×
Ad

3ನೇ ಟೆಸ್ಟ್ ಗೆದ್ದರೆ ಕೊಹ್ಲಿ ಪಡೆಯಿಂದ 9ನೇ ಸರಣಿ ಗೆಲುವು ದಾಖಲೆ

Update: 2017-11-30 23:27 IST

ಹೊಸದಿಲ್ಲಿ, ನ. 30: ಶ್ರೀಲಂಕಾ ವಿರುದ್ಧ ಡಿ.2ರಂದು ದಿಲ್ಲಿಯ ಫಿರೋಝ್ ಶಾ ಕೋಟ್ಲಾ ಕ್ರೀಡಾಂಗಣದಲ್ಲಿ ಆರಂಭವಾಗಲಿರುವ ಮೂರನೇ ಕ್ರಿಕೆಟ್ ಟೆಸ್ಟ್‌ನಲ್ಲಿ ಭಾರತ ಜಯ ಗಳಿಸಿದರೆ ಸತತ 9 ಟೆಸ್ಟ್ ಸರಣಿಗಳಲ್ಲಿ ಜಯ ಗಳಿಸಿದ ದಾಖಲೆಯನ್ನು ನಿರ್ಮಿಸಲಿದೆ.

 ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಸರಣಿಯಲ್ಲಿ ಮೊದಲ ಪಂದ್ಯ ಡ್ರಾದಲ್ಲಿ ಕೊನೆಗೊಂಡಿತ್ತು. ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ಭರ್ಜರಿ ಗೆಲುವಿನೊಂದಿಗೆ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಶ್ರೀಲಂಕಾ ತಂಡಕ್ಕೆ ಈ ತನಕ ಭಾರತದ ನೆಲದಲ್ಲಿ ಒಂದೂ ಟೆಸ್ಟ್ ಪಂದ್ಯ ಗೆಲ್ಲಲು ಸಾಧ್ಯವಾಗಿಲ್ಲ. ಯುಎಇಯಲ್ಲಿ ಪಾಕಿಸ್ತಾನ ವಿರುದ್ಧ 2-0 ಅಂತರದಲ್ಲಿ ಟೆಸ್ಟ್ ಜಯಿಸಿದ್ದ ಶ್ರೀಲಂಕಾ ತಂಡಕ್ಕೆ ಭಾರತ ವಿರುದ್ಧ ಟೆಸ್ಟ್ ಗೆಲುವಿಗೆ ಇನ್ನೊಂದು ಅವಕಾಶ ಇದೆ.

  ಕೋಲ್ಕತಾದ ಈಡನ್‌ಗಾರ್ಡನ್ಸ್‌ನಲ್ಲಿ ಮಳೆಬಾಧಿತ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಶ್ರೀಲಂಕಾ ತಂಡ ಭಾರತವನ್ನು 172 ರನ್‌ಗಳಿಗೆ ನಿಯಂತ್ರಿಸಿತ್ತು. ಶ್ರೀಲಂಕಾ ಮೊದಲ ಇನಿಂಗ್ಸ್‌ನಲ್ಲಿ 294 ರನ್ ಗಳಿಸಿ 122 ರನ್‌ಗಳ ಮೇಲುಗೈ ಸಾಧಿಸಿತ್ತು. ಭಾರತ ಎರಡನೇ ಇನಿಂಗ್ಸ್‌ನಲ್ಲಿ 8 ವಿಕೆಟ್ ನಷ್ಟದಲ್ಲಿ 352 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು.. ಇದರೊಂದಿಗೆ ಗೆಲುವಿಗೆ 231 ರನ್‌ಗಳ ಸವಾಲನ್ನು ಪಡೆದ ಶ್ರೀಲಂಕಾ 75 ರನ್ ಗಳಿಸುವಷ್ಟರಲ್ಲಿ ಏಳು ವಿಕೆಟ್ ಕಳೆದುಕೊಂಡಿತು. ಗೆಲುವಿಗೆ ಸುಲಭದ ಸವಾಲು ಪಡೆದರೂ ಭಾರತದ ಬೌಲರ್‌ಗಳ ದಾಳಿಯನ್ನು ಎದುರಿಸಲಾಗದೆ ಸೋಲಿನ ದವಡೆಗೆ ಸಿಲುಕಿತ್ತು. ಪಂದ್ಯ ಡ್ರಾನಲ್ಲಿ ಕೊನೆಗೊಂಡ ಕಾರಣ ಶ್ರೀಲಂಕಾ ಮೊದಲ ಟೆಸ್ಟ್ ನಲ್ಲಿ ಸೋಲಿನಿಂದ ಪಾರಾಗಿತ್ತು.

