ಏಷ್ಯಾಕಪ್ ಹಾಕಿ: ಭಾರತದ ಮಹಿಳಾ ತಂಡ ಫೈನಲ್‌ಗೆ

Update: 2017-11-03 14:51 GMT

ಟೋಕಿಯೊ, ನ.3: ಹಾಲಿ ಚಾಂಪಿಯನ್ ಜಪಾನ್ ತಂಡವನ್ನು 4-2 ಗೋಲುಗಳ ಅಂತರದಿಂದ ಮಣಿಸಿದ ಭಾರತದ ಮಹಿಳಾ ಹಾಕಿ ತಂಡ 9ನೆ ಆವೃತ್ತಿಯ ಏಷ್ಯಾಕಪ್‌ನಲ್ಲಿ ಫೈನಲ್‌ಗೆ ಲಗ್ಗೆ ಇಟ್ಟಿದೆ.

ಶುಕ್ರವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಗುರ್ಜಿತ್ ಕೌರ್ ಅವಳಿ ಗೋಲು(7ನೆ,10ನೆ ನಿಮಿಷ), ನವಜೋತ್ ಕೌರ್(9ನೆ ನಿಮಿಷ) ಹಾಗೂ ಲಾಲ್‌ರೆಮ್‌ಸಿಯಾಮಿ(38ನೆ ನಿಮಿಷ)ತಲಾ ಒಂದು ಗೋಲು ನೆರವಿನಿಂದ ಆತಿಥೇಯ ಜಪಾನ್ ವಿರುದ್ಧ ಭರ್ಜರಿ ಜಯ ಸಾಧಿಸಿರುವ ಭಾರತ ಪ್ರಶಸ್ತಿ ಸುತ್ತಿಗೆ ತಲುಪಿತು.

 ನಾಲ್ಕನೆ ಬಾರಿ ಏಷ್ಯಾಕಪ್ ಫೈನಲ್‌ಗೆ ತಲುಪಿರುವ ರಾಣಿ ರಾಂಪಾಲ್ ನೇತೃತ್ವದ ಭಾರತ ರವಿವಾರ ಚೀನಾ ತಂಡವನ್ನು ಎದುರಿಸಲಿದೆ. ಭಾರತ 2004ರಲ್ಲಿ ಪ್ರಶಸ್ತಿ ಜಯಿಸಿತ್ತು. 1999 ಹಾಗೂ 2009ರಲ್ಲಿ ರನ್ನರ್ಸ್‌-ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತ್ತು.

ಗುರ್ಜಿತ್ ಸಿಂಗ್ ಟೂರ್ನಿಯಲ್ಲಿ ತಮ್ಮ ಶ್ರೇಷ್ಠ ಪ್ರದರ್ಶನ ಮುಂದುವರಿಸಿದರು. ಏಳನೆ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಗೋಲಾಗಿ ಪರಿವರ್ತಿಸಿದ ಗುರ್ಜಿತ್ ಭಾರತಕ್ಕೆ ಬೇಗನೆ 1-0 ಮುನ್ನಡೆ ಒದಗಿಸಿಕೊಟ್ಟರು. 9ನೆ ನಿಮಿಷದಲ್ಲಿ ನವಜೋತ್ ಕೌರ್ ಫೀಲ್ಡ್ ಗೋಲು ಬಾರಿಸುವ ಮೂಲಕ ಭಾರತದ ಮುನ್ನಡೆಯನ್ನು 2-0ಗೆ ಏರಿಸಿದರು.

