×
Ad

ನ.7ರಂದು ತಿರುವನಂತಪುರದಲ್ಲಿ ಅಂತಿಮ ಟ್ವೆಂಟಿ-20 ಪಂದ್ಯ

Update: 2017-11-06 23:25 IST

ತಿರುವನಂತಪುರ, ನ.6:ಭಾರತ ಮತ್ತು ನ್ಯೂಝಿಲೆಂಡ್ ತಂಡಗಳ ನಡುವಿನ ಮೂರು ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯಗಳ ಸರಣಿಯ ಅಂತಿಮ ಮತ್ತು ನಿರ್ಣಾಯಕ ಪಂದ್ಯ ಮಂಗಳವಾರ ತಿರುವನಂತಪುರದಲ್ಲಿ ನಡೆಯಲಿದೆ.

ಈಗಾಗಲೇ ಸರಣಿಯಲ್ಲಿ ಉಭಯ ತಂಡಗಳು ತಲಾ 1 ಪಂದ್ಯದಲ್ಲಿ ಗೆಲುವಿನೊಂದಿಗೆ 1-1 ಸಮಬಲ ಸಾಧಿಸಿದೆ. ರಾಜ್‌ಕೋಟ್‌ನಲ್ಲಿ ನಡೆದ ಎರಡನೇ ಪಂದ್ಯದಲ್ಲಿ 40 ರನ್‌ಗಳ ಸೋಲು ಅನುಭವಿಸಿದ ಟೀಮ್ ಇಂಡಿಯಾ ಒತ್ತಡಕ್ಕೆ ಸಿಲುಕಿದೆ.

ಏಕದಿನ ಸರಣಿಯನ್ನು 2-1 ಅಂತರದಲ್ಲಿ ವಶಪಡಿಸಿಕೊಂಡಿದ್ದ ಟೀಮ್ ಇಂಡಿಯಾಕ್ಕೆ ಅದೇ ಯೋಜನೆ ಇದ್ದರೂ, ನ್ಯೂಝಿಲೆಂಡ್ ಆಟಗಾರರು ಮೊದಲ ಪಂದ್ಯದ ಸೋಲಿಗೆ ತಿರುಗೇಟು ನೀಡಿರುವ ಹಿನ್ನೆಲೆಯಲ್ಲಿ ಕೊಹ್ಲಿ ಪಡೆಗೆ ಮೂರನೆ ಪಂದ್ಯದಲ್ಲಿ ಕಠಿಣ ಸವಾಲು ಎದುರಾಗಿದೆ.

ಉಭಯ ತಂಡಗಳಿಗೂ ಸರಣಿ ಗೆಲುವಿಗೆ ನಿರ್ಣಾಯಕವಾಗಿರುವ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆ ಕಂಡು ಬಂದಿದೆ. ಪಂದ್ಯ ರದ್ದಾದರೆ ಭಾರತ-ನ್ಯೂಝಿಲೆಂಡ್ ಪ್ರಶಸ್ತಿಯನ್ನು ಹಂಚಿಕೊಳ್ಳಲಿದೆ.

29 ವರ್ಷಗಳ ಬಳಿಕ ತಿರುವನಂತಪುರದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯ ನಡೆಯುತ್ತಿದ್ದು, ಮಾಜಿ ನಾಯಕ ಮಹೇಂದ್ರ ಸಿಂಗ್ ಅವರು ಉತ್ತಮ ಫಾರ್ಮ್‌ನಲ್ಲಿದ್ದರೂ, ಅವರು ಟ್ವೆಂಟಿ-20 ಕ್ರಿಕೆಟ್ ಆಡುತ್ತಿರುವ ಹಿನ್ನೆಲೆಯಲ್ಲಿ ಮಾಜಿ ಆಟಗಾರರು ಅಪಸ್ವರ ಎತ್ತಿದ್ದಾರೆ. ಧೋನಿ ಈ ಪಂದ್ಯದಲ್ಲಿ ತಮ್ಮನ್ನು ಟೀಕಿಸುವವರಿಗೆ ಬ್ಯಾಟ್‌ನ ಮೂಲಕ ಉತ್ತರಿಸುವುದನ್ನು ನಿರೀಕ್ಷಿಸಲಾಗಿದೆ.

