×
Ad

ಇಡೀ ಅಮೆರಿಕದ ಮೇಲೆ ದಾಳಿ ಮಾಡಬಲ್ಲ ಕ್ಷಿಪಣಿ ಪರೀಕ್ಷೆ: ಉತ್ತರ ಕೊರಿಯ ಘೋಷಣೆ

Update: 2017-11-29 22:37 IST

ಸಿಯೋಲ್ (ದಕ್ಷಿಣ ಕೊರಿಯ), ನ. 29: ನೂತನ ಖಂಡಾಂತರ ಪ್ರಕ್ಷೇಪಕ ಕ್ಷಿಪಣಿಯೊಂದರ ಯಶಸ್ವಿ ಪರೀಕ್ಷೆಯ ಬಳಿಕ, ಪರಮಾಣು ಶಕ್ತ ದೇಶವಾಗುವ ತನ್ನ ಗುರಿಯನ್ನು ಸಾಧಿಸಿರುವುದಾಗಿ ಉತ್ತರ ಕೊರಿಯ ಬುಧವಾರ ಹೇಳಿದೆ. ನೂತನ ಕ್ಷಿಪಣಿಯು ಅಮೆರಿಕದ ಯಾವುದೇ ಭಾಗದ ಮೇಲೆ ದಾಳಿ ನಡೆಸುವ ಸಾಮರ್ಥ್ಯವನ್ನು ಹೊಂದಿದೆ ಎಂದಿದೆ.

‘‘ಹ್ವಸಾಂಗ್-15 ಕ್ಷಿಪಣಿಯ ಹಾರಾಟವನ್ನು ವೀಕ್ಷಿಸಿದ ಉತ್ತರ ಕೊರಿಯ ನಾಯಕ ಕಿಮ್ ಜಾಂಗ್ ಉನ್, ‘ಪರಮಾಣು ಶಕ್ತ ರಾಷ್ಟ್ರವಾಗಬೇಕೆನ್ನುವ ನಮ್ಮ ಐತಿಹಾಸಿಕ ಗುರಿಯನ್ನು ಅಂತಿಮವಾಗಿ ಸಾಧಿಸಿದ್ದೇವೆ’ ಎಂದು ಹೆಮ್ಮೆಯಿಂದ ಘೋಷಿಸಿದರು’’ ಎಂದು ಉತ್ತರ ಕೊರಿಯದ ಅಧಿಕೃತ ಸುದ್ದಿ ಸಂಸ್ಥೆ ಕೆಸಿಎನ್‌ಎ ಹೇಳಿದೆ.

ಇದು ಸೆಪ್ಟಂಬರ್ 15ರ ಬಳಿಕ ನಡೆದ ಮೊದಲ ಕ್ಷಿಪಣಿ ಪರೀಕ್ಷೆಯಾಗಿದೆ ಹಾಗೂ ಪರಮಾಣು ಬಿಕ್ಕಟ್ಟಿಗೆ ಪರಿಹಾರವೊಂದನ್ನು ಕಂಡುಹಿಡಿಯುವ ನಿಟ್ಟಿನಲ್ಲಿ ಸಂಧಾನದ ಬಾಗಿಲನ್ನು ತೆರೆದಿಡುವುದಕ್ಕಾಗಿ ನೂತನ ಕ್ಷಿಪಣಿ ಪರೀಕ್ಷೆಗಳನ್ನು ನಡೆಸುವುದನ್ನು ಉತ್ತರ ಕೊರಿಯ ತಡೆಹಿಡಿದಿರಬಹುದು ಎಂಬ ಊಹಾಪೋಹಗಳನ್ನು ಈ ಪರೀಕ್ಷೆ ಹುಸಿಗೊಳಿಸಿದೆ.

ಈ ಕ್ಷಿಪಣಿಯು ‘ಅಮೆರಿಕನ್ ಸಾಮ್ರಾಜ್ಯಶಾಹಿ’ಗಳ ಪರಮಾಣು ಬ್ಲ್ಯಾಕ್‌ಮೇಲ್ ನೀತಿ ಮತ್ತು ಪರಮಾಣು ಬೆದರಿಕೆಯ ವಿರುದ್ಧ ಉತ್ತರ ಕೊರಿಯವನ್ನು ರಕ್ಷಿಸುತ್ತದೆ ಎಂದು ಕೆಸಿಎನ್‌ಎ ಹೇಳಿದೆ.

ಅಮೆರಿಕವು ಇತ್ತೀಚೆಗೆ ಉತ್ತರ ಕೊರಿಯವನ್ನು ಭಯೋತ್ಪಾದನೆ ಪ್ರಾಯೋಜಕ ರಾಷ್ಟ್ರ ಎಂಬುದಾಗಿ ಘೋಷಿಸಿದೆ ಹಾಗೂ ಆ ದೇಶದ ಮೇಲೆ ಹೊಸದಾಗಿ ದಿಗ್ಬಂಧನಗಳನ್ನು ವಿಧಿಸಿದೆ.

4,500 ಕಿ.ಮೀ. ಎತ್ತರ, 13,000 ಕಿ.ಮೀ. ದೂರ!

ಕ್ಷಿಪಣಿಯು ಸುಮಾರು 1,000 ಕಿ.ಮೀ. ದೂರ ಹಾರಿ ಜಪಾನ್‌ನ ಸಾಗರ ಆರ್ಥಿಕ ವಲಯದಲ್ಲಿ ಪತನಗೊಂಡಿದೆ ಎಂದು ಅಮೆರಿಕದ ರಕ್ಷಣಾ ಇಲಾಖೆ ಪೆಂಟಗನ್ ಹೇಳಿದೆ.

