×
Ad

ರಾಷ್ಟ್ರಗೀತೆ ಕೇಳಿ ಕಣ್ಣೀರಿಟ್ಟ ಸಿರಾಜ್

Update: 2017-11-04 18:44 IST

  ರಾಜ್‌ಕೋಟ್, ನ.5: ಒಂದಲ್ಲ ಒಂದು ದಿನ ದೇಶವನ್ನು ಪ್ರತಿನಿಧಿಸಬೇಕೆನ್ನುವುದು ಪ್ರತಿಯೊಬ್ಬ ಕ್ರಿಕೆಟಿಗನ ಕನಸು. ಹೈದರಾಬಾದ್‌ನ ವೇಗದ ಬೌಲರ್ ಮುಹಮ್ಮದ್ ಸಿರಾಜ್‌ಗೂ ಇಂತಹ ಕನಸಿತ್ತು. ಆಟೋ ರಿಕ್ಷಾ ಚಾಲಕನ ಪುತ್ರ ಸಿರಾಜ್‌ಗೆ ಭಾರತದ ಪ್ರಧಾನ ಕೋಚ್ ರವಿ ಶಾಸ್ತ್ರಿ ನ್ಯೂಝಿಲೆಂಡ್ ವಿರುದ್ಧ ಎರಡನೆ ಟ್ವೆಂಟಿ-20 ಪಂದ್ಯಕ್ಕೆ ಮೊದಲು ಅಂತಾರಾಷ್ಟ್ರೀಯ ಕ್ಯಾಪ್ ನೀಡುವ ಮೂಲಕ ಸಿರಾಜ್ ಕನಸು ನನಸಾಗಿಸಿದರು. ರಾಷ್ಟ್ರಗೀತೆ ಮೊಳಗಿದ ಬಳಿಕ 23ರ ಹರೆಯದ ಸಿರಾಜ್ ಭಾವೊದ್ವೇಗಕ್ಕೆ ಒಳಗಾಗಿ ಕಣ್ಣೀರಿಟ್ಟರು.

ನಿವೃತ್ತ ವೇಗದ ಬೌಲರ್ ಆಶೀಷ್ ನೆಹ್ರಾರಿಂದ ತೆರವಾದ ಆಡುವ 11ರ ಬಳಗಕ್ಕೆ ಸಿರಾಜ್ ಆಯ್ಕೆಯಾಗಿದ್ದಾರೆ ಎಂದು ನಾಯಕ ವಿರಾಟ್ ಕೊಹ್ಲಿ ಟಾಸ್ ಬಳಿಕ ಘೋಷಿಸಿದರು. ತನ್ನ ಚೊಚ್ಚಲ ಪಂದ್ಯದಲ್ಲೇ ಕಿವೀಸ್ ನಾಯಕ ಕೇನ್ ವಿಲಿಯಮ್ಸನ್ ವಿಕೆಟ್ ಕಬಳಿಸಿದ ಸಿರಾಜ್ ಎಲ್ಲರ ಗಮನ ಸೆಳೆದರು. ಸಿರಾಜ್ ವರ್ಷಾರಂಭದಲ್ಲಿ ಸಿರಾಜ್ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ 2.6 ಕೋ.ರೂ.ಗೆ ಹರಾಜಾಗುವ ಮೂಲಕ ಎಲ್ಲರ ಹುಬ್ಬೇರಿಸಿದ್ದರು. ಈ ವರ್ಷದ ಐಪಿಎಲ್‌ನಲ್ಲಿ 6 ಪಂದ್ಯಗಳಲ್ಲಿ 10 ವಿಕೆಟ್‌ಗಳನ್ನು ಪಡೆದಿದ್ದ ಸಿರಾಜ್ ತನ್ನ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದರು. ಸನ್‌ರೈಸರ್ಸ್ ತಂಡ ಎಲಿಮಿನೇಟರ್ ಸುತ್ತಿಗೆ ಲಗ್ಗೆ ಇಡಲು ನೆರವಾಗಿದ್ದರು. ದೇಶೀಯ ಕ್ರಿಕೆಟ್‌ನಲ್ಲಿ ಭರವಸೆಯ ಆಟಗಾರನಾಗಿರುವ ಸಿರಾಜ್ ಹೈದರಾಬಾದ್‌ನ ಪರ 44 ವಿಕೆಟ್‌ಗಳನ್ನು ಪಡೆದಿದ್ದಾರೆ.

 ‘‘ನನ್ನ ತಂದೆ ಆಟೋ-ರಿಕ್ಷಾ ಚಾಲಕ. ನಾನು ಕ್ರಿಕೆಟಿಗನಾಗಲು ಅವರು ಕಠಿಣ ಶ್ರಮಪಟ್ಟಿದ್ದರು. ಅವರ ಕಠಿಣಶ್ರಮ ವ್ಯರ್ಥವಾಗಲು ಬಿಡಲಾರೆ. ಐಪಿಎಲ್ ನನ್ನ ಪಾಲಿಗೆ ಟರ್ನಿಂಗ್ ಪಾಯಿಂಟ್. ನಾನೀಗ ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿದ್ದೇನೆ’’ ಎಂದು ಸಿರಾಜ್ ಹೇಳಿದರು.

‘‘ಈವರ್ಷದ ಐಪಿಎಲ್‌ನಲ್ಲಿ ಸನ್‌ರೈಸರ್ಸ್ ತಂಡದಲ್ಲಿ ಆಶೀಷ್ ನೆಹ್ರಾರೊಂದಿಗೆ ಆಡುವ ಅವಕಾಶ ಲಭಿಸಿತ್ತು. ನೆಟ್ ಸೆಶನ್ಸ್ ವೇಳೆ ಅವರು ನನಗೆ ಸಾಕಷ್ಟು ಸಲಹೆ ನೀಡಿದ್ದಾರೆ. ಅವರ ಸಲಹೆ ನನ್ನ ಬೌಲಿಂಗ್ ಸುಧಾರಣೆಯಾಗಲು ನೆರವಾಯಿತು. 20 ವರ್ಷಗಳ ಕಾಲ ಕ್ರಿಕೆಟ್ ಆಡಿರುವ ನೆಹ್ರಾ ಅಹಂಕಾರ ತೋರದೇ ನನ್ನನ್ನು ಸಹೋದರನಂತೆ ನೋಡಿಕೊಂಡಿದ್ದರು’’ ಸಿರಾಜ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News