ಶ್ರೀಲಂಕಾ ಎರಡನೆ ಟೆಸ್ಟ್‌ನಲ್ಲಿ ಇನಿಂಗ್ಸ್ ಮತ್ತು 239 ರನ್‌ಗಳ ಸೋಲು ಅನುಭವಿಸಿತು.ಇದೀಗ ಮೂರನೇ ಟೆಸ್ಟ್‌ನಲ್ಲಿ ಸರಣಿ ಸಮಬಲಗೊಳಿಸಲು ಶ್ರೀಲಂಕಾ ಜಯಗಳಿಸಬೇಕಾಗಿದೆ. ಒಂದು ವೇಳೆ ಸೋಲು ಅನುಭವಿಸಿದರೆ 0-2 ಅಂತರದಲ್ಲಿ ಸರಣಿಯನ್ನು ಕಳೆದುಕೊಳ್ಳಲಿದೆ. ಡ್ರಾಗೊಂಡರೂ ಸರಣಿ ಗೆಲುವು ಭಾರತದ ಪಾಲಾಗುತ್ತದೆ.

ಕಳೆದ ಪಂದ್ಯದಲ್ಲಿ ಭಾರತದ ನಾಲ್ವರು ದಾಂಡಿಗರು ಶತಕ ಸಿಡಿಸಿ ತಂಡದ ಗೆಲುವಿಗೆ ನೆರವಾಗಿದ್ದರು, ಅದರಲ್ಲೂ ವಿರಾಟ್ ಕೊಹ್ಲಿ ದ್ವಿಶತಕ ಸಿಡಿಸಿದ್ದರು.

ಭಾರತ ಮೊದಲ ಇನಿಂಗ್ಸ್‌ನಲ್ಲಿ ನಾಯಕ ವಿರಾಟ್ ಕೊಹ್ಲಿ ದ್ವಿಶತಕ (213), ಚೇತೇಶ್ವರ ಪೂಜಾರ (143), ಮುರಳಿ ವಿಜಯ್ (128) ಮತ್ತು ರೋಹಿತ್ ಶರ್ಮಾ (ಔಟಾಗದೆ 102) ಶತಕದ ನೆರವಿನಲ್ಲಿ 176.1 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 610 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು.

 ಶ್ರೀಲಂಕಾ ಮೊದಲ ಇನಿಂಗ್ಸ್‌ನಲ್ಲಿ 205 ರನ್‌ಗಳಿಗೆ ಆಲೌಟಾಗಿತ್ತು. ಕರುಣರತ್ನೆ (51) ಮತ್ತು ನಾಯಕ ದಿನೇಶ್ ಚಾಂಡಿಮಲ್(57) ಅರ್ಧಶತಕಗಳನ್ನು ದಾಖಲಿಸಿದ್ದರು. ಎರಡನೇ ಇನಿಂಗ್ಸ್‌ನಲ್ಲಿ ಶ್ರೀಲಂಕಾ 166 ರನ್‌ಗಳಿಗೆ ಆಲೌಟಾಗಿತ್ತು. ಚಾಂಡಿಮಾಲ್ (61) ಮಾತ್ರ ಅರ್ಧಶತಕದ ಕೊಡುಗೆ ನೀಡಿದ್ದರು. ಭಾರತ ತಂಡ ಶ್ರೀಲಂಕಾದಲ್ಲಿ ಶ್ರೀಲಂಕಾ ವಿರುದ್ಧ 9-0 ಅಂತರದಲ್ಲಿ ಮೂರು ಸರಣಿಗಳನ್ನು ವಶಪಡಿಸಿಕೊಂಡಿತ್ತು. ಇದೀಗ ತವರಿನಲ್ಲಿ 2-0 ಅಂತರದಲ್ಲಿ ಟೆಸ್ಟ್ ಸರಣಿ ಗೆಲುವಿನ ಕನಸು ಕಾಣುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News