ದಿಲ್ಲಿ ವಿರುದ್ಧ ಕರ್ನಾಟಕ 348/4

Update: 2017-11-09 18:02 GMT

ಆಲೂರು(ಕರ್ನಾಟಕ), ನ.9: ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್ ಮಾಯಾಂಕ್ ಅಗರವಾಲ್ ಅಜೇಯ ಶತಕ(169), ಮನೀಶ್ ಪಾಂಡೆ(74) ಹಾಗೂ ರವಿಕುಮಾರ್ ಸಮರ್ಥ್(58) ಅರ್ಧಶತಕಗಳ ಕೊಡುಗೆಯ ನೆರವಿನಿಂದ ಕರ್ನಾಟಕ ತಂಡ ದಿಲ್ಲಿ ವಿರುದ್ಧದ ರಣಜಿ ಟ್ರೋಫಿಯ ಮೊದಲ ದಿನ ಮೇಲುಗೈ ಸಾಧಿಸಿದೆ. ಇಲ್ಲಿನ ಕೆಎಸ್‌ಸಿಎ ಕ್ರಿಕೆಟ್ ಮೈದಾನದಲ್ಲಿ ಗುರುವಾರ ಆರಂಭವಾದ ರಣಜಿ ಟ್ರೋಫಿಯ ‘ಎ’ ಗುಂಪಿನ ಪಂದ್ಯದಲ್ಲಿ ಟಾಸ್ ಜಯಿಸಿದ ಕರ್ನಾಟಕದ ನಾಯಕ ವಿನಯಕುಮಾರ್ ಮೊದಲು ಬ್ಯಾಟಿಂಗ್ ಆಯ್ದುಕೊಂಡರು.

ಕರ್ನಾಟಕ 8ನೆ ಓವರ್‌ನಲ್ಲಿ ಕೆಎಲ್ ರಾಹುಲ್(9) ವಿಕೆಟ್‌ನ್ನು ಕಳೆದುಕೊಂಡು ಕಳಪೆ ಆರಂಭ ಪಡೆಯಿತು. ರಾಹುಲ್ ರಣಜಿಯಲ್ಲಿ ಕಳಪೆ ಫಾರ್ಮ್ ಮುಂದುವರಿಸಿದರು.

ಎರಡನೆ ವಿಕೆಟ್‌ಗೆ 112 ರನ್ ಜೊತೆಯಾಟ ನಡೆಸಿದ ಸಮರ್ಥ್(58, 107 ಎಸೆತ, 8 ಬೌಂಡರಿ) ಹಾಗೂ ಅಗರವಾಲ್(ಅಜೇಯ 169, 235 ಎಸೆತ, 23 ಬೌಂಡರಿ, 3 ಸಿಕ್ಸರ್)ತಂಡಕ್ಕೆ ಆಸರೆಯಾದರು.

ಸಮರ್ಥ್ 58 ರನ್ ಗಳಿಸಿ ಔಟಾದರು. ಕರುಣ್ ನಾಯರ್(15) ದೊಡ್ಡ ಮೊತ್ತ ಗಳಿಸಲು ವಿಫಲರಾದರು. ಅಗರವಾಲ್‌ಗೆ ಮನೀಷ್ ಪಾಂಡೆ ಜೊತೆಯಾದರು. ಈ ಇಬ್ಬರು 4ನೆ ವಿಕೆಟ್‌ಗೆ ಅಮೂಲ್ಯ 136 ರನ್ ಜೊತೆಯಾಟ ನಡೆಸಿ ತಂಡದ ಮೊತ್ತವನ್ನು 300ರ ಗಡಿ ದಾಟಿಸಿದರು. ದಿನದಾಟದಂತ್ಯಕ್ಕೆ ನವ್‌ದೀಪ್ ಸೈನಿಗೆ ವಿಕೆಟ್ ಒಪ್ಪಿಸಿದ ಪಾಂಡೆ 107 ಎಸೆತಗಳಲ್ಲಿ 9 ಬೌಂಡರಿ, 2 ಸಿಕ್ಸರ್‌ಗಳಿರುವ 74 ರನ್ ಗಳಿಸಿದರು.

ಮೊದಲ ದಿನದಾಟ ಕೊನೆಗೊಂಡಾಗ ಅಗರವಾಲ್ ಹಾಗೂ ಸ್ಟುವರ್ಟ್ ಬಿನ್ನಿ(ಅಜೇಯ 14)ಕ್ರೀಸ್ ಕಾಯ್ದುಕೊಂಡಿದ್ದಾರೆ. ಈ ಜೋಡಿ 5ನೆ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 31 ರನ್ ಸೇರಿಸಿದೆ. ದಿಲ್ಲಿಯ ಪರ ನವ್‌ದೀಪ್ ಸೈನಿ(1-49), ಕುಲ್ವಂತ್(1-65), ವಿಕಾಸ್ ಮಿಶ್ರಾ(1-87) ಹಾಗೂ ಮನನ್ ಶರ್ಮ(1-78) ತಲಾ ಒಂದು ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್

►ಕರ್ನಾಟಕ: 90 ಓವರ್‌ಗಳಲ್ಲಿ 384/4

(ಮಾಯಾಂಕ್ ಅಗರವಾಲ್ ಅಜೇಯ 169, ಮನೀಶ್ ಪಾಂಡೆ 74, ಆರ್.ಸಮರ್ಥ್ 58,ಕುಲ್ವಂತ್ 1-65,ವಿಕಾಸ್ ಮಿಶ್ರಾ 1-87)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News