ವಿಶ್ವ ಸೂಪರ್ ಸರಣಿ ಫೈನಲ್ಸ್: ಬೆಳ್ಳಿಗೆ ತೃಪ್ತಿಪಟ್ಟ ಸಿಂಧು

Update: 2017-12-17 14:06 GMT

ದುಬೈ, ಡಿ.17: ಜಪಾನ್‌ನ ವಿಶ್ವದ ನಂ.2ನೇ ಆಟಗಾರ್ತಿ ಅಕಾನೆ ಯಮಗುಚಿ ವಿರುದ್ಧ ಶರಣಾಗಿರುವ ಭಾರತದ ಅಗ್ರ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ಬಿಡಬ್ಲುಎಫ್ ವಿಶ್ವ ಸೂಪರ್ ಸರಣಿ ಫೈನಲ್ಸ್‌ನಲ್ಲಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.

ರವಿವಾರ ಇಲ್ಲಿ ಒಂದು ಗಂಟೆ, 31 ನಿಮಿಷಗಳ ಕಾಲ ನಡೆದ ಮಹಿಳೆಯರ ಸಿಂಗಲ್ಸ್‌ನ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಸಿಂಧು ಅವರು ಯಮಗುಚಿ ವಿರುದ್ಧ 21-15, 12-21,19-21 ಗೇಮ್‌ಗಳ ಅಂತರದಿಂದ ಸೋತಿದ್ದಾರೆ.

 ಸಿಂಧು ಮೊದಲ ಗೇಮ್‌ನ್ನು 21-15 ಅಂತರದಿಂದ ಗೆದ್ದುಕೊಂಡು ಉತ್ತಮ ಆರಂಭ ಪಡೆದಿದ್ದರು. ಆದರೆ, ಉಳಿದೆರಡು ಗೇಮ್‌ಗಳಲ್ಲಿ ಸೋಲುವ ಮೂಲಕ ಪ್ರಶಸ್ತಿ ವಂಚಿತರಾದರು.

22ರ ಹರೆಯದ ಸಿಂಧು ಮೂರನೇ ಬಾರಿ ಪ್ರಮುಖ ಟೂರ್ನಮೆಂಟ್‌ನಲ್ಲಿ ರನ್ನರ್ಸ್-ಅಪ್‌ಗೆ ತೃಪ್ತಿಪಟ್ಟುಕೊಂಡಿದ್ದಾರೆ. ಕಳೆದ ವರ್ಷ ರಿಯೋ ಒಲಿಂಪಿಕ್ಸ್ ಹಾಗೂ ಈ ವರ್ಷದ ಗ್ಲಾಸ್ಗೊ ವಿಶ್ವ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಎಡವಿದ್ದರು.

ಈ ಋತುವಿನಲ್ಲಿ ನಾಲ್ಕನೇ ಫೈನಲ್ ಪಂದ್ಯವನ್ನು ಆಡಿದ ಸಿಂಧು ಪಂದ್ಯದ ಮೊದಲ ಗೇಮ್‌ನ್ನು 23 ನಿಮಿಷಗಳಲ್ಲಿ ಗೆದ್ದುಕೊಂಡರು. ಎರಡನೇ ಗೇಮ್‌ನಲ್ಲಿ 5-0 ಮುನ್ನಡೆ ಪಡೆದರು. ತಕ್ಷಣವೇ ತಿರುಗೇಟು ನೀಡಿದ ಜಪಾನ್ ಆಟಗಾರ್ತಿ 6-2 ರಿಂದ ಮುನ್ನಡೆ ಪಡೆದರು. ಸಿಂಧು ಹಲವು ಬಾರಿ ಅನಗತ್ಯ ತಪ್ಪೆಸಗಿದ ಕಾರಣ ಯಮಗುಚಿ ಮೇಲುಗೈ ಸಾಧಿಸಿದರು. ಅಂತಿಮವಾಗಿ 21-12 ರಿಂದ ಜಯ ಸಾಧಿಸಿ ಸಮಬಲ ಸಾಧಿಸಿದರು.

ಮೂರನೇ ಹಾಗೂ ನಿರ್ಣಾಯಕ ಪಂದ್ಯದಲ್ಲಿ ಸಿಂಧು 4-0 ಮುನ್ನಡೆ ಪಡೆದರು. ಯಮಗುಚಿ ಮತ್ತೊಮ್ಮೆ ತಿರುಗೇಟು ನೀಡಿ 5-5 ರಿಂದ ಸಮಬಲಗೊಳಿಸಿದರು. ಸಿಂಧು ಒಂದುಹಂತದಲ್ಲಿ 9-7 ಮುನ್ನಡೆಯಲ್ಲಿದ್ದರು. ಪಂದ್ಯ 13-12ರಲ್ಲಿದ್ದಾಗ ಸಿಂಧು ಮತ್ತೊಮ್ಮೆ ಮುಗ್ಗರಿಸಿ ಯಮಗುಚಿ ತಿರುಗಿಬೀಳಲು ಅವಕಾಶ ನೀಡಿದರು. ಯಮಗುಚಿ ಕ್ಷಿಪ್ರವಾಗಿ 2 ಅಂಕ ಗಳಿಸಿ ಅಂಕವನ್ನು 15-15ಕ್ಕೆ ತಲುಪಿಸಿದರು. ಅಂತಿಮವಾಗಿ ಯಮಗುಚಿ 21-19 ಅಂತರದಿಂದ ನಿರ್ಣಾಯಕ ಗೇಮ್‌ನ್ನು ಗೆದ್ದುಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News