ಲಂಕೆಗೆ ಕೊಹ್ಲಿ ಇಲ್ಲದ ಟೀಮ್ ಇಂಡಿಯಾ ಸವಾಲು

Update: 2017-12-09 18:12 GMT

ಧರ್ಮಶಾಲಾ, ಡಿ.9: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಉಳಿದಿರುವ ಪಂದ್ಯಗಳಲ್ಲಿ ದಾಖಲೆಗಳನ್ನು ಮುರಿಯುವುದನ್ನು ಈ ವರ್ಷ ನಿರೀಕ್ಷಿಸಲು ಸಾಧ್ಯವಿಲ್ಲ. ಹಂಗಾಮಿ ನಾಯಕ ರೋಹಿತ್ ಶರ್ಮ ಅವರು 3 ಪಂದ್ಯಗಳ ಸರಣಿಯಲ್ಲಿ 3-0 ಕ್ಲೀನ್ ಸ್ವೀಪ್ ಸಾಧಿಸುವ ಯೋಜನೆಯಲ್ಲಿದ್ದಾರೆ.

ದಿಲ್ಲಿಯಲ್ಲಿ ಕೊನೆಯ ಟೆಸ್ಟ್‌ನಲ್ಲಿ ವಾಯು ಮಾಲಿನ್ಯದ ಸಮಸ್ಯೆಯಿಂದಾಗಿ ತೊಂದರೆ ಅನುಭವಿಸಿದ್ದ ಲಂಕಾ ತಂಡಕ್ಕೆ ಇದೀಗ ಧರ್ಮಶಾಲಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಅಂತಹ ಸಮಸ್ಯೆ ಇಲ್ಲ. ಲಂಕೆಗೆ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಈ ವರ್ಷ ಕೊಹ್ಲಿ ಭಯ ಇಲ್ಲ. ಕೊಹ್ಲಿ ತಂಡದಲ್ಲಿದ ಕಾರಣದಿಂದಾಗಿ ಟೀಮ್ ಇಂಡಿಯಾ ಬ್ಯಾಟಿಂಗ್‌ನಲ್ಲಿ ದುರ್ಬಲವಾಗಿರುವಂತೆ ಕಂಡು ಬಂದರೂ, ಹಂಗಾಮಿ ನಾಯಕ ರೋಹಿತ್ ಶರ್ಮ ಮತ್ತು ಕೋಚ್ ರವಿಶಾಸ್ತ್ರಿ ತಂಡಕ್ಕೆ ಕೊಹ್ಲಿ ಅನುಪಸ್ಥಿತಿ ಎದ್ದು ಕಾಣದಂತೆ ತಂಡವನ್ನು ಅಣಿಗೊಳಿಸಲು ಪ್ರಯತ್ನ ನಡೆಸಿದ್ದಾರೆ.

ಪಂದ್ಯ ಬೆಳಗ್ಗೆ 11:30ಕ್ಕೆ ಆರಂಭವಾಗಲಿದ್ದು, ಟಾಸ್ ಪಂದ್ಯದ ಫಲಿತಾಂಶದಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ.

 ಸತತ ಐದು ದ್ವಿಪಕ್ಷೀಯ ಏಕದಿನ ಸರಣಿಗಳಲ್ಲಿ ಜಯ ಗಳಿಸಿದ್ದ ಭಾರತ, ಚಾಂಪಿಯನ್ಸ್ ಟ್ರೋಫಿಯಲ್ಲಿ ಫೈನಲ್ ತಲುಪಿತ್ತು. ಕಳೆದ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾ ಶ್ರೀಲಂಕಾ ವಿರುದ್ಧ 5-0 ಅಂತರದಲ್ಲಿ ಕ್ಲೀನ್ ಸ್ವೀಪ್ ಸಾಧಿಸಿತ್ತು.

ಕೊಹ್ಲಿ ಅನುಪಸ್ಥಿತಿಯಲ್ಲಿ ರೋಹಿತ್ ಶರ್ಮ, ದಿನೇಶ್ ಕಾರ್ತಿಕ್, ಎಂ.ಎಸ್. ಧೋನಿ ಹೆಗಲ ಮೇಲೆ ಜವಾಬ್ದಾರಿ ಹೆಚ್ಚಿದೆ. ರೋಹಿತ್ ಶರ್ಮ ಮತ್ತು ಶಿಖರ್ ಧವನ್ ಇನಿಂಗ್ಸ್ ಆರಂಭಿಸುವುದನ್ನು ನಿರೀಕ್ಷಿಸಲಾಗಿದೆ.ಕೊಹ್ಲಿಗೆ ವಿಶ್ರಾಂತಿ ನೀಡಿರುವ ಹಿನ್ನೆಲೆಯಲ್ಲಿ ಅವರ ನಂ.3 ಕ್ರಮಾಂಕದಲ್ಲಿ ರಹಾನೆ ಅವಕಾಶ ಪಡೆಯಲಿದ್ದಾರೆ.

