ರಾಸ್ ಟೇಲರ್ ಗೆ ಆಧಾರ್ ಕಾರ್ಡ್ ನೀಡಬೇಕೆಂದ ಸೆಹ್ವಾಗ್!

Update: 2017-11-07 09:03 GMT

ಮುಂಬೈ ,ನ.7: ತಮ್ಮ ಚತುರ ಟ್ವೀಟ್ ಗಳಿಗೆ ಸಾಕಷ್ಟು ಜನಪ್ರಿಯರಾಗಿರುವ ಮಾಜಿ ಕ್ರಿಕೆಟಿಗ  ವಿರೇಂದರ್ ಸೆಹ್ವಾಗ್ ಇದೀಗ ನ್ಯೂಜಿಲೆಂಡ್ ಬ್ಯಾಟ್ಸ್‍ಮೆನ್  ರಾಸ್ ಟೇಲರ್ ಜತೆ ವಿಶಿಷ್ಟ ಟ್ವೀಟ್ ಯುದ್ಧವೊಂದನ್ನು ನಡೆಸಿದ್ದಾರೆ. ತಮ್ಮ ಟ್ವೀಟ್ ಸರಣಿಯಲ್ಲಿ ಸೆಹ್ವಾಗ್ ಅವರು ವಿಶಿಷ್ಟ ಗುರುತು ಪ್ರಾಧಿಕಾರವನ್ನೂ ಜತೆಯಾಗಿಸಿದ್ದಾರೆ.

ಭಾರತದ ಜತೆ ಏಕ ದಿನ ಮತ್ತು ಟಿ-20 ಸರಣಿಗಾಗಿ ಆಗಮಿಸಿರುವ ನ್ಯೂಜಿಲೆಂಡ್ ತಂಡದ ಸದಸ್ಯರಾಗಿರುವ ರಾಸ್ ಟೇಲರ್ ಅವರನ್ನು ಭಾರತದ ಟೈಲರ್ (ದರ್ಜಿ)ಗೆ  ಹೋಲಿಸಿ ಸೆಹ್ವಾಗ್ 15 ದಿನಗಳ ಹಿಂದೆ ಹಿಂದಿಯಲ್ಲಿ ಟ್ವೀಟ್ ಮಾಡಿದ್ದರು.

ಇದಕ್ಕೆ ಪ್ರತಿಕ್ರಿಯೆಯಾಗಿ ಟೇಲರ್  ರವಿವಾರದಂದು ತಮ್ಮ ಇನ್‍ಸ್ಟಾಗ್ರಾಂ ಖಾತೆಯಲ್ಲಿ ಫೋಟೋವೊಂದನ್ನು ಪೋಸ್ಟ್ ಮಾಡಿದ್ದರು. ಈ ಫೋಟೋದಲ್ಲಿ ಅವರು ಬಾಗಿಲು ಮುಚ್ಚಿರುವ ಟೈಲರ್ ಅಂಗಡಿಯೊಂದರ ಹೊರಗೆ ಕುಳಿತಿರುವುದು ಕಾಣಿಸುತ್ತದೆ. ಕೆಳಗೆ ವಿರೇಂದರ್ ಸೆಹ್ವಾಗ್ ಅವರನ್ನು ಟ್ಯಾಗ್ ಮಾಡಿರುವ ಅವರು “ ರಾಜಕೋಟ್ ಮೆ ಮ್ಯಾಚ್ ಕೆ ಬಾದ್. ದರ್ಜಿ (ಟೈಲರ್) ಕಿ ದುಕಾನ್ ಬಂದ್. ಅಗ್ಲಿ ಸಿಲಾಯಿ ತ್ರಿವೆಂಡ್ರಂ ಮೆ ಹೋಗಿ, ಜರೂರು ಆನಾ,'' ಎಂದು ಹಾಸ್ಯಭರಿತವಾಗಿ ಬರೆದಿದ್ದಾರೆ. (ರಾಜಕೋಟ್‍ನ ಟೈಲರ್ ಅಂಗಡಿ ಪಂದ್ಯದ ನಂತರ ಬಂದ್ ಆಗಿದೆ. ಇನ್ನು ಮುಂದಿನ ಹೊಲಿಗೆ ಟ್ರಿವಾಂಡ್ರೆಂನಲ್ಲಿ. ದಯವಿಟ್ಟು ಬನ್ನಿ).

ಸೆಹ್ವಾಗ್  ತಡ ಮಾಡದೆ ಇದಕ್ಕೆ ಪ್ರತಿಕ್ರಿಯಿಸಿದ್ದಾರಲ್ಲದೆ ವಿಶಿಷ್ಟ ಗುರುತು ಪ್ರಾಧಿಕಾರವನ್ನೂ ಟ್ಯಾಗ್ ಮಾಡಿ, ನ್ಯೂಜಿಲೆಂಡ್  ಬ್ಯಾಟ್ಸ್ ಮ್ಯಾನ್ ಗೆ ಅವರ ಹಿಂದಿ ಜ್ಞಾನಕ್ಕಾಗಿ ಆಧಾರ್ ಕಾರ್ಡ್ ದೊರೆಯಬಹುದೇ ಎಂದು ಕೇಳಿದ್ದಾರೆ.

ವಿಶಿಷ್ಟ ಗುರುತು ಪ್ರಾಧಿಕಾರ ಕೂಡ ವಿಶಿಷ್ಟವಾಗಿ ತನ್ನ ಉತ್ತರ  ನೀಡಿ ``ಲಾಂಗ್ವೇಜ್ ನೋ ಬಾರ್. ರೆಸಿಡೆಂಟ್ ಸ್ಟೇಟಸ್ ಈಸ್ ವಾಟ್ ಮ್ಯಾಟರ್ಸ್' (ಭಾಷೆಯ ಮಿತಿಯಿಲ್ಲ, ಇಲ್ಲಿನ ನಿವಾಸಿಯೇ ಎಂಬುದು ಮುಖ್ಯ) ಎಂದು ಹೇಳಿತಲ್ಲದೆ ಈ ಬಗ್ಗೆ ಎಫ್‍ಎಕ್ಯೂ ವಿಭಾಗದ ಒಂದು ಪ್ರಶ್ನೋತ್ತರವನ್ನೂ ಪೋಸ್ಟ್ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News