ಔಟ್ ಆಗುವ ಮೂಲಕ ಗವಾಸ್ಕರ್ ಬಳಗಕ್ಕೆ ಕೆ.ಎಲ್. ರಾಹುಲ್ ಸೇರ್ಪಡೆ!

Update: 2017-11-16 15:52 GMT

ಕೋಲ್ಕತಾ, ನ.16: ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್‌ನ ಮೊದಲ ಎಸೆತದಲ್ಲೇ ಔಟಾಗಿರುವ ಭಾರತದ ಆರಂಭಿಕ ಆಟಗಾರ ಕೆ.ಎಲ್. ರಾಹುಲ್ ಕಳಪೆ ದಾಖಲೆ ನಿರ್ಮಿಸಿದರು. ಇದರೊಂದಿಗೆ ಮಾಜಿ ನಾಯಕ ಸುನೀಲ್ ಗವಾಸ್ಕರ್ ಬಳಗಕ್ಕೆ ಸೇರ್ಪಡೆಯಾದರು.

 ಗುರುವಾರ ನಡೆದ ಪಂದ್ಯದಲ್ಲಿ ಶ್ರೀಲಂಕಾದ ವೇಗಿ ಸುರಂಗ ಲಕ್ಮಲ್ ಎಸೆದ ಇನಿಂಗ್ಸ್‌ನ ಮೊದಲ ಎಸೆತದಲ್ಲೇ ಕರ್ನಾಟಕದ ದಾಂಡಿಗ ರಾಹುಲ್ ವಿಕೆಟ್‌ಕೀಪರ್ ಡಿಕ್ವೆಲ್ಲಾಗೆ ಕ್ಯಾಚ್ ನೀಡಿ ಔಟಾದರು.

ರಾಹುಲ್ ಶೂನ್ಯಕ್ಕೆ ಔಟಾಗುವ ಮೂಲಕ ಅವರ ಸತತ 7 ಅರ್ಧಶತಕಗಳ ದಾಖಲೆ ಮುರಿದುಬಿತ್ತು.

ರಾಹುಲ್ ಈಡನ್‌ಗಾರ್ಡನ್ಸ್‌ನಲ್ಲಿ ಮೊದಲ ಎಸೆತದಲ್ಲೇ ಔಟಾದ ಭಾರತದ 3ನೆ ಆಟಗಾರ. ಸುಧೀರ್ ನಾಯಕ್, ಸುನೀಲ್ ಗವಾಸ್ಕರ್ ಈ ಹಿಂದೆ ಇದೇ ರೀತಿ ಔಟಾಗಿದ್ದರು. ರಾಹುಲ್ ಒಟ್ಟಾರೆ ಈ ಕಳಪೆ ಸಾಧನೆ ಮಾಡಿರುವ ಭಾರತದ 6ನೆ ದಾಂಡಿಗ. ನಾಯಕ್,ಗವಾಸ್ಕರ್‌ರಲ್ಲದೆ ಡಬ್ಲು.ವಿ. ರಾಮನ್, ಶಿವಸುಂದರ್ ದಾಸ್ ಹಾಗೂ ವಸಿಂ ಜಾಫರ್ ಟೆಸ್ಟ್ ಪಂದ್ಯದ ಮೊದಲ ಎಸೆತದಲ್ಲೇ ವಿಕೆಟ್ ಒಪ್ಪಿಸಿದ್ದರು. ರಾಹುಲ್ ವೃತ್ತಿಜೀವನದಲ್ಲಿ 2ನೆ ಬಾರಿ ಟೆಸ್ಟ್‌ನಲ್ಲಿ ಶೂನ್ಯಕ್ಕೆ ಔಟಾದರು. 2016ರಲ್ಲಿ ಇಂಗ್ಲೆಂಡ್ ವಿರುದ್ಧ ಸೊನ್ನೆ ಸುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News