ಧವನ್ ಜ್ವರದಿಂದ ಬಳಲುತ್ತಿದ್ದಾರೆ. ಒಂದು ವೇಳೆ ಪಂದ್ಯ ಆರಂಭಕ್ಕೂ ಮುನ್ನ ಚೇತರಿಸದೆ ಇದ್ದರೆ ರಹಾನೆ ಇನಿಂಗ್ಸ್ ಆರಂಭಿಸಲಿದ್ದಾರೆ.

ಲಂಕಾ ವಿರುದ್ಧ ರಹಾನೆ ಈ ವರ್ಷ ಒಂದು ಏಕದಿನ ಪಂದ್ಯದಲ್ಲಿ ಆಡಿದ್ದಾರೆ.ದಿನೇಶ್ ಕಾರ್ತಿಕ್ ಮತ್ತು ಎಂ.ಎಸ್ ಧೋನಿ 3 ಮತ್ತು ನಾಲ್ಕನೇ ಕ್ರಮಾಂಕದಲ್ಲಿ ಕೇದಾರ್ ಜಾಧವ್ ನಂ.6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಲಿದ್ದಾರೆ.

 ಕಾರ್ತಿಕ್ ವೆಸ್ಟ್‌ಇಂಡೀಸ್ ವಿರುದ್ಧ ಪಡೆದಿದ್ದ ಎರಡು ಅವಕಾಶಗಳಲ್ಲಿ 1 ಅರ್ಧಶತಕ ಸಿಡಿಸಿದ್ದರು. ನ್ಯೂಝಿಲೆಂಡ್ ವಿರುದ್ಧ ಮೂರು ಪಂದ್ಯಗಳಲ್ಲಿ 37, ಔಟಾಗದೆ 64 ಮತ್ತು ಔಟಾಗದೆ 4 ರನ್ ಗಳಿಸಿದ್ದರು.

ಮಹೇಂದ್ರ ಸಿಂಗ್ ಧೋನಿ ಅವರು ನ್ಯೂಝಿಲೆಂಡ್ ವಿರುದ್ಧದ ಟ್ವೆಂಟಿ-20 ಪಂದ್ಯದಲ್ಲಿ ನಿಧಾನಗತಿಯ ಬ್ಯಾಟಿಂಗ್ ಕಾರಣಕ್ಕಾಗಿ ಟೀಕೆ ಎದುರಿಸಿದ್ದರು. ಟೀಮ್ ಇಂಡಿಯಾ 40 ರನ್‌ಗಳ ಸೋಲು ಅನುಭವಿಸಿತ್ತು. ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಯುಜುವೇಂದ್ರ ಚಹಾಲ್ ಮತ್ತು ಕುಲದೀಪ್ ಯಾದವ್ ಅಂತಿಮ ಹನ್ನೊಂದರಲ್ಲಿರುತ್ತಾರೆ. ಅಕ್ಷರ್ ಪಟೇಲ್ ಎದುರಾಳಿ ತಂಡದ ರನ್‌ಗೆ ಕಡಿವಾಣ ಹಾಕುವಲ್ಲಿ ಎಚ್ಚರ ವಹಿಸಬೇಕಾಗಿದೆ.

ಜಸ್‌ಪ್ರೀತ್ ಬುಮ್ರಾ ಮತ್ತು ಭುವನೇಶ್ವರ ಕುಮಾರ್ ವೇಗದ ದಾಳಿಯ ವಿಭಾಗವನ್ನು ಮುನ್ನಡೆಸುವರು. ಆದರೆ ಮೂರನೇ ವೇಗಿಯಾಗಿ ಸಿದ್ಧಾರ್ಥ ಕೌಲ್‌ಗೆ ಅವಕಾಶ ನೀಡುವುದನ್ನು ಹಂಗಾಮಿ ನಾಯಕ ರೋಹಿತ್ ಶರ್ಮ ನಿರ್ಧರಿಸಲಿದ್ದಾರೆ.