 ಕಳೆದ ಪಂದ್ಯದಲ್ಲಿ ಧೋನಿ 49 ರನ್(37ಎ, 2ಬೌ,3ಸಿ) ಗಳಿಸಿದ್ದರು. ಈ ಕೊಡುಗೆ ಸಣ್ಣದಲ್ಲ. ನಾಯಕ ಕೊಹ್ಲಿ 65 ರನ್(42ಎ, 8ಬೌ,1ಸಿ) ಗಳಿಸಿದ್ದರು. ಅವರು 18ನೆ ಅರ್ಧಶತಕ ದಾಖಲಿಸಿದ್ದರು. ಅಯ್ಯರ್ 23 ರನ್(21ಎ,4ಬೌ) ಗಳಿಸಿದ್ದರು.

 9.1 ಓವರ್‌ಗಳಲ್ಲಿ ತಂಡದ ಸ್ಕೋರ್ 4 ವಿಕೆಟ್ ನಷ್ಟದಲ್ಲಿ 47 ಆಗಿದ್ದಾಗ ನಾಯಕ ಕೊಹ್ಲಿ ಮತ್ತು ಮಾಜಿ ನಾಯಕ ಮಹೇಂದ್ರ ಸಿಂಗ್ ಜೊತೆಯಾಗಿದ್ದರು. ಐದನೆ ವಿಕೆಟ್‌ಗೆ 76 ರನ್‌ಗಳನ್ನು ಜಮೆ ಮಾಡಿದ್ದರು. ಅವರು ಹೋರಾಟ ನಡೆಸಿ ಜೊತೆಯಾಟದಲ್ಲಿ ತಂಡದ ಸ್ಕೋರ್‌ನ್ನು 123ಕ್ಕೆ ಏರಿಸಿದ್ದರು. ಆರಂಭಿಕ ದಾಂಡಿಗರಾದ ಶಿಖರ್ ಧವನ್ ಮತ್ತು ರೋಹಿತ್ ಶರ್ಮ ಬೇಗನೆ ನಿರ್ಗಮಿಸಿದ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾ ಗೆಲುವಿನ ದಡ ಸೇರುವಲ್ಲಿ ಎಡವಿತು.

