ಕಂದಹಾರ್‌ನಲ್ಲಿ ಭದ್ರತಾ ಠಾಣೆಗಳ ಮೇಲೆ ತಾಲಿಬಾನ್ ದಾಳಿ: 27 ಪೊಲೀಸರ ಸಾವು

Update: 2017-11-14 17:02 GMT

ಕಾಬೂಲ್, ನ. 14: ಅಫ್ಘಾನಿಸ್ತಾನದ ಕಂದಹಾರ್ ಪ್ರಾಂತದ ಮೂರು ಜಿಲ್ಲೆಗಳಲ್ಲಿರುವ ಸುಮಾರು 15 ಭದ್ರತಾ ಠಾಣೆಗಳ ಮೇಲೆ ಸೋಮವಾರ ರಾತ್ರಿ ದಾಳಿ ನಡೆಸಿದ ತಾಲಿಬಾನ್ ಭಯೋತ್ಪಾದಕರು, ಕನಿಷ್ಠ 27 ಪೊಲೀಸರನ್ನು ಹತ್ಯೆ ಮಾಡಿದ್ದಾರೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ಸೋಮವಾರ ರಾತ್ರಿ ಎರಡು ಜಿಲ್ಲೆಗಳಲ್ಲಿರುವ ವಿವಿಧ ಭದ್ರತಾ ಠಾಣೆಗಳ ಮೇಲೆ ಭಯೋತ್ಪಾದಕರು ದಾಳಿ ನಡೆಸಿದಾಗ 22 ಪೊಲೀಸರು ಮೃತಪಟ್ಟರು ಹಾಗೂ ಕನಿಷ್ಠ 15 ಮಂದಿ ಗಾಯಗೊಂಡರು ಎಂದು ಪ್ರಾಂತದ ಪೊಲೀಸ್ ವಕ್ತಾರ ಮತಿವುಲ್ಲಾ ಹಲಾಲ್ ತಿಳಿಸಿದರು.

ಮೇವಾಂಡ್ ಮತ್ತು ಝರಿ ಜಿಲ್ಲೆಗಳಲ್ಲಿ ದಾಳಿ ನಡೆದಿದೆ ಹಾಗೂ ಗುಂಡಿನ ಕಾಳಗ ಗಂಟೆಗಳ ಕಾಲ ನಡೆಯಿತು ಎಂದು ಅವರು ಹೇಳಿದರು.

ಗುಂಡಿನ ಕಾಳಗದಲ್ಲಿ 45 ತಾಲಿಬಾನಿಗಳೂ ಮೃತಪಟ್ಟಿದ್ದಾರೆ ಹಾಗೂ 35 ತಾಲಿಬಾನಿಗಳು ಗಾಯಗೊಂಡಿದ್ದಾರೆ ಎಂದರು.

 ಅದೇ ವೇಳೆ, ನವಾಯ್ ಜಿಲ್ಲೆಯ ಭದ್ರತಾ ಠಾಣೆಗಳ ಮೇಲೆ ನಡೆದ ದಾಳಿಯಲ್ಲಿ ಐವರು ಪೊಲೀಸರು ಹತರಾಗಿದ್ದಾರೆ ಎಂದು ಜಿಲ್ಲಾ ಗವರ್ನರ್ ಸಿರಾಜುದ್ದೀನ್ ಸರ್ಹಾದಿ ತಿಳಿಸಿದ್ದಾರೆ.

ಈ ನಡುವೆ, ಕಂದಹಾರ್‌ನಲ್ಲಿ ನಡೆದ ಎಲ್ಲ ದಾಳಿಗಳಲ್ಲಿ ಮೃತಪಟ್ಟ ಪೊಲೀಸರ ಒಟ್ಟು ಸಂಖ್ಯೆ 37 ಹಾಗೂ ಗಾಯಗೊಂಡವರ ಸಂಖ್ಯೆ 30 ಎಂದು ಈ ವಲಯದ ಸಂಸದ ಖಾಲಿದ್ ಪಶ್ತೂನ್ ತಿಳಿಸಿದರು.

ಇತ್ತೀಚಿನ ದಿನಗಳಲ್ಲಿ ತಾಲಿಬಾನ್ ಬಂಡುಕೋರರು ಭದ್ರತಾ ಪಡೆಗಳ ಮೇಲಿನ ದಾಳಿಯನ್ನು ಹೆಚ್ಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News