ರಣಜಿ ಟ್ರೋಫಿ: ಕರ್ನಾಟಕ 649 ರನ್

Update: 2017-11-10 17:57 GMT

ಆಲೂರು(ಕರ್ನಾಟಕ), ನ.10: ಮಾಯಾಂಕ್ ಅಗರವಾಲ್(176), ಸ್ಟುವರ್ಟ್ ಬಿನ್ನಿ(118) ಶತಕ, ಶ್ರೇಯಸ್ ಗೋಪಾಲ್(92) ಅರ್ಧಶತಕದ ಕೊಡುಗೆಯ ಸಹಾಯದಿಂದ ಕರ್ನಾಟಕ ತಂಡ ದಿಲ್ಲಿ ವಿರುದ್ಧ ಮೊದಲ ಇನಿಂಗ್ಸ್‌ನಲ್ಲಿ 649 ರನ್ ಕಲೆ ಹಾಕಿದೆ.

ಇಲ್ಲಿನ ಕೆಎಸ್‌ಸಿಎ ಕ್ರಿಕೆಟ್ ಗ್ರೌಂಡ್‌ನಲ್ಲಿ ಎರಡನೆ ದಿನವಾದ ಶುಕ್ರವಾರ 4 ವಿಕೆಟ್‌ಗಳ ನಷ್ಟಕ್ಕೆ 348 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ಕರ್ನಾಟಕ ತಂಡ ದಿಲ್ಲಿ ಬೌಲರ್‌ಗಳನ್ನು ಚೆನ್ನಾಗಿ ದಂಡಿಸಿತು.

ಅಜೇಯ 169 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ಮಾಯಾಂಕ್ ಅಗರವಾಲ್ ನಿನ್ನೆಯ ಮೊತ್ತಕ್ಕೆ ಕೇವಲ 7 ರನ್ ಸೇರಿಸುವಷ್ಟರಲ್ಲಿ ರನೌಟಾದರು. ನಿತಿಶ್ ರಾಣಾ ಅವರ ನೇರ ಎಸೆತಕ್ಕೆ ರನೌಟಾದ ಅಗರವಾಲ್ 250 ಎಸೆತಗಳಲ್ಲಿ 24 ಬೌಂಡರಿ, 3 ಸಿಕ್ಸರ್‌ಗಳ ಸಹಿತ 176 ರನ್ ಗಳಿಸಿದರು.

ಶತಕವೀರ ಮಾಯಾಂಕ್ ಔಟಾದ ಬಳಿಕ ಜೊತೆಗೂಡಿದ ಆಲ್‌ರೌಂಡರ್ ಸ್ಟುವರ್ಟ್ ಬಿನ್ನಿ(118 ರನ್, 155 ಎಸೆತ, 18 ಬೌಂಡರಿ) ಹಾಗೂ ವಿಕೆಟ್‌ಕೀಪರ್ ಸಿಎಂ ಗೌತಮ್(46 ರನ್,81 ಎಸೆತ, 8 ಬೌಂಡರಿ)6ನೆ ವಿಕೆಟ್‌ಗೆ 111 ರನ್ ಜೊತೆಯಾಟ ನಡೆಸಿ ತಂಡವನ್ನು ಬೃಹತ್ ಮೊತ್ತದತ್ತ ಕೊಂಡೊಯ್ದರು.

 121.3ನೆ ಓವರ್‌ನಲ್ಲಿ ಮನನ್ ಶರ್ಮ ಈ ಜೋಡಿಯನ್ನು ಬೇರ್ಪಡಿಸಿದರು. ಗೌತಮ್ ಔಟಾದ ಬಳಿಕ ಬಾಲಂಗೋಚಿ ಶ್ರೇಯಸ್ ಗೋಪಾಲ್‌ರೊಂದಿಗೆ ಕೈಜೋಡಿಸಿದ ಬಿನ್ನಿ 7ನೆ ವಿಕೆಟ್‌ಗೆ 55 ರನ್ ಸೇರಿಸಿದರು. ಆಕರ್ಷಕ ಶತಕ ಸಿಡಿಸಿದ ಬಿನ್ನಿಗೆ ವಿಕಾಸ್ ಟೊಕಾಸ್ ಪೆವಿಲಿಯನ್ ಹಾದಿ ತೋರಿಸಿದರು.

ಬಿನ್ನಿ ಔಟಾದಾಗ ದೃತಿಗೆಡದ ಸ್ಪಿನ್ನರ್ ಎಸ್.ಗೋಪಾಲ್ ಕೆಳ ಕ್ರಮಾಂಕದಲ್ಲಿ ಭರ್ಜರಿ ಅರ್ಧಶತಕ(92, 165 ಎಸೆತ, 11 ಬೌಂಡರಿ, 1 ಸಿಕ್ಸರ್)ಸಿಡಿಸಿದ್ದಲ್ಲದೆ ಅಭಿಮನ್ಯು ಮಿಥುನ್(ಅಜೇಯ 35, 70 ಎಸೆತ, 4 ಬೌಂಡರಿ, 1 ಸಿಕ್ಸರ್) ಅವರೊಂದಿಗೆ ಕೊನೆಯ ವಿಕೆಟ್‌ನಲ್ಲಿ 101 ರನ್ ಜೊತೆಯಾಟ ನಡೆಸಿ ತಂಡ 172.2 ಓವರ್‌ಗಳಲ್ಲಿ 649 ರನ್ ಗಳಿಸಲು ನೆರವಾದರು.

ದಿಲ್ಲಿಯ ಪರ ಮನನ್ ಶರ್ಮ(3-151) ಹಾಗೂ ವಿಕಾಸ್ ಮಿಶ್ರಾ(3-152) ತಲಾ 3 ವಿಕೆಟ್‌ಗಳನ್ನು ಕಬಳಿಸಿದರು.

ಕರ್ನಾಟಕದ ಬೃಹತ್ ಮೊತ್ತಕ್ಕೆ ಉತ್ತರಿಸಹೊರಟಿರುವ ದಿಲ್ಲಿ ಎರಡನೆ ದಿನದಾಟದಂತ್ಯಕ್ಕೆ 5 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 20 ರನ್ ಗಳಿಸಿದೆ. ಉನ್ಮುಕ್ತ್ ಚಂದ್(ಅಜೇಯ 8) ಹಾಗೂ ಗೌತಮ್ ಗಂಭೀರ್(ಅಜೇಯ 12) ಕ್ರೀಸ್ ಕಾಯ್ದುಕೊಂಡಿದ್ದಾರೆ.

ಸಂಕ್ಷಿಪ್ತ ಸ್ಕೋರ್

ಕರ್ನಾಟಕ: 172.2 ಓವರ್‌ಗಳಲ್ಲಿ 649/10

(ಮಾಯಾಂಕ್ ಅಗರವಾಲ್ 176, ಸ್ಟುವರ್ಟ್ ಬಿನ್ನಿ 118, ಶ್ರೇಯಸ್ ಗೋಪಾಲ್ 92, ಮನೀಷ್ ಪಾಂಡೆ 74, ಸಮರ್ಥ್ 58,ವಿಕಾಸ್ 3-152, ಮನನ್ ಶರ್ಮ 3-151)

ದಿಲ್ಲಿ: 5 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 20/0

(ಉನ್ಮುಕ್ತ್ ಚಂದ್ ಅಜೇಯ 8, ಗೌತಮ್ ಗಂಭೀರ್ ಅಜೇಯ 12)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News