×
Ad

ಫಿಫಾ ಅಂಡರ್ -17 ವಿಶ್ವಕಪ್: ಭಾರತ ಸೋತರೂ ಎರಡು ವಿಶ್ವ ದಾಖಲೆಗಳು

Update: 2017-10-29 14:55 IST

ಕೋಲ್ಕತಾ, ಅ.29: ಭಾರತದಲ್ಲಿ ನಡೆದ ಹದಿನೇಳನೆ ಆವೃತ್ತಿಯ ಫಿಫಾ ಅಂಡರ್-17 ವಿಶ್ವಕಪ್ ಪ್ರೇಕ್ಷಕರ ಪಾಲ್ಗೋಳ್ಳುವಿಕೆಯಲ್ಲಿ ಹೊಸ ದಾಖಲೆಯನ್ನು ನಿರ್ಮಿಸಿದೆ. ಫಿಫಾ -17 ವಿಶ್ವಕಪ್ ಇತಿಹಾಸದಲ್ಲಿ ಅತ್ಯಂತ ಹೆಚ್ಚು ಪ್ರೇಕ್ಷಕರು ಈ ವಿಶ್ವಕಪ್ ಕೂಟದಲ್ಲಿ ಭಾಗವಹಿಸಿದ್ದಾರೆ.

ಅ.6ರಿಂದ 28ರ ತನಕ ಭಾರತದ 6 ನಗರಗಳ ಕ್ರೀಡಾಂಗಣಗಳಲ್ಲಿ ನಡೆದ ಟೂರ್ನಮೆಂಟ್‌ನಲ್ಲಿ ಒಟ್ಟು 13,47, 133 ಪ್ರೇಕ್ಷಕರು ಭಾಗವಹಿಸಿದ್ದರು. ಇಷ್ಟರ ತನಕ ಯಾವುದೇ ಆವೃತ್ತಿಯಲ್ಲೂ ಇಷ್ಟು ಗರಿಷ್ಠ ಸಂಖ್ಯೆಯಲ್ಲಿ ಪ್ರೇಕ್ಷಕರು ಭಾಗವಹಿಸಿರಲಿಲ್ಲ. ಮೆಕ್ಸಿಕೊದಲ್ಲಿ 2011ರ ಆವೃತ್ತಿಯ ವಿಶ್ವಕಪ್‌ನಲ್ಲಿ 10, 02,314 ಪ್ರೇಕ್ಷಕರು ಭಾಗವಹಿಸಿದ್ದರು.

1985ರಲ್ಲಿ ಚೀನಾದಲ್ಲಿ ನಡೆದ ಮೊದಲ ಟೂರ್ನಮೆಂಟ್‌ನಲ್ಲಿ 12,30,976 ಪ್ರೇಕ್ಷಕರು ಭಾಗವಹಿಸಿದ್ದರು. ಈ ದಾಖಲೆಯನ್ನು ಭಾರತದಲ್ಲಿ ನಡೆದ ಫಿಫಾ ವಿಶ್ವಕಪ್ ಹಿಂದಿಕ್ಕಿದೆ.

ಅ.22ರಂದು ಕೋಲ್ಕತಾದ ಸಾಲ್ಟ್‌ಲೇಕ್ ಸ್ಟೇಡಿಯಂನಲ್ಲಿ ನಡೆದ ಜರ್ಮನಿ ಮತ್ತು ಬ್ರೆಝಿಲ್ ತಂಡಗಳ ನಡುವಿನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 66,613 ಪ್ರೇಕ್ಷಕರು ಉಪಸ್ಥಿತರಿದ್ದರು. ಅದೇ ಕ್ರೀಡಾಂಗಣದಲ್ಲಿ ಅ.25ರಂದು ಬ್ರೆಝಿಲ್ -ಇಂಗ್ಲೆಂಡ್ ತಂಡಗಳ ಸೆಮಿಫೈನಲ್ ವೀಕ್ಷಣೆಗೆ ದಾಖಲೆಯ 63, 881 ಪ್ರೇಕ್ಷಕರು ಆಗಮಿಸಿದ್ದರು.

   ಅ.28ರಂದು ಸ್ಪೇನ್ ಮತ್ತು ಇಂಗ್ಲೆಂಡ್ ತಂಡಗಳ ನಡುವಿನ ಫೈನಲ್ ಪಂದ್ಯಕ್ಕೆ ಸಾಲ್ಟ್‌ಲೇಕ್ ಸ್ಟೇಡಿಯನಲ್ಲಿ 66, 683 ಪ್ರೇಕ್ಷಕರು ಸಾಕ್ಷಿಯಾದರು. ಇದಕ್ಕೂ ಮೊದಲು ಮೂರನೆ ಸ್ಥಾನಕ್ಕಾಗಿ ನಡೆದ ಮಾಲಿ ಮತ್ತು ಬ್ರೆಝಿಲ್ ಪಂದ್ಯದಲ್ಲಿ 56,432 ಪ್ರೇಕ್ಷಕರು ಉಪಸ್ಥಿತರಿದ್ದರು. ಕೋಲ್ಕತಾದ ಸಾಲ್ಟ್‌ಲೇಕ್ ಸ್ಟೇಡಿಯಂ ಪ್ರೇಕ್ಷಕರ ಭಾಗವಹಿಸುವಲ್ಲಿ ದಾಖಲೆ ನಿರ್ಮಿಸಿದೆ.