 ಶ್ರೀಲಂಕಾ ತಂಡ ಕಳೆದ ಅಕ್ಟೋಬರ್‌ನಲ್ಲಿ ಪಾಕಿಸ್ತಾನ ವಿರುದ್ಧ 0-5 ಅಂತರದಲ್ಲಿ ವೈಟ್‌ವಾಶ್ ಅನುಭವಿಸಿತ್ತು. ತಿಸ್ಸರಾ ಪೆರೇರಾ ತಂಡವನ್ನು ನಾಯಕರಾಗಿ ಮುನ್ನಡೆಸಲಿದ್ದಾರೆ.

ಕುಶಾಲ್ ಪರೇರಾ ಮತ್ತು ಅಸೇಲಾ ಗುಣರತ್ನೆ ಗಾಯದಿಂದ ಚೇತರಿಸಿಕೊಂಡು ತಂಡದ ಸೇವೆ ಮರಳಿದ್ದಾರೆ. ದಿಲ್ಲಿಯಲ್ಲಿ ಅಂತಿಮ ಟೆಸ್ಟ್‌ನಲ್ಲಿ ಶತಕ ಸಿಡಿಸಿ ತಂಡವನ್ನು ಸೋಲಿನ ದವಡೆಯಿಂದ ಪಾರು ಮಾಡಿದ್ದ ಧನಂಜಯ್ ಡಿ ಸಿಲ್ವ ಶ್ರೀಲಂಕಾ ತಂಡದಲ್ಲಿದ್ದಾರೆ.

►ಭಾರತ

ರೋಹಿತ್ ಶರ್ಮ(ನಾಯಕ), ಶಿಖರ್ ಧವನ್, ಅಜಿಂಕ್ಯ ರಹಾನೆ, ಶ್ರೇಯಸ್ ಅಯ್ಯರ್, ಮನೀಷ್ ಪಾಂಡೆ, ವಾಶಿಂಗ್ಟನ್ ಸುಂದರ್, ದಿನೇಶ್ ಕಾರ್ತಿಕ್, ಎಂ.ಎಸ್. ಧೋನಿ(ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಯುಜುವೇಂದ್ರ ಚಹಾಲ್, ಜಸ್‌ಪ್ರೀತ್ ಬುಮ್ರಾ, ಭುವನೇಶ್ವರ ಕುಮಾರ್, ಸಿದ್ದಾರ್ಥ ಕೌಲ್.

►ಶ್ರೀಲಂಕಾ 

ತಿಸ್ಸರಾ ಪೆರೆರಾ(ನಾಯಕ), ಉಪುಲ್ ತರಂಗ, ಧನುಷ್ಕ ಗುಣತಿಲಕ, ಲಹಿರು ತಿರಿಮನ್ನೆ, ಆ್ಯಂಜೆಲೊ ಮ್ಯಾಥ್ಯೂಸ್, ಅಸೆಲಾ ಗುಣರತ್ನೆ, ನಿರೋಶನ್ ಡಿಕ್ವೆಲ್ಲಾ(ವಿಕೆಟ್ ಕೀಪರ್), ಚತುರಂಗ ಡಿ ಸಿಲ್ವ, ಅಖಿಲಾ ಧನಂಜಯ, ಸುರಂಗ ಲಕ್ಮಲ್, ನುವಾನ್ ಪ್ರದೀಪ್, ಸದೀರ ಸಮರವಿಕ್ರಮ, ಧನಂಜಯ ಡಿ ಸಿಲ್ವ, ದುಶ್ಮಂತ ಚಮೀರಾ, ಸಚಿತ ಪಥಿರಣ, ಕುಸಾಲ್ ಪೆರೇರಾ.

ಅವಕಾಶ ವಂಚಿತರಿಗೆ ಮಿಂಚಲು ಅವಕಾಶ

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಕೆಲವು ಆಟಗಾರರು ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ಹೊರಗುಳಿದಿರುವ ಹಿನ್ನೆಲೆಯಲ್ಲಿ ಅವಕಾಶಕ್ಕಾಗಿ ಕಾಯುತ್ತಿರುವ ಕೆಲವು ಹೊಸಮುಖಗಳಿಗೆ ಅವಕಾಶ ದೊರೆಯುವುದನ್ನು ನಿರೀಕ್ಷಿಸಲಾಗಿದೆ.

