×
Ad

ಮೊದಲ ಟ್ವೆಂಟಿ-20: ನ್ಯೂಝಿಲೆಂಡ್ ವಿರುದ್ಧ ಭಾರತ 202/3

Update: 2017-11-01 20:39 IST

ಹೊಸದಿಲ್ಲಿ, ನ.1: ಆರಂಭಿಕ ಆಟಗಾರರಾದ ರೋಹಿತ್ ಶರ್ಮ ಹಾಗೂ ಶಿಖರ್ ಧವನ್ ಅರ್ಧಶತಕದ ಕೊಡುಗೆಯ ಸಹಾಯದಿಂದ ಭಾರತ ತಂಡ ನ್ಯೂಝಿಲೆಂಡ್ ವಿರುದ್ಧದ ಮೊದಲ ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯದಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 202 ರನ್ ಗಳಿಸಿದೆ.

ಇಲ್ಲಿನ ಫಿರೋಝ್ ಶಾ ಕೋಟ್ಲಾ ಸ್ಟೇಡಿಯಂನಲ್ಲಿ ಬುಧವಾರ ಟಾಸ್ ಜಯಿಸಿದ ನ್ಯೂಝಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಮೊದಲು ಬೌಲಿಂಗ್ ಆಯ್ದುಕೊಂಡರು.

ತಲಾ ಒಂದು ಬಾರಿ ಜೀವದಾನ ಪಡೆದ ರೋಹಿತ್ ಹಾಗೂ ಧವನ್ ಬ್ಯಾಟಿಂಗ್ ಸ್ನೇಹಿ ಪಿಚ್‌ನಲ್ಲಿ ಕಿವೀಸ್ ಬೌಲರ್‌ಗಳನ್ನು ಚೆನ್ನಾಗಿ ದಂಡಿಸಿದರು. ಮೊದಲ ವಿಕೆಟ್‌ಗೆ 158 ರನ್ ಜೊತೆಯಾಟ ನಡೆಸಿ ಭದ್ರಬುನಾದಿ ಹಾಕಿಕೊಟ್ಟರು.

 ಧವನ್ 8 ರನ್ ಗಳಿಸಿದ್ದಾಗ ಸ್ಯಾಂಟ್ನರ್‌ರಿಂದ ಜೀವದಾನ ಪಡೆದರೆ, ರೋಹಿತ್ 16 ರನ್ ಗಳಿಸಿದ್ದಾಗ ಟಿಮ್ ಸೌಥಿಯಿಂದ ಜೀವದಾನ ಪಡೆದಿದ್ದರು.

ರೋಹಿತ್-ಧವನ್ 12ನೆ ಓವರ್‌ನಲ್ಲಿ ಭಾರತದ ಸ್ಕೋರನ್ನು 100ಕ್ಕೆ ತಲುಪಿಸಿದರು. ಈ ಮೂಲಕ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಮೊದಲ ವಿಕೆಟ್‌ಗೆ 100 ರನ್ ಜೊತೆಯಾಟ ನಡೆಸಿದ ಭಾರತದ ಮೂರನೆ ಆರಂಭಿಕ ಆಟಗಾರರು ಎನಿಸಿಕೊಂಡರು. 2007ರಲ್ಲಿ ಗೌತಮ್ ಗಂಭೀರ್ ಹಾಗೂ ವೀರೇಂದ್ರ ಸೆಹ್ವಾಗ್ ಇಂಗ್ಲೆಂಡ್‌ನ ವಿರುದ್ಧ ಡರ್ಬನ್‌ನಲ್ಲಿ 136 ರನ್ ಜೊತೆಯಾಟ ನಡೆಸಿದ್ದರು. 2016ರಲ್ಲಿ ಹರಾರೆಯಲ್ಲಿ ಝಿಂಬಾಬ್ವೆ ವಿರುದ್ಧ ಕೆ.ಎಲ್.ರಾಹುಲ್ ಹಾಗೂ ಮನ್‌ದೀಪ್ ಸಿಂಗ್ ಮುರಿಯದ ಜೊತೆಯಾಟದಲ್ಲಿ 103 ರನ್ ಗಳಿಸಿದ್ದರು.

3ನೆ ಅರ್ಧಶತಕ ಸಿಡಿಸಿದ ಧವನ್ 80 ರನ್‌ಗೆ ಐಶ್ ಸೋಧಿಗೆ ವಿಕೆಟ್ ಒಪ್ಪಿಸುವ ಮೊದಲು 52 ಎಸೆತಗಳಲ್ಲಿ 10 ಬೌಂಡರಿ, 2 ಸಿಕ್ಸರ್ ಸಿಡಿಸಿದರು. ಧವನ್ ಔಟಾದ ಬೆನ್ನಿಗೆ ಹಾರ್ದಿಕ್ ಪಾಂಡ್ಯ(0) ಔಟಾದರು.

12ನೆ ಅರ್ಧಶತಕ(80 ರನ್, 55 ಎಸೆತ, 6 ಬೌಂಡರಿ, 4 ಸಿಕ್ಸರ್) ಸಿಡಿಸಿದ ರೋಹಿತ್ 19ನೆ ಓವರ್‌ನಲ್ಲಿ ಟ್ರೆಂಟ್ ಬೌಲ್ಟ್‌ಗೆ ವಿಕೆಟ್ ಒಪ್ಪಿಸಿದರು.

ನಾಯಕ ವಿರಾಟ್ ಕೊಹ್ಲಿ ಅಜೇಯ 26 ಹಾಗೂ ಎಂಎಸ್ ಧೋನಿ ಅಜೇಯ 7 ರನ್ ಗಳಿಸಿದರು. ಕಿವೀಸ್‌ನ ಪರ ಐಶ್ ಸೋಧಿ(2-25) ಎರಡು ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News