ಆದರೆ, ಕ್ಷಿಪಣಿಯು ಸುಮಾರು 4,500 ಕಿ.ಮೀ. ಎತ್ತರಕ್ಕೆ (ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕಿಂತ 10 ಪಟ್ಟು ಎತ್ತರ) ಹಾರಿದೆ ಹಾಗೂ ಸಮುದ್ರಕ್ಕೆ ಅಪ್ಪಳಿಸುವ ಮೊದಲು 960 ಕಿ.ಮೀ. ಪ್ರಯಾಣಿಸಿದೆ ಎಂದು ದಕ್ಷಿಣ ಕೊರಿಯ ಸೇನೆ ತಿಳಿಸಿದೆ.

ನೂತನ ಕ್ಷಿಪಣಿಯು ಹಿಂದಿನ ಕ್ಷಿಪಣಿಗಳಿಗಿಂತ ಹೆಚ್ಚು ಎತ್ತರ ಮತ್ತು ಅವಧಿ ಹಾರಾಟ ನಡೆಸಿದೆ.

ಕ್ಷಿಪಣಿಯ ಪಥದ ಆಧಾರದಲ್ಲಿ ಹೇಳುವುದಾದರೆ, ಅದು 13,000 ಕಿ.ಮೀ. ದೂರವನ್ನು ಕ್ರಮಿಸಬಲ್ಲದು ಹಾಗೂ ಈ ವ್ಯಾಪ್ತಿಯಲ್ಲಿ ಅಮೆರಿಕದ ಪ್ರತಿಯೊಂದು ನಗರವೂ ಬರುತ್ತದೆ ಎಂದು ಪರಿಣತರೊಬ್ಬರು ಹೇಳಿದ್ದಾರೆ.

ಚೀನಾ ಆತಂಕ; ಮಾತುಕತೆಗೆ ಕರೆ

ಅತ್ಯಂತ ಶಕ್ತಿಶಾಲಿ ಕ್ಷಿಪಣಿಯೊಂದನ್ನು ಉತ್ತರ ಕೊರಿಯ ಉಡಾಯಿಸಿರುವುದರ ಬಗ್ಗೆ ಚೀನಾ ಕಳವಳ ವ್ಯಕ್ತಪಡಿಸಿದೆ ಹಾಗೂ ಉತ್ತರ ಕೊರಿಯ ಪರಮಾಣು ಬಿಕ್ಕಟ್ಟನ್ನು ಶಾಂತಿಯುತವಾಗಿ ಇತ್ಯರ್ಥಗೊಳಿಸಲು ಮಾತುಕತೆಗಳಿಗೆ ಕರೆ ನೀಡಿದೆ.

ನಾವು ನೋಡಿಕೊಳ್ಳುತ್ತೇವೆ: ಟ್ರಂಪ್

ಉತ್ತರ ಕೊರಿಯದ ನೂತನ ಕ್ಷಿಪಣಿ ಪರೀಕ್ಷೆಗೆ ಪ್ರತಿಕ್ರಿಯಿಸಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ‘‘ಈ ಪರಿಸ್ಥಿತಿಯನ್ನು ನಾವು ನಿಭಾಯಿಸುತ್ತೇವೆ’’ ಎಂದು ಹೇಳಿದ್ದಾರೆ.

ನೂತನ ಪರೀಕ್ಷೆಯ ಹಿನ್ನೆಲೆಯಲ್ಲಿ ನಿಮ್ಮ ತಂತ್ರಗಾರಿಕೆಯಲ್ಲಿ ಬದಲಾವಣೆಯಾಗಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ‘‘ಏನೂ ಬದಲಾಗಿಲ್ಲ. ನಾವು ಗಂಭೀರವಾಗಿ ಇದರಲ್ಲಿ ತೊಡಗಿಕೊಂಡಿದ್ದೇವೆ. ಆದರೆ, ಏನೂ ಬದಲಾಗಿಲ್ಲ’’ ಎಂದರು.

ಟ್ರಂಪ್, ಮೂನ್, ಅಬೆ ತುರ್ತು ಮಾತುಕತೆ

 ಉತ್ತರ ಕೊರಿಯವು ನೂತನ ಖಂಡಾಂತರ ಪ್ರಕ್ಷೇಪಕ ಕ್ಷಿಪಣಿಯನ್ನು ಉಡಾಯಿಸಿದ ಬಳಿಕ, ಬುಧವಾರ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದಕ್ಷಿಣ ಕೊರಿಯದ ಅಧ್ಯಕ್ಷ ಮೂನ್ ಜೇ-ಇನ್ ಮತ್ತು ಜಪಾನ್ ಪ್ರಧಾನಿ ಶಿಂರೊ ಅಬೆ ಜೊತೆ ತುರ್ತು ಮಾತುಕತೆಗಳನ್ನು ನಡೆಸಿದರು.

ಉತ್ತರ ಕೊರಿಯದ ಪ್ರಚೋದನೆಗೆ ಹೇಗೆ ಸಾಮೂಹಿಕವಾಗಿ ಪ್ರತಿಕ್ರಿಯಿಸುವುದು ಎಂಬ ಬಗ್ಗೆ ಅವರು ಚರ್ಚೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News