      ಧೋನಿ ನಿರ್ಣಾಯಕ ಪಂದ್ಯದಲ್ಲಿ ಯಾವ ಕ್ರಮಾಂಕದಲ್ಲಿ ಆಡುತ್ತಾರೆ ಎನ್ನುವುದು ಕುತೂಹಲ ಕೆರಳಿಸಿದೆ. ಒಂದು ವೇಳೆ ತಂಡದ ಅಗ್ರಸರದಿಯ ದಾಂಡಿಗರು ಬೇಗನೆ ನಿರ್ಗಮಿಸಿದರೆ ಧೋನಿ 4ನೆ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸುವುದನ್ನು ನಿರೀಕ್ಷಿಸಲಾಗಿದೆ. ನಾಯಕ ವಿರಾಟ್ ಕೊಹ್ಲಿ ಮತ್ತು ಕೋಚ್ ರವಿ ಶಾಸ್ತ್ರಿ ಅವರು ಧೋನಿಯನ್ನು ಯಾವ ಕ್ರಮಾಂಕದಲ್ಲಿ ಇಳಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಾಗಿದೆ. ಮೊದಲ ಪಂದ್ಯದಲ್ಲಿ 53 ರನ್‌ಗಳ ಭರ್ಜರಿ ಜಯ ಗಳಿಸಿದ್ದ ಭಾರತಕ್ಕೆ ಎರಡನೆ ಟ್ವೆಂಟಿ-20 ಪಂದ್ಯದಲ್ಲಿ ಗೆಲುವಿನೊಂದಿಗೆ ಸರಣಿಯನ್ನು 2-0 ಅಂತರದಲ್ಲಿ ವಶಪಡಿಸಿಕೊಳ್ಳುವ ಕನಸು ಈಡೇರಲಿಲ್ಲ. ನ್ಯೂಝಿಲೆಂಡ್‌ನ ಕಾಲಿನ್ ಮುನ್ರೊ ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ ನ್ಯೂಝಿಲೆಂಡ್‌ಗೆ ಭರ್ಜರಿ ಗೆಲುವು ದಾಖಲಿಸಲು ನೆರವಾಗಿದ್ದರು. ಕಾಲಿನ್ ಮುನ್ರೊಗೆ ಮೂರು ಜೀವದಾನ ಲಭಿಸಿತ್ತು. ಇದು ಅವರಿಗೆ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಎರಡನೆ ಶತಕ ದಾಖಲಿಸಲು ಅವಕಾಶ ಒದಗಿಸಿತ್ತು. ಭಾರತದ ಬೌಲರ್‌ಗಳು ಕೈ ಸುಟ್ಟುಕೊಂಡರು. ನ್ಯೂಝಿಲೆಂಡ್ ತಂಡವನ್ನು ಕಡಿಮೆ ಮೊತ್ತಕ್ಕೆ ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಅಂತಾರಾಷ್ಟ್ರೀಯ ಕ್ರಿಕೆಟ್ ಪ್ರವೇಶಿಸಿದ ಮುಹಮ್ಮದ್ ಸಿರಾಜ್ ಮೊದಲ ಪಂದ್ಯದಲ್ಲಿ 1 ವಿಕೆಟ್ ಪಡೆದರೂ, ದುಬಾರಿ ರನ್ ಬಿಟ್ಟುಕೊಟ್ಟರು. ಸಿರಾಜ್‌ಗೆ ನಿರ್ಣಾಯಕ ಪಂದ್ಯದಲ್ಲಿ ಅವಕಾಶ ಸಿಗುವ ಬಗ್ಗೆ ಇನ್ನೂ ದೃಢಪಟ್ಟಿಲ್ಲ. ರಾಜ್‌ಕೋಟ್‌ನಲ್ಲಿ ತಂಡ ಸೋಲು ಅನುಭವಿಸಿದ ಬಳಿಕ ನಾಯಕ ವಿರಾಟ್ ಕೊಹ್ಲಿ ಅವರು ಬ್ಯಾಟ್ಸ್‌ಮನ್‌ಗಳನ್ನು ದೂರಿದ್ದರು. ನ್ಯೂಝಿಲೆಂಡ್ ಐಸಿಸಿ ಟ್ವೆಂಟಿ-ರ್ಯಾಂಕಿಂಗ್‌ನಲ್ಲಿ ನಂ.1 ತಂಡವಾಗಿದೆ. ಅಂತಿಮ ಪಂದ್ಯದಲ್ಲಿ ಸೋಲು ಅನುಭವಿಸಿದರೆ ನಂ.1 ಸ್ಥಾನ ಕಳೆದುಕೊಳ್ಳಲಿದೆ. ನಂ.1ಸ್ಥಾನಕ್ಕೆರಲು ಪಾಕಿಸ್ತಾನ ಪೈಪೋಟಿ ನಡೆಸುತ್ತಿದೆ.

