50ನೇ ಅಂತಾರಾಷ್ಟ್ರೀಯ ಶತಕ ಸಿಡಿಸಿದ ವಿರಾಟ್ ಕೊಹ್ಲಿ

Update: 2017-11-20 14:47 GMT

ಕೋಲ್ಕತಾ, ನ.20: ವಿಶ್ವ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿಯ ಸ್ಥಾನಮಾನ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು ಸೋಮವಾರ ಶ್ರೀಲಂಕಾ ವಿರುದ್ಧ ಟೆಸ್ಟ್‌ನಲ್ಲಿ 50ನೇ ಅಂತಾರಾಷ್ಟ್ರೀಯ ಶತಕ ಸಿಡಿಸಿದ್ದಾರೆ.

ಆಕ್ರಮಣಕಾರಿ ಶೈಲಿಯ ಆಟಕ್ಕೆ ಹೆಸರುವಾಸಿಯಾಗಿರುವ ಕೊಹ್ಲಿ ವೇಗದ ಬೌಲರ್ ಸುರಂಗ ಲಕ್ಮಲ್ ಎಸೆತವನ್ನು ಸಿಕ್ಸರ್‌ಗೆ ಅಟ್ಟುವ ಮೂಲಕ 18ನೇ ಟೆಸ್ಟ್ ಶತಕ ಪೂರೈಸಿದರು. ಶತಕ ಪೂರೈಸಿದ ತಕ್ಷಣ ಇಂಗ್ಲೆಂಡ್‌ನ ಮಾಜಿ ದಾಂಡಿಗ ಕೆವಿನ್ ಪೀಟರ್ಸನ್‌ರಂತೆ ಮೊಣಕಾಲು ಬಾಗಿಸಿ ಸಂಭ್ರಮಾಚರಿಸಿಕೊಂಡರು.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಗರಿಷ್ಠ ಶತಕ ಗಳಿಸಿದವರ ಪಟ್ಟಿಯಲ್ಲಿ ಕೊಹ್ಲಿ 8ನೆ ಸ್ಥಾನದಲ್ಲಿದ್ದಾರೆ. ಬ್ರಿಯಾನ್ ಲಾರಾ(53), ಮಹೇಲ ಜಯವರ್ಧನೆ(54), ಹಾಶಿಮ್ ಅಮ್ಲ(54), ಜಾಕಸ್ ಕಾಲಿಸ್(62), ಕುಮಾರ ಸಂಗಕ್ಕರ(63), ರಿಕಿ ಪಾಂಟಿಂಗ್(71) ಹಾಗೂ ಐಕಾನ್ ಆಟಗಾರ ಸಚಿನ್ ತೆಂಡುಲ್ಕರ್(100) ಅವರಿದ್ದಾರೆ. ಸಚಿನ್ 100 ಅಂತಾರಾಷ್ಟ್ರೀಯ ಶತಕ ಸಿಡಿಸಿದ ವಿಶ್ವದ ಏಕೈಕ ಆಟಗಾರ.

ಟೆಸ್ಟ್ ಕ್ರಿಕೆಟ್‌ನಲ್ಲಿ 18ನೆ ಶತಕ ಬಾರಿಸಿರುವ ಕೊಹ್ಲಿ ಭಾರತದ ಮಾಜಿ ಆಟಗಾರರಾದ ದಿಲಿಪ್ ವೆಂಗ್‌ಸರ್ಕಾರ್(17)ರನ್ನು ಹಿಂದಿಕ್ಕಿದ್ದಾರೆ. ಮುಹಮ್ಮದ್ ಅಝರುದ್ದೀನ್(22), ವೀರೇಂದ್ರ ಸೆಹ್ವಾಗ್(23), ಸುನೀಲ್ ಗವಾಸ್ಕರ್(34), ರಾಹುಲ್ ದ್ರಾವಿಡ್(36) ಹಾಗೂ ತೆಂಡುಲ್ಕರ್(51) ಶತಕದ ದಾಖಲೆ ಹಿಂದಿಕ್ಕುವತ್ತ ಚಿತ್ತವಿರಿಸಿದ್ದಾರೆ.

ಅತ್ಯಂತ ವೇಗವಾಗಿ(348 ಇನಿಂಗ್ಸ್) ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 50ನೆ ಶತಕ ಸಿಡಿಸಿರುವ ಕೊಹ್ಲಿ ದಕ್ಷಿಣ ಆಫ್ರಿಕದ ಹಾಶಿಮ್ ಅಮ್ಲರೊಂದಿಗೆ ಮೊದಲ ಸ್ಥಾನ ಹಂಚಿಕೊಂಡರು. ಸಚಿನ್ ತೆಂಡುಲ್ಕರ್(376 ಇನಿಂಗ್ಸ್), ರಿಕಿ ಪಾಂಟಿಂಗ್(420) ಹಾಗೂ ಬ್ರಿಯಾನ್ ಲಾರಾ(465) ಆ ನಂತರದ ಸ್ಥಾನದಲ್ಲಿದ್ದಾರೆ.

ಭಾರತದ ನಾಯಕ ಕೊಹ್ಲಿ ಈ ಹಿಂದೆ ಈಡನ್‌ಗಾರ್ಡನ್ಸ್‌ನಲ್ಲಿ ಗರಿಷ್ಠ 45 ರನ್ ಗಳಿಸಿದ್ದರು. ಸೋಮವಾರ ನಡೆದ ಮೊದಲ ಟೆಸ್ಟ್‌ನಲ್ಲಿ ಕೊಹ್ಲಿ 72 ರನ್ ಗಳಿಸಿದ್ದಾಗ ಡಿಆರ್‌ಎಸ್ ನೆರವಿನಿಂದ ಎಲ್ಬಿಡಬ್ಲು ಬಲೆಗೆ ಬೀಳುವುದರಿಂದ ಬಚಾವಾಗಿದ್ದರು. ಕೊಹ್ಲಿ ಸಿಕ್ಸರ್ ಸಿಡಿಸಿ ಶತಕ ಪೂರೈಸಿದ ಬೆನ್ನಿಗೆ ಭಾರತದ 2ನೆ ಇನಿಂಗ್ಸ್‌ನ್ನು 8 ವಿಕೆಟ್‌ಗೆ 352 ರನ್‌ಗೆ ಡಿಕ್ಲೇರ್ ಮಾಡಿದರು. ಕೊಹ್ಲಿ ಕೋಲ್ಕತಾದ ಪಿಚ್‌ನಲ್ಲಿ ಇದೇ ಮೊದಲ ಬಾರಿ ಶತಕ ಪೂರೈಸಿದ ಸಾಧನೆ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News