ಸಂದರ್ಶನ ನಡೆಯುತ್ತಿದ್ದಂತೆ ನಡುಗಿತು ಟಿವಿ ಚಾನೆಲ್ ಸ್ಟುಡಿಯೋ!

Update: 2017-11-13 17:03 GMT

ಬಾಗ್ದಾದ್, ನ.13: ಚಾನೆಲ್ ಗಳಲ್ಲಿ ಸುದ್ದಿ ಓದುತ್ತಿರುವಾಗ ಅಥವಾ ಲೈವ್ ಆಗಿ ಕ್ಯಾಮರಾದ ಮುಂದೆ ವರದಿ ಮಾಡುವಾಗ ಪ್ರಕೃತಿ ವಿಕೋಪಗಳು ಸಂಭವಿಸಿದರೆ ಹೇಗಾಗಬಹುದು. ಈ ಸಂದರ್ಭ ಕ್ಯಾಮರಾದ ಮುಂದೆ ವರದಿ ಮಾಡುತ್ತಿರುವವರು ಅಥವಾ ಸುದ್ದಿ ಓದುತ್ತಿರುವವರ ಪರಿಸ್ಥಿತಿ ಹೇಗಿರಬಹುದು ಎನ್ನುವುದಕ್ಕೆ ಉದಾಹರಣೆ ಎಂಬಂತಿರುವ ವೀಡಿಯೋವೊಂದು ಇದೀಗ ವೈರಲ್ ಆಗುತ್ತಿದೆ.

ಇರಾನ್ ಇರಾಕ್ ಗಡಿ ಪ್ರದೇಶದಲ್ಲಿ ಸಂಭವಿಸಿದ ಭಾರೀ ಭೂಕಂಪನದಿಂದ ಮೃತಪಟ್ಟವರ ಸಂಖ್ಯೆ ಈಗಾಗಲೇ 400ಕ್ಕೂ ಅಧಿಕವಾಗಿದೆ. ಈ ಭೂಕಂಪನ ಸಂಭವಿಸಿದ ಸಂದರ್ಭ ಚಾನೆಲ್ ಒಂದರಲ್ಲಿ ಸಂದರ್ಶನ ನಡೆಯುತ್ತಿತ್ತು. ಸುಲೈಮಾನಿಯಾದ ರಾಜಕಾರಣಿಯೊಬ್ಬರ ಸಂದರ್ಶನ ನಡೆಯುತ್ತಿದ್ದು, ಈ ಸಂದರ್ಭ ಆ್ಯಂಕರ್ ಹಾಗು ರಾಜಕಾರಣಿ ಇಬ್ಬರಿಗೂ ಕಂಪನದ ಅನುಭವವಾಗಿದೆ. ಭೂಕಂಪನದ ತೀವ್ರತೆಗೆ ಇಡೀ ಸ್ಟುಡಿಯೋ ಅಲುಗಾಡಿದ್ದು, ರಾಜಕಾರಣಿ ಹಾಗು ಪತ್ರಕರ್ತ ಇಬ್ಬರೂ ಹೆದರಿದ್ದಾರೆ.

“ಸುಲೈಮಾನಿಯಾದಲ್ಲಿ ಭೂಕಂಪನ ಸಂಭವಿಸಿದಂತೆ ನನಗೆ ಭಾಸವಾಗುತ್ತಿದೆ?” ಎಂದು ಪತ್ರಕರ್ತ ರಾಜಕಾರಣಿಯನ್ನು ಪ್ರಶ್ನಿಸಿದ್ದು, ಆದರೆ ಇದಕ್ಕೆ ಉತ್ತರ ನೀಡದ ಪರಿಸ್ಥಿತಿಯಲ್ಲಿದ್ದ ಅವರು ಅಲ್ಲಿಂದ ತೆರಳಿದ್ದಾರೆ. “ಇಲ್ಲೂ ಕೂಡ ಭೂಕಂಪನ ಸಂಭವಿಸುತ್ತಿದೆ. ನನಗೆ ಇದರ ಅನುಭವವಾಗುತ್ತಿದೆ” ಎಂದು ಆ್ಯಂಕರ್ ಹೇಳಿದ್ದಾರೆ.

ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಅಪಾಯದ ಸಂದರ್ಭದಲ್ಲಿ ವರದಿ ನಿಲ್ಲಿಸದ ಪತ್ರಕರ್ತನಿಗೆ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News