   17ನೆ ಆವೃತ್ತಿಯ ಫುಟ್ಬಾಲ್ ವಿಶ್ವಕಪ್‌ನಲ್ಲಿ ಒಟ್ಟು 24 ತಂಡಗಳು ಪ್ರವೇಶ ಪಡೆದಿತ್ತು. ಇದರಲ್ಲಿ ಆತಿಥೇಯ ಭಾರತ ಮೊದಲ ಬಾರಿ ವಿಶ್ವಕಪ್‌ಗೆ ಪ್ರವೇಶ ಗಿಟ್ಟಿಸಿಕೊಂಡಿತ್ತು. ಕಳೆದ ಆವೃತ್ತಿಯ ಚಾಂಪಿಯನ್ ನೈಜೀರಿಯ ಪ್ರವೇಶ ಪಡೆಯುವಲ್ಲಿ ವಿಫಲಗೊಂಡಿತ್ತು. 2009ರಲ್ಲಿ ಇದೇ ರೀತಿ ಚಾಂಪಿಯನ್ ಸ್ವಿಟ್ಝರ್ಲೆಂಡ್ ತಂಡ 2011ರಲ್ಲಿ ಮೆಕ್ಸಿಕೊದಲ್ಲಿ ನಡೆದ ವಿಶ್ವಕಪ್ ಟೂರ್ನಮೆಂಟ್‌ನಲ್ಲಿ ಪ್ರವೇಶ ಪಡೆಯುವಲ್ಲಿ ಎಡವಿತ್ತು. ಭಾರತದಲ್ಲಿ ಈ ಬಾರಿ ರೌಂಡ್ ರಾಬಿನ್ ಮಾದರಿಯಲ್ಲಿ ನಡೆದ ಹಣಾಹಣಿಯಲ್ಲಿ 6 ಗುಂಪುಗಳಿಂದ 16 ತಂಡಗಳು ನಾಕೌಟ್ ಹಂತ ತಲುಪಿತ್ತು. ಕ್ವಾರ್ಟರ್ ಫೈನಲ್‌ನಲ್ಲಿ 8 ತಂಡಗಳು ಹಣಾಹಣಿ ನಡೆಸಿತ್ತು. ಸೆಮಿಫೈನಲ್‌ನಲ್ಲಿ ಬ್ರೆಝಿಲ್‌ನ್ನು ಇಂಗ್ಲೆಂಡ್, ಮಾಲಿಯನ್ನು ಸ್ಪೇನ್ ಮಣಿಸಿ ಫೈನಲ್ ತಲುಪಿತ್ತು. ಫೈನಲ್‌ನಲ್ಲಿ ಸ್ಪೇನ್‌ನ್ನು 5-2 ಅಂತರದಲ್ಲಿ ಮಣಿಸಿದ ಇಂಗ್ಲೆಂಡ್ ಮೊದಲ ಬಾರಿ ವಿಶ್ವ ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿದೆ. ಮಾಲಿಯನ್ನು 2-0 ಗೋಲುಗಳಿಂದ ಮಣಿಸಿದ ಬ್ರೆಝಿಲ್ ಮೂರನೆ ಸ್ಥಾನ ಪಡೆದಿದೆ.

ಒಟ್ಟು 52 ಪಂದ್ಯಗಳಲ್ಲಿ 183 ಗೋಲುಗಳು ದಾಖಲಾಗಿವೆ. ಇಂಗ್ಲೆಂಡ್‌ನ ರಿಯನ್ ಬ್ರೇವ್‌ಸ್ಟರ್ 8 ಗೋಲುಗಳನ್ನು ದಾಖಲಿಸಿದ್ದರು. ಅವರ ತಂಡದ ಫಿಲ್ ಫೊಡೆನ್ ಅತ್ಯುತ್ತಮ ಆಟಗಾರ, ಗ್ಯಾಬ್ರೆಯಲ್ ಬ್ರೆಝಾವೊ ಬೆಸ್ಟ್ ಗೋಲು ಕೀಪರ್ ಪ್ರಶಸ್ತಿ ಗೆ ಭಾಜನರಾಗಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News