ಏಷ್ಯನ್ ಚಾಂಪಿಯನ್‌ಶಿಪ್: ಮೇರಿ ಕೋಮ್, ಸೋನಿಯಾ ಫೈನಲ್‌ಗೆ

Update: 2017-11-07 12:47 GMT

ಹೋ ಚಿ ಮಿನ್ ಸಿಟಿ(ವಿಯೆಟ್ನಾಂ), ನ.7: ಐದು ಬಾರಿ ವಿಶ್ವ ಚಾಂಪಿಯನ್ ಪ್ರಶಸ್ತಿ ಗೆದ್ದುಕೊಂಡಿದ್ದ ಭಾರತದ ಖ್ಯಾತ ಮಹಿಳಾ ಬಾಕ್ಸರ್ ಎಂ.ಸಿ.ಮೇರಿ ಕೋಮ್(48 ಕೆ.ಜಿ) ಮತ್ತು ಸೋನಿಯಾ ಲಾಥೆರ್ (57 ಕೆ.ಜಿ) ಅವರು ಇಲ್ಲಿ ನಡೆಯುತ್ತಿರುವ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಮಂಗಳವಾರ ಫೈನಲ್ ಪ್ರವೇಶಿಸಿದ್ದಾರೆ.

 ಇದೇ ವೇಳೆ ನಾಲ್ಕು ಬಾರಿ ಚಿನ್ನ ಜಯಿಸಿದ್ದ ಭಾರತದ ಎಲ್.ಸರಿತಾ ದೇವಿ ಅವರು 64 ಕೆ.ಜಿ. ವಿಭಾಗದ ಮಹಿಳೆಯರ ಬಾಕ್ಸಿಂಗ್ ಸ್ಪರ್ಧೆಯ ಸೆಮಿಫೈನಲ್‌ನಲ್ಲಿ ಸೋತು ಕಂಚಿನ ಪದಕ ಪಡೆದಿದ್ದಾರೆ.

 ಮೇರಿ ಕೋಮ್ ಅವರು ಜಪಾನ್‌ನ ಸಬಾಸಾ ಕೊಮುರಾ ವಿರುದ್ಧ 5-0 ಅಂತರದಲ್ಲಿ ಜಯ ಗಳಿಸಿ ಐದನೆ ಬಾರಿ ಫೈನಲ್ ತಲುಪಿದರು. ಅವರು 6ನೆ ಬಾರಿ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದ್ದಾರೆ.

ಬುಧವಾರ ನಡೆಯಲಿರುವ ಫೈನಲ್‌ನಲ್ಲಿ ಮೇರಿ ಕೋಮ್ ಅವರು ಮಂಗೋಲಿಯಾದ ನಂಡಿಂಟ್‌ಸೆಟ್ಸೆಗ್ ಮೈಗ್ಮಾರ್ಡುಲಂರನ್ನು ಎದುರಿಸಲಿದ್ದಾರೆ. ಒಂದು ವೇಳೆ ಮೇರಿ ಕೋಮ್ ಫೈನಲ್‌ನಲ್ಲಿ ಚಿನ್ನ ಜಯಿಸಿದರೆ 48 ಕೆ.ಜಿ. ವಿಭಾಗದಲ್ಲಿ ಈ ಸಾಧನೆ ಮಾಡಿದ ಭಾರತದ ಮೊದಲ ಮಹಿಳಾ ಬಾಕ್ಸರ್ ಎಂಬ ಖ್ಯಾತಿಗೆ ಪಾತ್ರರಾಗುತ್ತಾರೆ.

35ರ ಹರೆಯದ ರಾಜ್ಯಸಭಾ ಸದಸ್ಯೆ ಮೇರಿ ಕೋಮ್ ಅವರು 2012ರಲ್ಲಿ 51 ಕೆ.ಜಿ.ವಿಭಾಗದಲ್ಲಿ ಸ್ಪರ್ಧಿಸಿ ಒಲಿಂಪಿಕ್ಸ್‌ನಲ್ಲಿ ಕಂಚು ಜಯಿಸಿದ್ದರು. ಮೇರಿ ಕೋಮ್ ಐದು ವರ್ಷಗಳ ಬಳಿಕ 48 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದಾರೆ.

57 ಕೆ.ಜಿ. ವಿಭಾಗದ ಸೆಮಿಫೈನಲ್‌ನಲ್ಲಿ ಸೋನಿಯಾ ಲಾಥೆರ್ ಅವರು ಉಜ್ಬೇಕಿಸ್ತಾನ್‌ನ ಮಹಿಳಾ ಬಾಕ್ಸರ್ ಯಾಡ್ಗೊರೊಯ್ ಮಿರ್ಜಾವಾ ವಿರುದ್ಧ ಜಯ ಗಳಿಸಿ ಫೈನಲ್ ತಲುಪಿದ್ದಾರೆ. ಫೈನಲ್‌ನಲ್ಲಿ ಅವರು ಚೀನಾದ ಯಿನ್ ಜುನುವಾ ರನ್ನು ಎದುರಿಸಲಿದ್ದಾರೆ.

 54 ಕೆ.ಜಿ.ವಿಭಾಗದಲ್ಲಿ ಸಾಕ್ಷಿ ಸಿಂಗ್ ಮತ್ತು 60 ಕೆ.ಜಿ.ವಿಭಾಗದಲ್ಲಿ ಪ್ರಿಯಾಂಕಾ ಚೌಧರಿ ಸೆಮಿಫೈನಲ್‌ನಲ್ಲಿ ಸೋಲು ಅನುಭವಿಸಿದ್ಧಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News