ನವಜೋತ್ ಗೋಲು ಬಾರಿಸಿದ ಬೆನ್ನಿಗೆ ಗುರ್ಜಿತ್ ಮತ್ತೊಂದು ಗೋಲು ಬಾರಿಸಿ ಭಾರತದ ಮುನ್ನಡೆಯನ್ನು 3-0ಗೆ ಹಿಗ್ಗಿಸಿದರು. ಜಪಾನ್ ಎರಡನೆ ಕ್ವಾರ್ಟರ್‌ನಲ್ಲಿ ಭಾರತ ವಿರುದ್ಧ ಪ್ರಾಬಲ್ಯ ಸಾಧಿಸಿತು. ಶಿಹೊ ಸುಜಿ(17ನೆ ನಿಮಿಷ) ಹಾಗೂ ಯುಯಿ ಐಶಿಬಾಶಿ(28ನೆ ನಿಮಿಷ) ತಲಾ ಒಂದು ಗೋಲು ಬಾರಿಸಿ ಮೊದಲಾರ್ಧದಲ್ಲಿ ತಂಡದ ಸ್ಕೋರನ್ನು 2-3ಕ್ಕೆ ತಲುಪಿಸಿದರು.

ಮೂರನೆ ಕ್ವಾರ್ಟರ್‌ನಲ್ಲಿ 38ನೆ ನಿಮಿಷದಲ್ಲಿ ಲಾಲ್‌ರೆಮ್‌ಸಿಯಾಮಿ ಟೂರ್ನಿಯಲ್ಲಿ ಮೊದಲ ಬಾರಿ ಗೋಲು ಬಾರಿಸಿ ಭಾರತಕ್ಕೆ 4-2 ಮುನ್ನಡೆ ಒದಗಿಸಿಕೊಟ್ಟರು. ಭಾರತದ ಡಿಫೆಂಡರ್‌ಗಳು ಕೊನೆಯ 22 ನಿಮಿಷಗಳ ಆಟದಲ್ಲಿ ಜಪಾನ್‌ಗೆ ಒತ್ತಡ ಹೇರಿ ಮುನ್ನಡೆ ಕಾಯ್ದುಕೊಳ್ಳಲು ನೆರವಾದರು.

ಇದೇ ವೇಳೆ ನಿಕ್ಕಿ ಪ್ರಧಾನ್ ಭಾರತದ ಪರ 50ನೆ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದರು.

ಭಾರತ ಗ್ರೂಪ್ ಹಂತದಲ್ಲಿ ಸಿಂಗಾಪುರ(10-0), ಚೀನಾ(4-1) ಹಾಗೂ ಮಲೇಷ್ಯಾ(2-0)ತಂಡವನ್ನು ಮಣಿಸುವ ಮೂಲಕ ನಾಕೌಟ್ ಹಂತಕ್ಕೇರಿತ್ತು. ಗುರುವಾರ ನಡೆದ ಕ್ವಾರ್ಟರ್‌ಫೈನಲ್‌ನಲ್ಲಿ ಕಝಕ್‌ಸ್ತಾನ ತಂಡವನ್ನು 7-1 ಅಂತರದಿಂದ ಸೋಲಿಸಿತ್ತು. ಭಾರತ ರವಿವಾರ ನಡೆಯಲಿರುವ ಫೈನಲ್‌ನಲ್ಲಿ ಚೀನಾ ತಂಡವನ್ನು ಎದುರಿಸಲಿದ್ದು, ಚೀನಾ 1989 ಹಾಗೂ 2009ರಲ್ಲಿ ಏಷ್ಯಾಕಪ್‌ನ್ನು ಜಯಿಸಿತ್ತು. 2009ರಲ್ಲಿ ಭಾರತ-ಚೀನಾ ಏಷ್ಯಾಕಪ್ ಫೈನಲ್‌ನಲ್ಲಿ ಮುಖಾಮುಖಿಯಾಗಿದ್ದು ಚೀನಾ 5-3 ಅಂತರದಿಂದ ಜಯ ಸಾಧಿಸಿತ್ತು.

 ಪ್ರಸ್ತುತ ಆವೃತ್ತಿಯಲ್ಲಿ ಏಷ್ಯಾಕಪ್‌ನ್ನು ಜಯಿಸುವ ತಂಡ ಇಂಗ್ಲೆಂಡ್‌ನಲ್ಲಿ 2018ರಲ್ಲಿ ನಡೆಯಲಿರುವ ವಿಶ್ವಕಪ್‌ಗೆ ಅರ್ಹತೆ ಪಡೆದುಕೊಳ್ಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News