ಅಜಿಂಕ್ಯ ರಹಾನೆ, ಮನೀಷ್ ಪಾಂಡೆ , ದಿನೇಶ್ ಕಾರ್ತಿಕ್, ಯುವ ಆಟಗಾರರಾದ ಶ್ರೇಯಸ್ ಅಯ್ಯರ್ ಮತ್ತು ಸಿದ್ದಾರ್ಥ ಕೌಲ್ ಅವಕಾಶದ ನಿರೀಕ್ಷೆಯಲ್ಲಿದ್ದಾರೆ.

 ಅಜಿಂಕ್ಯ ರಹಾನೆ ಟೆಸ್ಟ್‌ನಲ್ಲಿ ವೈಫಲ್ಯ ಅನುಭವಿಸಿದ್ದರೂ, ಏಕದಿನ ಕ್ರಿಕೆಟ್‌ನಲ್ಲಿ ಮಿಂಚುವ ಭರವಸೆ ಮೂಡಿಸಿದ್ದಾರೆ. ಅವರು ನಂ.3 ಸರದಿಯಲ್ಲಿ ಬ್ಯಾಟಿಂಗ್ ಅವಕಾಶ ಪಡೆಯುವ ಸಾಧ್ಯತೆ ಇದೆ.

ರಹಾನೆ ಏಕದಿನ ಕ್ರಿಕೆಟ್‌ನಲ್ಲಿ ಉತ್ತಮ ಫಾರ್ಮ್‌ನಲ್ಲಿದ್ದಾರೆ. 4 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಸತತ ನಾಲ್ಕು ಅರ್ಧಶತಕಗಳನ್ನು ದಾಖಲಿಸಿದ್ದಾರೆ.

ರಹಾನೆ ಪ್ರಸ್ತುತ ವರ್ಷ 7 ಅರ್ಧಶತಕಗಳನ್ನು ದಾಖಲಿಸಿದ್ದಾರೆ. ಅವರು ಏಕದಿನ ಕ್ರಿಕೆಟ್‌ನಲ್ಲಿ ಈ ವರೆಗೆ 3 ಶತಕ ಮತ್ತು 23 ಅರ್ಧಶತಕಗಳನ್ನು ದಾಖಲಿಸಿದ್ದಾರೆ.

ರಹಾನೆ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್(111) ದಾಖಲಿಸಿದ್ದರು.

ದಿನೇಶ್ ಕಾರ್ತಿಕ್ 76 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಅವರು 9 ಅರ್ಧಶತಕಗಳನ್ನು ದಾಖಲಿಸಿದ್ದಾರೆ. ಈ ತನಕ ಅವರಿಗೆ ಶತಕ ದಾಖಲಿಸಲು ಸಾಧ್ಯವಾಗಿಲ್ಲ.

ಮನೀಷ್ ಪಾಂಡೆ ಉತ್ತಮ ಫಾರ್ಮ್‌ನ್ನು ಮುಂದುವರಿಸುವ ಪ್ರಯತ್ನ ನಡೆಸಲಿದ್ದಾರೆ. ಪಾಂಡೆ ಅವರು 1 ಶತಕ ಮತ್ತು 2 ಅರ್ಧಶತಕಗಳನ್ನು ದಾಖಲಿಸಿದ್ದಾರೆ. 16 ಇನಿಂಗ್ಸ್‌ಗಳಳ್ಲಿ 6 ಬಾರಿ ಅಜೇಯರಾಗಿ ಉಳಿದಿದ್ದಾರೆ.

ಅಯ್ಯರ್ 3 ಟ್ವೆಂಟಿ-20 ಪಂದ್ಯಗಳಲ್ಲಿ ಆಡಿದ್ದಾರೆ. ಆದರೆ ಅವಕಾಶಗಳನ್ನು ಎರಡೂ ಕೈಗಳಲ್ಲೂ ಬಾಚಿಕೊಳ್ಳಲು ಸಾಧ್ಯವಾಗಿಲ್ಲ. 2 ಇನಿಂಗ್ಸ್‌ಗಳಲ್ಲಿ ಒಟ್ಟು 29 ರನ್ ಗಳಿಸಿದ್ದಾರೆ. ಗರಿಷ್ಠ ವೈಯಕ್ತಿಕ ಸ್ಕೋರ್ 23ರನ್.

►ಪಂದ್ಯದ ಸಮಯ

   ಬೆಳಗ್ಗೆ 11:30 ಗಂಟೆಗೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News