಿಯೊಂದು ಮಂಗಳವಾರ ನೋಡಿದ್ದು, ಅಮೆರಿಕದ ತಟರಕ್ಷಣಾ ಪಡೆಗೆ ಮಾಹಿತಿ ನೀಡಿತು.