 ಮೊದಲ ಪಂದ್ಯದಲ್ಲಿ ಸೋಲಿನ ಬಳಿಕ ಎರಡನೆ ಪಂದ್ಯದಲ್ಲಿ ತಂಡ ಭರ್ಜರಿ ಗೆಲುವು ದಾಖಲಿಸಿರುವ ಹಿನ್ನೆಲೆಯಲ್ಲಿ ತಂಡದ ನಾಯಕ ಕೇನ್ ವಿಲಿಯಮ್ಸ್‌ಗೆ ತಂಡದ ಪ್ರದರ್ಶನ ತೃಪ್ತಿ ನೀಡಿದೆ. ಅವರು ಅಂತಿಮ ಪಂದ್ಯದಲ್ಲೂ ನ್ಯೂಝಿಲೆಂಡ್ ಗೆಲುವು ದಾಖಲಿಸಿ ಸರಣಿಯನ್ನು ವಶಪಡಿಸಿಕೊಳ್ಳಲಿದೆ ಎಂದು ಹೇಳಿದ್ದಾರೆ. ಕಳೆದ ಪಂದ್ಯದಲ್ಲಿ ಟ್ರೆಂಟ್ ಬೌಲ್ಟ್ 32ಕ್ಕೆ 4 ವಿಕೆಟ್ ಪಡೆಯುವ ಮೂಲಕ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಜೀವನಶ್ರೇಷ್ಠ ಪ್ರದರ್ಶನ ನೀಡಿದ್ದರು. ಭಾರತದ ದಾಂಡಿಗರನ್ನು ಕಡಿಮೆ ಮೊತ್ತಕ್ಕೆ ನಿಯಂತ್ರಿಸಿದ್ದರು. ಅವರು ಟೀಮ್ ಇಂಡಿಯಾದ ಅಗ್ರ ಸರದಿಯ ದಾಂಡಿಗರಾದ ರೋಹಿತ್ ಶರ್ಮ ಮತ್ತು ಶಿಖರ್ ಧವನ್‌ರನ್ನು ಬೇಗನೆ ಪೆವಿಲಿಯನ್‌ಗೆ ಅಟ್ಟಿದ್ದರು.

ಭಾರತ

ವಿರಾಟ್ ಕೊಹ್ಲಿ(ನಾಯಕ), ರೋಹಿತ್ ಶರ್ಮ, ಜಸ್‌ಪ್ರೀತ್ ಬುಮ್ರಾ, ಯಜುವೇಂದ್ರ ಚಹಾಲ್, ಶಿಖರ್ ಧವನ್, ಮಹೇಂದ್ರ ಸಿಂಗ್ ಧೋನಿ, ಶ್ರೇಯಸ್ ಅಯ್ಯರ್, ದಿನೇಶ್ ಕಾರ್ತಿಕ್, ಕುಲ್‌ದೀಪ್ ಯಾದವ್, ಭುವನೇಶ್ವರ ಕುಮಾರ್, ಮುಹಮ್ಮದ್ ಸಿರಾಜ್, ಮನೀಷ್ ಪಾಂಡೆ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಕೆ.ಎಲ್.ರಾಹುಲ್.

ನ್ಯೂಝಿಲೆಂಡ್

ಕೇನ್ ವಿಲಿಯಮ್ಸನ್(ನಾಯಕ), ಟೊಡ್ ಅಸ್ತ್ಲೆ, ಟ್ರೆಂಟ್ ಬೌಲ್ಟ್, ಟಾಮ್ ಬ್ರುಸಿ, ಕಾಲಿನ್ ಡಿ ಗ್ರಾಂಡ್‌ಹೋಮ್, ಮಾರ್ಟಿನ್ ಗಪ್ಟಿಲ್, ಮ್ಯಾಟ್ ಹೆನ್ರಿ, ಟಾಮ್ ಲಥಾಮ್, ಹೆನ್ರಿ ನಿಕೋಲ್ಸ್, ಆ್ಯಡಮ್ ಮಿಲ್ನೆ, ಕಾಲಿನ್ ಮುನ್ರೊ, ಗ್ಲೇನ್ ಫಿಲಿಪ್ಸ್, ಮಿಚೆಲ್ ಸ್ಯಾಂಟ್ನೆರ್, ಐಶ್ ಸೋಧಿ, ಟಿಮ್ ಸೌಥಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News