ಭಾರತಕ್ಕೆ 3 ಚಿನ್ನ, 4 ಬೆಳ್ಳಿ, 2 ಕಂಚು
ಢಾಕಾ, ನ.30: ಏಷ್ಯನ್ ಆರ್ಚರಿ ಚಾಂಪಿಯನ್‌ಶಿಪ್‌ನಲ್ಲಿ ಗುರುವಾರ ಭಾರತದ ಬಿಲ್ಲುಗಾರರು ಅತ್ಯುತ್ತಮ ಪ್ರದರ್ಶನ ನೀಡಿದ್ದು ಮೂರು ಚಿನ್ನ, ನಾಲ್ಕು ಬೆಳ್ಳಿ ಹಾಗೂ ಎರಡು ಕಂಚಿನ ಪದಕಗಳನ್ನು ಬಾಚಿಕೊಂಡಿದ್ದಾರೆ.
ಭಾರತದ ಇಬ್ಬರು ಬಾಲಕರು ಹಾಗೂ ಬಾಲಕಿಯರು 2018ರ ಯೂತ್ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿ ಕೊಂಡಿದ್ದಾರೆ.
ಕಂಚಿನ ಪದಕಕ್ಕಾಗಿ ನಡೆದ ಪ್ಲೇ-ಆಫ್ ಪಂದ್ಯದಲ್ಲಿ ಮಂಗೋಲಿಯದ ಎದುರಾಳಿ ಬಯಸ್‌ಗಾಲನ್‌ರನ್ನು 7-1 ರಿಂದ ಮಣಿಸಿರುವ 15ರ ಹರೆಯದ ಹರ್ಯಾಣದ ಬಾಲಕಿ ಹಿಮಾನಿ ಕುಮಾರಿ ಯೂತ್ ಒಲಿಂಪಿಕ್ಸ್‌ಗೆ ಸ್ಥಾನ ಗಿಟ್ಟಿಸಿಕೊಂಡರು.
ಇದಕ್ಕೆ ಮೊದಲು ನಡೆದ ಬಾಲಕರ ರಿಕರ್ವ್ ಫೈನಲ್‌ನಲ್ಲಿ ಹರ್ಯಾಣದ 14ರ ಹರೆಯದ ಆಕಾಶ್ ಆಂಧ್ರಪ್ರದೇಶದ ಧೀರಜ್‌ರನ್ನು 6-4 ಅಂತರದಿಂದ ಸೋಲಿಸುವ ಮೂಲಕ ಅರ್ಜೆಂಟೀನದಲ್ಲಿ ನಡೆಯಲಿರುವ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದರು.
ರಿಕರ್ವ್ ಹಿರಿಯ ಪುರುಷರ ವಿಭಾಗದ ಟೀಮ್ ಸ್ಪರ್ಧೆಯಲ್ಲಿ ಭಾರತದ ಜಯಂತ್ ತಾಲೂಕ್ದಾರ್, ಅತನು ದಾಸ್ ಹಾಗೂ ಯಶ್‌ದೇವ್ ಕೊರಿಯಾದ ಎದುರಾಳಿ ವಿರುದ್ಧ 1-5 ರಿಂದ ಸೋಲುವುದರೊಂದಿಗೆ ಬೆಳ್ಳಿಗೆ ತೃಪ್ತಿಪಟ್ಟರು.
ಭಾರತ ತಂಡ ಕಾಂಪೌಂಡ್ ವಿಭಾಗದಲ್ಲಿ ಎರಡು ಚಿನ್ನದ ಪದಕ ಜಯಿಸಿದೆ.
ಅಭಿಷೇಕ್ ವರ್ಮ ಕೊರಿಯಾದ ಪ್ರತಿಸ್ಪರ್ಧಿ ಕಿಮ್ ಜಾಂಗ್‌ಹೊರನ್ನು ಮಣಿಸುವ ಮೂಲಕ ಚಿನ್ನ ಜಯಿಸಿದರು. ‘‘ನನಗೆ ಉತ್ತಮ ಪ್ರದರ್ಶನ ನೀಡಿದ ತೃಪ್ತಿಯಿದೆ. ಚಿನ್ನದ ಪದಕ ಜಯಿಸಲು ಪ್ರತಿಯೊಬ್ಬರು ತಯಾರಿ ನಡೆಸಿದ್ದಾರೆ. 2018ರಲ್ಲಿ ಜಕಾರ್ತದಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್‌ಗೆ ಈಗಾಗಲೆೇ ತಯಾರಿ ಆರಂಭಿಸಿದ್ದೇನೆೆ’’ ಎಂದು 2014ರಲ್ಲಿ ಇಂಚೋನ್‌ನಲ್ಲಿ ನಡೆದಿದ್ದ ಏಷ್ಯನ್ ಗೇಮ್ಸ್‌ನಲ್ಲಿ ಎರಡನೇ ಸ್ಥಾನ ಪಡೆದಿದ್ದ ಅಭಿಷೇಕ್ ವರ್ಮ ಹೇಳಿದ್ದಾರೆ.
ಜ್ಯೋತಿ ಸುರೇಖಾ, ತ್ರಿಷಾ ದೇಬ್ ಹಾಗೂ ಪರ್ವೀನ್ ಅವರನ್ನೊಳಗೊಂಡ ಭಾರತದ ಮಹಿಳಾ ಕಾಂಪೌಂಡ್ ತಂಡ ಸೋ ಚಾವೊನ್, ಚೊಯ್ ಬೊಮಿನ್ ಹಾಗೂ ಸಾಂಗ್ ಯುನ್ ಸೂ ಅವರನ್ನು 230-227 ಅಂತರದಿಂದ ಸೋಲಿಸುವುದರೊಂದಿಗೆ ಚಿನ್ನದ ಪದಕ ಜಯಿಸಿದೆ.
ವೈಯಕ್ತಿಕ ವಿಭಾಗದಲ್ಲಿ ಚಿನ್ನ ಜಯಿಸಿದ್ದ ಅಭಿಷೇಕ್ ವರ್ಮ ಕಾಂಪೌಂಡ್ ಟೀಮ್ ವಿಭಾಗದಲ್ಲಿ ಬೆಳ್ಳಿಗೆ ತೃಪ್ತಿಪಟ್ಟರು. ಅಭಿಷೇಕ್, ಗುರ್ವಿಂದರ್ ಸಿಂಗ್ ಹಾಗೂ ರಜತ್ ಚೌಹಾಣ್ ಅವರನ್ನೊಳಗೊಂಡ ಭಾರತ ತಂಡ ಕೊರಿಯಾದ ಜಾಂಗ್‌ಹೊ, ಚೊಯ್ ಯಂಘೀ ಹಾಗೂ ಕಿಮ್ ಟಾಯೂನ್ ವಿರುದ್ಧ 232-234 ಅಂತರದಿಂದ ಶರಣಾಯಿತು.
ಭಾರತ ಕಾಂಪೌಂಡ್ ವಿಭಾಗದ ಮಿಶ್ರ ಟೀಮ್‌ನಲ್ಲಿ ಕೊರಿಯಾ ವಿರುದ್ಧ ಸೋಲುವುದರೊಂದಿಗೆ ಮತ್ತೊಂದು ಬೆಳ್ಳಿ ಜಯಿಸಿತು. ವೈಯಕ್ತಿಕ ವಿಭಾಗದಲ್ಲಿ ಜ್ಯೋತಿ ಕಂಚು ಗೆದ್ದುಕೊಂಡು ಭಾರತದ ಪದಕದ ಸಂಖ್ಯೆ ಏರಿಸಿದರು.